ADVERTISEMENT

ಕೈಕೊಟ್ಟ ಮಳೆ: ಬೆಳೆ ನಷ್ಟದ ಆತಂಕ

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 5:25 IST
Last Updated 11 ಜೂನ್ 2011, 5:25 IST

ಅರಸೀಕೆರೆ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಯಾಗುತ್ತಿದ್ದರೂ, ಬಯಲು ಸೀಮೆಯಾಗಿರುವ ಅರಸೀಕೆರೆ ತಾಲ್ಲೂಕಿನಲ್ಲಿ ವರುಣನ ಕೃಪೆ ಇಲ್ಲ.

ತಾಲ್ಲೂಕಿನಲ್ಲಿ ಮಳೆ ಕೈಕೊಟ್ಟಿರುವುದರಿಂದ ಬಿತ್ತನೆ ಮಾಡಿರುವ ಮುಂಗಾರು ಬೆಳೆಗಳಾದ ಹೆಸರು, ಎಳ್ಳು, ಉದ್ದು, ಜೋಳ, ಹರಳು ಬೆಳೆ ನಷ್ಟವಾಗುವ ಆತಂಕ ಎದುರಾಗಿದೆ.

ಹದಿನೈದು ದಿನಗಳಿಂದ ಮಳೆ ಬಾರದೇ ಹಸಿರಿನಿಂದ ನಳನಳಿಸುತ್ತಿದ್ದ ಮುಂಗಾರು ಪೈರು ಬಾಡುತ್ತಿದೆ. ನಿತ್ಯ ರೈತರು ಮಳೆಗಾಗಿ ಆಗಸದತ್ತ ಮುಖ ಮಾಡಿದ್ದಾರೆ. ಹೊಲದಲ್ಲಿ ಕಳೆ ಕೀಳಲು ಹಾಗೂ ಗೊಬ್ಬರ ಹಾಕಲು ಮಳೆ ಅತ್ಯವಶ್ಯ.

ತಾಲ್ಲೂಕಿನ ಕೆಲವು ಕಡೆ ರೈತ ಸಮುದಾಯ ದೇವರ ಮೊರೆ ಹೋಗಿದ್ದರೂ ವರುಣನ ದೇವ ಕೃಪೆ ತೋರಿಲ್ಲ.
ಈಗ ಮಳೆ ಕೈಕೊಟ್ಟರಂತೂ ತಾಲ್ಲೂಕಿನ ಕೃಷಿ ಚಟುವಟಿಕೆ ಮೇಲೆ ಭಾರೀ ಹೊಡೆತ ಬೀಳಲಿದೆ.

ಈಗ ಹೆಸರು, ಉದ್ದು, ಎಳ್ಳು ಹೂವು ಕಟ್ಟುವ ಕಾಲವಾದ್ದರಿಂದ ಭೂಮಿಯಲ್ಲಿ ತೇವಾಂಶ ಬಹಳ ಮುಖ್ಯ.
ಈ ಅವಧಿಯಲ್ಲೇ ಮಳೆ ಕೈಕೊಟ್ಟಿರುವುದರಿಂದ ಬೆಳೆ ಇಳುವರಿ ಮೇಲೆ ಪರಿಣಾಮ ಬೀರಲಿದೆ. ಈ ವಾರದಲ್ಲಿ ಮಳೆ ಬೀಳದಿದ್ದರೆ ರೈತರು ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ.

ತಾಲ್ಲೂಕಿನಲ್ಲಿ ಬಹುತೇಕ ಕೆರೆ-ಕಟ್ಟೆ ಹಾಗೂ ಹಳ್ಳಗಳಲ್ಲಿ ನೀರಿಲ್ಲ. ಕೆರೆ ಕಟ್ಟೆಗಳ ಒಡಲುಗಳಂತೂ ನೀರಿಲ್ಲದೆ ಭಣಗುಡುತ್ತಿವೆ.

ಮುಂದಿನ  ದಿನಗಳಲ್ಲಿ ಕುಡಿಯುವ ನೀರಿನ ತೀವ್ರ ಕೊರೆತಯುಂಟಾಗುವ ಭೀತಿಯುಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.