ADVERTISEMENT

ಕೊಲೆ, ಮನೆ ಕಳವು: 11 ಮಂದಿ ಬಂಧನ

₹ 4.50 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್‌ ವಶ

​ಪ್ರಜಾವಾಣಿ ವಾರ್ತೆ
Published 19 ಮೇ 2018, 11:15 IST
Last Updated 19 ಮೇ 2018, 11:15 IST
ಹಾಸನ ನಗರ ಪೊಲೀಸರು ಸರಗಳ್ಳರು, ಮನೆಗಳ್ಳತನ ಹಾಗೂ ಕೊಲೆ ಆರೋಪಿಗಳನ್ನು ಬಂಧಿಸಿರುವುದು
ಹಾಸನ ನಗರ ಪೊಲೀಸರು ಸರಗಳ್ಳರು, ಮನೆಗಳ್ಳತನ ಹಾಗೂ ಕೊಲೆ ಆರೋಪಿಗಳನ್ನು ಬಂಧಿಸಿರುವುದು   

ಹಾಸನ: ನಗರದ ವಿವಿಧೆಡೆ ಮಹಿಳೆ ಯರ ಚಿನ್ನದ ಸರ ಕಳವು, ಮನೆಗಳ್ಳತನ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ 11 ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ನಾಲ್ಕು ಪ್ರಕರಣಗಳನ್ನು ಭೇದಿಸಿ, ಬಂಧಿತರಿಂದ ₹ 4.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಕಾರು, ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ 1:  ಗೌರಿಕೊಪ್ಪಲಿನ ಎರಡು ಕಡೆ ಮಹಿಳೆಯರ ಸರ ಅಪಹರಣ ಹಾಗೂ ಜಯನಗರದ ಪಿ.ಜಿಗೆ ನುಗ್ಗಿ ಕೆ.ಎಂ.ಅಭಿಷೇಕ್‌ ಎಂಬುವರ ಚೈನ್‌ ಕಿತ್ತುಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ₹ 1.10 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿ ಕೊಳ್ಳಲಾಗಿದೆ. ಚನ್ನರಾಯಪಟ್ಟಣ ತಾಲ್ಲೂಕು ಉದಯಪುರದ ರೋಹಿತ್‌, ಬೆಂಗಳೂರಿನ ಶರತ್‌ ಪೊಲೀಸರಿಗೆ ಸೆರೆ ಸಿಕ್ಕಿದ್ದು, ಹಾಸನದ ಆಡುವಳ್ಳಿ ನಿವಾಸಿ ಅರವಿಂದ ತಲೆ ಮರೆಸಿಕೊಂಡಿದ್ದಾನೆ.

ADVERTISEMENT

ಗೌರಿ ಕೊಪ್ಪಲಿನಲ್ಲಿ ಬೈಕ್‌ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇವರು ಮಹಿಳೆಯರ ಸರಗಳ್ಳತನ ಮಾಡಿ ಪರಾರಿಯಾಗಿದ್ದರು. ಈ ಕುರಿತು ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ 2: ಮೇ 11ರಂದು ಟಿಪ್ಪು ನಗರದ ಸಯ್ಯದ್‌ ಖಿಜರ್‌ ಎಂಬುವವರ ಮನೆ ಬೀಗ ಮುರಿದು 80 ಗ್ರಾಂ ಚಿನ್ನ, 19 ಗ್ರಾಂ ಬೆಳ್ಳಿ ಹಾಗೂ ₹ 1.60 ಲಕ್ಷ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿರ್‌ ಮೊಹಲ್ಲಾ ನಿವಾಸಿ ನ್ಯಾಮತ್‌ ಅಲಿ ಎಂಬಾತನನ್ನು ಬಂಧಿಸಲಾಗಿದೆ. ಈ ಸಂಬಂಧ ಪೆನ್ಷನ್‌ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ 3: ತಣ್ಣೀರುಹಳ್ಳ ವೃತ್ತದಲ್ಲಿ ಮೇ 13ರಂದು ಆರು ಜನರ ಮೇಲೆ ಹಲ್ಲೆ ನಡೆಸಿ ₹ 87,500 ಮೌಲ್ಯದ 35 ಗ್ರಾಂ ಚಿನ್ನದ ಸರ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಮೈಸೂರಿನ ಚಂದ್ರಶೇಖರ್‌ ಎಂಬುವರು ಐವರು ಸ್ನೇಹಿತರೊಂದಿಗೆ ಚಿಕ್ಕಮಗಳೂರಿನಲ್ಲಿ ಮದುವೆ ಮುಗಿಸಿ ಕೊಂಡು ಟೆಂಪೊ ಟ್ರಾವಲರ್‌ ವಾಹನ ದಲ್ಲಿ ಬರುತ್ತಿದ್ದರು. ತಣ್ಣೀರುಹಳ್ಳ ವೃತ್ತ ದಲ್ಲಿ ವಾಹನ ಅಡ್ಡಗಟ್ಟಿದ ಆರೋಪಿಗಳು ವಾಹನದಲ್ಲಿದ್ದವರ ಮೇಲೆ ಹಲ್ಲೆ ನಡೆಸಿ ಚಂದ್ರಶೇಖರ್‌ ಅವರ ಕೊರಳಲ್ಲಿದ್ದ ಚಿನ್ನದ ಸರ ಅಪಹರಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಸಿದ್ದಯ್ಯ ನಗರದ ಜಗದೀಶ್‌, ಕೊಕ್ಕನಘಟ್ಟ ನಿವಾಸಿ ದಿವಾಕರ, ಆಡುವಳ್ಳಿ ಎಚ್‌.ಕೆ.ಸೋಮಶೇಖರ್‌, ಬಂಬೂಬಜಾರ್‌ನ ಚೇತನ್‌ ಹಾಗೂ ಆಲೂರಿನ ಶ್ರೀಕಾಂತ್‌ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣ 4: ಹಣಕಾಸು ವಿಚಾರದಲ್ಲಿ ವೈಷಮ್ಯ ಉಂಟಾಗಿ ಸ್ನೇಹಿತನ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಅದರಲ್ಲಿ ಒಬ್ಬ ತಲೆ ಮರೆಸಿಕೊಂಡಿದ್ದಾನೆ.

ನಗರದ ಸಂತೇಪೇಟೆ ಉಷಾ ಬಾರ್ ಹಿಂಭಾಗ ಮೇ 13ರ ರಾತ್ರಿ ಬಿಯರ್ ಬಾಟಲಿ ಮತ್ತು ದೊಣ್ಣೆಯಿಂದ ಹೊಡೆದು ಮಧು (32) ಎಂಬುವರನ್ನು ಹತ್ಯೆ ಮಾಡಲಾಗಿತ್ತು.

ವಲ್ಲಭಭಾಯಿ ರಸ್ತೆ ನಿವಾಸಿಗಳಾದ ಲೋಕೇಶ್‌, ದಿಲೀಪ್‌, ಮದನ್‌ ಎಂಬುವರನ್ನು ವಶಕ್ಕೆ ಪಡೆದಿದ್ದು, ಮತ್ತೊಬ್ಬ ಆರೋಪಿ ಭರತ್‌ ತಲೆ ಮರೆಸಿಕೊಂಡಿದ್ದಾರೆ. ಈ ಕುರಿತು ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಪಿಐ ಸತ್ಯನಾರಾಯಣ, ಎಸ್‌.ಐಗಳಾದ ಹರೀಶ್‌, ಸುರೇಶ್‌ ಬೋಪಣ್ಣ, ಸಿಬ್ಬಂದಿ ಕೇಶವಪ್ರಸಾದ್‌, ರಘು, ಸೋಮಶೇಖರ್, ಪ್ರವೀಣ, ಪ್ರದೀಪ್‌, ಪುಟ್ಟಸ್ವಾಮಿ, ಜಮೀಲ್‌ ಅಹ್ಮದ್‌, ಪ್ರಸನ್ನ, ಮಲ್ಲಿಕಾರ್ಜುನ, ಶಿವಣ್ಣ, ರವಿಕುಮಾರ್‌ ಶ್ರಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.