ADVERTISEMENT

ಕೊಳವೆ ಬಾವಿಗಳಲ್ಲಿ ಫ್ಲೋರೈಡ್ ಅಂಶ ಪತ್ತೆ: ಶಾಸಕ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2011, 10:00 IST
Last Updated 13 ಆಗಸ್ಟ್ 2011, 10:00 IST
ಕೊಳವೆ ಬಾವಿಗಳಲ್ಲಿ ಫ್ಲೋರೈಡ್ ಅಂಶ ಪತ್ತೆ: ಶಾಸಕ
ಕೊಳವೆ ಬಾವಿಗಳಲ್ಲಿ ಫ್ಲೋರೈಡ್ ಅಂಶ ಪತ್ತೆ: ಶಾಸಕ   

ಸಕಲೇಶಪುರ: ತಾಲ್ಲೂಕಿನಲ್ಲಿ ಸುಮಾರು 100 ಕೊಳವೆ ಬಾವಿಗಳಲ್ಲಿ ಫ್ಲೋರೈಡ್ ಅಂಶ ಪತ್ತೆಯಾಗಿದೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದರು.

ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ತ್ರೈಮಾಸಿಕ ಸಭೆಯಲ್ಲಿ ಮಾತ ನಾಡಿದ ಅವರು, ಇದೇ ಮೊದಲ ಬಾರಿಗೆ ತಾಲ್ಲೂಕಿನಲ್ಲಿ ಫ್ಲೋರೈಡ್ ಅಂಶ ಪತ್ತೆಯಾಗಿರುವುದು ಆತಂಕ ಹುಟ್ಟಿಸಿದೆ. ಅಂತಹ ಗ್ರಾಮಗಳಿಗೆ ವಿಶೇಷ ಕುಡಿಯುವ ನೀರು ಪೂರೈಸಲು ಜಿ.ಪಂ. ವತಿಯಿಂದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಐಎಂಐಎಸ್ ಯೋಜನೆಯಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ತಾಲ್ಲೂಕಿಗೆ 3.80 ಲಕ್ಷ ರೂಪಾಯಿ ಹಣ ಬಿಡುಗಡೆಯಾಗಿದೆ. ಶೀಘ್ರದಲ್ಲಿ ಸಂಬಂಧಪಟ್ಟ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಅಂಗವಿಕಲರಿಗೆ ಆಧಾರ್ ಯೋಜನೆ ಅಡಿಯಲ್ಲಿ ಇಡೀ ಜಿಲ್ಲೆಗೆ ಕೇವಲ ಇಬ್ಬರು ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡುವ ಮೂಲಕ ರಾಜ್ಯ ಸರ್ಕಾರ ಅಂಗವಿಕಲರಿಗೆ ಅನ್ಯಾಯ ಮಾಡಲಾಗಿದೆ.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಗಳಾಗಿದ್ದ ಅವಧಿಯಲ್ಲಿ ಪ್ರತಿ ಜಿಲ್ಲೆಗೆ 25 ರಿಂದ 30 ಮಂದಿ ಅಂಗವಿಕಲರಿಗೆ ಆಧಾರ್ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ನೀಡಲಾಗಿತ್ತು. 2010-11ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಜಿಲ್ಲೆಗೆ ಒಂದೂ ರೂಪಾಯಿ ಹಣ ನೀಡಿಲ್ಲ ಎಂದು ಆರೋಪಿಸಿದರು.

ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮದಲ್ಲಿ ಮುರಾರ್ಜಿ ಶಾಲೆ ನಿರ್ಮಾಣಕ್ಕೆ 7 ಎಕರೆ ಜಮೀನು ಮಂಜೂರಾಗಿದ್ದು, ಅಲ್ಲಿ ಕಟ್ಟಡ ನಿರ್ಮಾಣ ಮಾಡಲು ಸರ್ಕಾರ 4 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಶೀಘ್ರದಲ್ಲಿ ಗುದ್ದಲಿ ಪೂಜೆ ನಡೆಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.  ತಾಲ್ಲೂಕಿನಲ್ಲಿ ಸುವರ್ಣ ಭೂಮಿ ಯೋಜನೆ ಅಡಿಯಲ್ಲಿ ಒಟ್ಟು 1170 ಅರ್ಜಿ ಬಂದಿದ್ದು, ಇವುಗಳಲ್ಲಿ 1123 ಮಂದಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡು ಈಗಾಗಲೆ ತಲಾ 5ಸಾವಿರ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿ ನಿಯೋಗ ಹೋಗಿದ್ದರ ಪರಿಣಾಮ, ತಾಲ್ಲೂಕಿನ ಹಲವು ಯೋಜನೆಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಬೇಲೂರು- ಸೋಮವಾರಪೇಟೆ ರಸ್ತೆ, ಬೇಲೂರು-ಬಾಗೆ- ಕೊಡ್ಲಿಪೇಟೆ ರಸ್ತೆ, ಬಿಸಿಲೆ-ವಣಗೂರು- ಹೆತ್ತೂರು-ಉಚ್ಚಂಗಿ ಒಟ್ಟು 40 ಕಿ.ಮೀ. ವೀರಾಜಪೇಟೆ ಬೈಂದೂರು ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಸರ್ವೆ ಕಾಮಗಾರಿ ಕೈಗೆತ್ತಿಕೊಳ್ಳ ಲಾಗಿದೆ. ವಂಣಗೂರು-ಹೆತ್ತೂರು-ಕಣತ್ತೂರು ಕಾಲೇಜು ಕಟ್ಟಡಕ್ಕೆ ಪೂರ್ಣ ಹಣ ಬಿಡುಗಡೆಗೆ ಸರ್ಕಾರ ಮುಂದಾಗಿದೆ.

ಜೆಡಿ(ಎಸ್) ಸರ್ಕಾರದಲ್ಲಿ ಅನುಮೋದನೆ ಗೊಂಡಿದ್ದ 19 ಸೇತುವೆಗಳಲ್ಲಿ 5 ಸೇತುವೆಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಉಳಿದ 11 ಸೇತುವೆಗಳಲ್ಲಿ  6 ಸೇತುವೆಗಳನ್ನು ಕೆ ಆರ್‌ಡಿಸಿಎಲ್, ಐದು ಪಿಡಬ್ಲೂಡಿ ಇಲಾಖೆ ವತಿಯಿಂದ ನಿರ್ಮಾಣ ಮಾಡಲು ಸರ್ಕಾರ ಆದೇಶಿಸಿದೆ ಎಂದರು. ಸಭೆಯಲ್ಲಿ ಜಿ.ಪಂ. ಸದಸ್ಯರಾದ ಬೈರಮುಡಿ ಚಂದ್ರು, ಮಂಜಮ್ಮ ತಿಪ್ಪೇಸ್ವಾಮಿ, ಸುಲೋ ಚನಾ ರಾಮಕೃಷ್ಣ, ತಾ.ಪಂ.ಅಧ್ಯಕ್ಷೆ ವೇದಾವತಿ, ಉಪಾಧ್ಯಕ್ಷ ಹೆಗ್ಗೋವೆ ಗೋಪಾಲಸ್ವಾಮಿ, ತಾ.ಪಂ. ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ತಾ.ಪಂ. ಇ ಓ ಸಿದ್ದರಾಜು, ಸ್ವಸಹಾಯ ಸಂಘಗಳ ತಾಲ್ಲೂಕು ಸಂಯೋಜಕ ರೇಣುಕಾಪ್ರಸಾದ್ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.