ADVERTISEMENT

ಕೊಳೆಗೇರಿಗಳ ಸ್ವಚ್ಛತೆ ಯಾವಾಗ?

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2013, 8:27 IST
Last Updated 30 ಸೆಪ್ಟೆಂಬರ್ 2013, 8:27 IST
ಹಾಸನದ ದುರ್ಗಾಂಬ ದೇವಸ್ಥಾನ ರಸ್ತೆಯಲ್ಲಿರುವ ಕೊಳೆಗೇರಿಯ ದೃಶ್ಯ.
ಹಾಸನದ ದುರ್ಗಾಂಬ ದೇವಸ್ಥಾನ ರಸ್ತೆಯಲ್ಲಿರುವ ಕೊಳೆಗೇರಿಯ ದೃಶ್ಯ.   

ಹಾಸನ: ಪ್ರತಿಷ್ಠಿತ ಜನರು ವಾಸಿಸುವ ಬಡಾವಣೆಗಳಲ್ಲಿ ನಿಗದಿತ ದಿನಗಳಂದು ನೀರು ಬಾರದಿದ್ದಾಗ, ಬೀದಿದೀಪ ಉರಿಯದಿದ್ದಾಗ ದೊಡ್ಡ ಸುದ್ದಿಯಾಗುತ್ತದೆ. ಕೆಲವು ಸಂದರ್ಭಗಳಲ್ಲಿ ನಗರಸಭೆಯಲ್ಲೂ ಚರ್ಚೆಯಾಗುತ್ತದೆ. ಆದರೆ, ನಗರದ ಕೊಳಚೆ ಪ್ರದೇಶಗಳ ಜನ ಚರಂಡಿ ಒಳಗೆ ಹುದುಗಿ ಹೋಗಿರುವ ನಲ್ಲಿಗಳಲ್ಲಿ ನೀರು ಬಂದಾಗ ಹಿಡಿದುಕೊಳ್ಳಬೇಕು. ಬೀದಿದೀಪ, ರಸ್ತೆ ಸೌಲಭ್ಯಗಳ ಬಗ್ಗೆ ಕೇಳುವಷ್ಟು ಧ್ವನಿಯೂ ಇಲ್ಲ.

ಮಳೆ ಬೆಳೆ ಚೆನ್ನಾಗಿ ಆಗುವ, ಅಪಾರ ಪ್ರಕೃತಿ ಸಂಪತ್ತು ಹೊಂದಿರುವ ಹಾಸನದಂಥ ‘ಸಮೃದ್ಧ’ ಜಿಲ್ಲೆಯಲ್ಲೂ 103 ಕೊಳೆಗೇರಿಗಳಿವೆ ಎನ್ನುವುದೇ ಬೇಸರದ ವಿಚಾರ. ಜಿಲ್ಲೆಯ ಒಟ್ಟಾರೆ 34,750 ಕುಟುಂಬಗಳು ಕೊಳೆಗೇರಿಯಲ್ಲಿ ವಾಸಿಸುತ್ತಿವೆ. ಅವುಗಳಲ್ಲಿ 20,466 ಕಟುಂಬಗಳು ಘೋಷಿತ ಕೊಳೆಗೇರಿಯಲ್ಲಿದ್ದರೆ ಉಳಿದ ಕಟುಂಬದವರು ವಾಸಿಸುವ ಪ್ರದೇಶವನ್ನು ಕೊಳೆಗೇರಿ ಎಂದು ಗುರುತಿಸಿದ್ದರೂ ಇನ್ನೂ ಕೊಳೆಗೇರಿ ಎಂದು ಘೋಷಿಸಿಲ್ಲ. ಅಂದರೆ, ಕೊಳಚೆ ನಿರ್ಮೂಲನಾ ಮಂಡಳಿಯವರು ಇಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಆಗುವುದಿಲ್ಲ.

ಹಾಸನ ನಗರಕ್ಕೆ ಬಂದರೆ, 1.5 ಲಕ್ಷ ಜನಸಂಖ್ಯೆಯ, ಅಷ್ಟೇನೂ ದೊಡ್ಡದಲ್ಲದ ಈ ನಗರದಲ್ಲಿ 32 ಕೊಳೆಗೇರಿಗಳಿವೆ. ಅವುಗಳಲ್ಲಿ 25 ಘೋಷಿತ ಮತ್ತು ಏಳು ಕೊಳೆಗೇರಿಗಳನ್ನು ಈಗ ಗುರುತಿಸಿದ್ದರೂ ಇನ್ನೂ ಘೋಷಣೆ ಆಗಿಲ್ಲ. ನಗರದಲ್ಲಿ ಒಟ್ಟಾರೆ  6,779 ಕುಟುಂಬಗಳು ಕೊಳೆಗೇರಿಯಲ್ಲಿ ಜೀವನ ಸಾಗಿಸುತ್ತಿವೆ.

ಇದು ಕಾನೂನು ಪ್ರಕಾರ ಕೊಳೆಗೇರಿಯಲ್ಲಿ ಬರುವ ಕುಟುಂಬಗಳು. ಆದರೆ, ಒಮ್ಮೆ ಹಳೆಯ ಹಾಸನದಲ್ಲಿ ಸುತ್ತಾಡಿ ಬಂದರೆ ಬೇರೆಯೇ ಚಿತ್ರಣ ಲಭಿಸುತ್ತದೆ. ಇಡೀ ಭಾಗವೇ ಕೊಳೆಗೇರಿಯಂತಾಗಿದೆ. ತೆರೆದ ಸ್ಥಿತಿಯಲ್ಲಿದ್ದು, ಸದಾ ದುರ್ನಾತ ಬೀರುವ ಚರಂಡಿಗಳು, ಗುಂಡಿ ಬಿದ್ದ ರಸ್ತೆಗಳು... ಸಮಸ್ಯೆ ಹೇಳುತ್ತ ಹೋದರೆ ಮುಗಿಯದಷ್ಟಿವೆ.

ಹಾಸನ ಉಪ ಕಾರಾಗೃಹದ ಹಿಂಭಾಗದಲ್ಲಿರುವ ಶ್ರೀನಗರ ಹಾಸನದ ದೊಡ್ಡ ಕೊಳಚೆ ಪ್ರದೇಶಗಳಲ್ಲೊಂದು. ಮಂಡಳಿಯ ಪ್ರಕಾರ ಇಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿದ್ದರೂ, ನಿವಾಸಿಗಳಿಗೆ ನೆಮ್ಮದಿ ಇಲ್ಲದಂತಾಗಿದೆ.

‘ನಮಗೆ ಕನಿಷ್ಠ ಉಸಿರಾಡಲು ಶುದ್ಧ ಗಾಳಿಯನ್ನಾದರೂ ಕೊಡಿ’ ಎಂದು ಕಳೆದ ವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಲ್ಲಿಯ ಜನರು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಕಾರಣವೆಂದರೆ, ನಗರದ ಇಡೀ ಕಸವನ್ನು ತಂದು ಈ ಪ್ರದೇಶದ ಪಕ್ಕದಲ್ಲಿ ಸುರಿಯಲಾಗುತ್ತಿದೆ. ವರ್ಷದ 365 ದಿನವೂ ಆ ದುರ್ನಾತದಲ್ಲೇ ಇಲ್ಲಿಯ ಜನರು ಬದುಕಬೇಕು.

ಮಂಡಳಿಯ ಪ್ರಕಾರ ಘೋಷಣೆ ಆದ ಮತ್ತು ಆಗದ ಪ್ರದೇಶಗಳೆಂಬ ವಿಂಗಡಣೆ ಇದ್ದರೂ, ಕೊಳಚೆ ಪ್ರದೇಶದಲ್ಲಿ ಬದುಕುವ ಜನರ ಸ್ಥಿತಿಯಲ್ಲಿ ಅಂಥ ವ್ಯತ್ಯಾಸವೇನೂ ಗೋಚರಿಸುತ್ತಿಲ್ಲ. ಸ್ವಲ್ಪ ಮಟ್ಟಿಗೆ ದುಡ್ಡು ಕಾಸು ಸಂಪಾದಿಸಿದವರು ಹಳೆಯ ಗುಡಿಸಲುಗಳನ್ನು ಕೆಡವಿ ಅಲ್ಲಿಯೇ ಕಾಂಕ್ರೀಟ್‌ ಮನೆಗಳನ್ನು ನಿರ್ಮಿಸಿದ್ದಾರೆ ಎಂಬುದು ಬಿಟ್ಟರೆ ನೀರು, ರಸ್ತೆ ಮುಂತಾದ ಮೂಲ ಸೌಲಭ್ಯಗಳಿಂದ ಅವರೂ ವಂಚಿತರಾಗಿದ್ದಾರೆ. ಕೊಳಚೆ ನಿರ್ಮೂಲನಾ ಮಂಡಳಿಗೆ ಸ್ವಲ್ಪ ಶಕ್ತಿ ತುಂಬುವ ಕೆಲಸವಾದರೆ ಮಾತ್ರ ಕೊಳಚೆ ನಿರ್ಮೂಲನೆ ಸಾಧ್ಯ ಎಂಬುದು ಇಲ್ಲಿನ ನಿವಾಸಿಗಳ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.