ADVERTISEMENT

ಕ್ರ್ಯೂಸರ್ ಪಲ್ಟಿ: ಮೃತರ ಸಂಖ್ಯೆ 6

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 5:10 IST
Last Updated 9 ಅಕ್ಟೋಬರ್ 2011, 5:10 IST

ಚನ್ನರಾಯಪಟ್ಟಣ: ಅರಸೀಕೆರೆ ರಸ್ತೆಯ ಸಾತೇನಹಳ್ಳಿ ಬಳಿ ಶುಕ್ರವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿದೆ.

ಅವಗಢದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗುಳ್ಳಹಳ್ಳಿ ಗ್ರಾಮದ ಚನ್ನಮ್ಮ(40) ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟರು. ಮತ್ತೊಬ್ಬ ಗಾಯಾಳು ಮಂಡ್ಯ ಜಿಲ್ಲೆ ಲೋಕಸರ ಗ್ರಾಮದ ಪುಟ್ಟಮಾದಯ್ಯ (55) ಬೆಂಗಳೂರಿನ ಆಸ್ಪತ್ರೆಯಿಂದ ಶನಿವಾರ ಸಂಜೆ ಮಂಡ್ಯಕ್ಕೆ ಕರೆತರುತ್ತಿದ್ದಾಗ ಮೃತಪಟ್ಟಿದ್ದಾರೆ.

ಶುಕ್ರವಾರ ರಾತ್ರಿ ಕಡೂರು ತಾಲ್ಲೂಕು ಯಗಟಿಪುರದಲ್ಲಿರುವ ಮನೆ ದೇವರು ಮಲ್ಲಿಕಾರ್ಜುನ ಸ್ವಾಮಿ, ಹೊಸದುರ್ಗ ತಾಲ್ಲೂಕಿನಲ್ಲಿರುವ ಹಾಲು ರಾಮೇಶ್ವರ ದೇವರ ದರ್ಶನ ಮುಗಿಸಿಕೊಂಡು ರಾತ್ರಿ ವಾಪಸಾಗುತ್ತಿದ್ದಾಗ ಚಾಲಕನ ಅತಿ ವೇಗ, ಅಜಾಗರೂಕತೆಯಿಂದ ರಸ್ತೆ ತಿರುವಿನಲ್ಲಿ ಘಟನೆ ನಡೆದಿದೆ.

ವೇಗವಾಗಿ ಬರುತ್ತಿದ್ದ ಕ್ರ್ಯೂಸರ್ ವಾಹನ ಮುಂದಿರುವ ರಸ್ತೆ ತಿರುವು ಗಮನಿಸದೇ  ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದಲ್ಲಿ ಮೂರು ಪಲ್ಟಿ ಹೊಡೆದು 50 ಅಡಿ ದೂರದಲ್ಲಿ ಉರುಳಿ ಬಿದ್ದಿದೆ. ಸರ್ವಮಂಗಳ, ಅಶ್ವಿನಿ, ಚಂದ್ರಶೇಖರಯ್ಯ, ಲೋಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಾಲಕ ನಾಪತ್ತೆಯಾಗಿದ್ದಾನೆ. ಗಾಯಾಳುಗಳನ್ನು ಚನ್ನರಾಯಪಟ್ಟಣ, ಹಾಸನದ ಆಸ್ಪತ್ರೆಗೆ ದಾಖಲಿಸಲಾಯಿತು. ಎಸ್ಪಿ ಅಮಿತ್‌ಸಿಂಗ್, ಡಿವೈಎಸ್ಪಿ ಕೆ.ಪರಶುರಾಂ, ಇನ್ಸ್‌ಪೆಕ್ಟರ್ ಎ. ಮಾರಪ್ಪ ಅವರು ಶುಕ್ರವಾರ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಶಾಸಕ ಸಿ.ಎಸ್. ಪುಟ್ಟೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ಜಿ.ಪಂ. ಮಾಜಿ ಉಪಾಧ್ಯಕ್ಷ ಎಚ್.ಎಸ್. ವಿಜಯಕುಮಾರ್, ತಹಶೀಲ್ದಾರ್ ಬಿ.ಎನ್. ವರಪ್ರಸಾದರೆಡ್ಡಿ ,ಜಿ.ಪಂ. ಸದಸ್ಯ ಎನ್.ಡಿ. ಕಿಶೋರ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷರು  ಶನಿವಾರ ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ್ದರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಶಿವಾನಂದ್, ಹಾಸನ ಆಸ್ಪತ್ರೆಯಲ್ಲಿ, ಗೌರಿಶಂಕರ್, ನಿತ್ಯಾನಂದ, ಆಶಾ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಸಕರ ನಿಧಿಯಿಂದ ಪರಿಹಾರ:       ಘಟನೆಯಲ್ಲಿ ಮೃತರ ಕುಟುಂಬಕ್ಕೆ ಸ್ಥಳೀಯ ಶಾಸಕರ ನಿಧಿಯಿಂದ ತಲಾ ರೂ. 5 ಸಾವಿರ ಪರಿಹಾರವನ್ನು ಶಾಸಕ ಪುಟ್ಟೇಗೌಡ  ಶನಿವಾರ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.