ADVERTISEMENT

ಖಾಸಗಿ ಶಾಲೆಗಳ ತಂತ್ರಕ್ಕೆ ಶಿಕ್ಷಣ ಇಲಾಖೆ ಪ್ರತಿತಂತ್ರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 6:00 IST
Last Updated 20 ಜುಲೈ 2012, 6:00 IST

ಹಾಸನ: ತಮ್ಮ ಶಾಲೆಯ ಫಲಿತಾಂಶ ಉತ್ತಮವಾಗಿರಬೇಕು ಎಂಬ ಉದ್ದೇಶದಿಂದ ಕಲಿಕೆಯಲ್ಲಿ ಹಿಂದಿರುವ ಮಕ್ಕಳಿಗೆ 9ನೇ ತರಗತಿಯಲ್ಲಿ ಟಿ.ಸಿ. ಕೊಟ್ಟು ಕಳುಹಿಸುತ್ತಿದ್ದ ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಎಚ್ಚರಿಕೆ ಕಡಿವಾಣ ಹಾಕಿದೆ. ಯಾವುದೇ ಮಕ್ಕಳನ್ನು ಟಿ.ಸಿ. ಕೊಟ್ಟು ಕಳುಹಿಸಬಾರದು ಎಂದು ಇಲಾಖೆ ಖಾಸಗಿ ಶಾಲೆಗಳಿಗೆ ಸ್ಪಷ್ಟ ಸೂಚನೆ ನೀಡಿದೆ.

 ಶೇ ನೂರು ಫಲಿತಾಂಶ, ಗುಣಮಟ್ಟದ ಶಿಕ್ಷಣ... ಎಂದೆಲ್ಲ ಪಾಲಕ ರನ್ನು ಆಕರ್ಷಿಸಿ ಎಲ್.ಕೆ.ಜಿಯಿಂದಲೇ ಪೋಷಕರಿಂದ ಡೊನೇಶನ್, ದುಬಾರಿ ಶುಲ್ಕ ಪಡೆಯುತ್ತಿರುವ ನಗರದ ಅನೇಕ ಪ್ರತಿಷ್ಠಿತ ಶಾಲೆ ಗಳು ಕಲಿಕೆಯಲ್ಲಿ ಸ್ವಲ್ಪ ದುರ್ಬಲ ಎನಿಸಿದ ಮಕ್ಕಳನ್ನು ಒಂಬತ್ತನೇ ತರಗತಿಯಲ್ಲೇ ಫೇಲ್ ಮಾಡುವ ಸಂಪ್ರದಾಯ ಅನುಸರಿಸುತ್ತಿವೆ. 

 ಒಂಬತ್ತನೇ ತರಗತಿಯಲ್ಲಿ ಫೇಲ್ ಆದರೂ ಜೂನ್ ತಿಂಗಳ ಮೊದಲ ವಾರದಲ್ಲಿ ನಡೆಸುವ ಮರು ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಹತ್ತನೇ ತರಗತಿಗೆ ಹೋಗುವ ಅವಕಾಶವಿರುತ್ತದೆ. ಖಾಸಗಿ ಶಾಲೆಗಳು ಈ ಅವಕಾಶವನ್ನು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಶಾಲೆ ಯಿಂದ ಸಾಗ ಹಾಕಲು ಬಳಸುತ್ತವೆ ಎಂಬುದು ಪೋಷಕರ ಆತಂಕವಾಗಿತ್ತು.

 9ನೇ ತರಗತಿಯಲ್ಲಿ ಫೇಲಾದ ಮಕ್ಕಳ ಪೋಷಕರನ್ನು ಕರೆಸಿ ಟಿ.ಸಿ. ತೆಗೆದುಕೊಂಡು ಹೋಗುವುದಾದರೆ ಮರುಪರೀಕ್ಷೆಯಲ್ಲಿ ಪಾಸ್ ಮಾಡಿ ಕಳುಹಿಸುತ್ತೇವೆ ಎನ್ನುತ್ತಾರೆ. ಮಕ್ಕಳ ಒಂದು ವರ್ಷ ವ್ಯರ್ಥವಾಗುವುದು ಬೇಡ ಎಂಬ ಉದ್ದೇಶದಿಂದ ಪಾಲಕರು ಟಿ.ಸಿ. ತೆಗೆದುಕೊಂಡು  ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಕೊನೆಯ ಕ್ಷಣದಲ್ಲಿ ಮಕ್ಕಳನ್ನು ಹೊರದಬ್ಬಿ ಮಕ್ಕಳು ಮತ್ತು ಪಾಲಕರ ಮೇಲೆ ಮಾನಸಿಕ ಒತ್ತಡ ಉಂಟುಮಾಡುತ್ತಿವೆ. ಈ ಬಗ್ಗೆ ಅನೇಕ ಪೋಷಕರು ದೂರಿದ್ದಾರೆ.

ಇದನ್ನು ಅರಿತ ಶಿಕ್ಷಣ ಇಲಾಖೆ ಈ ಬಾರಿ ಯಾವುದೇ ಶಾಲೆಯಿಂದ ಮಕ್ಕಳಿಗೆ ಟಿ.ಸಿ. ಕೊಟ್ಟು ಹಳುಹಿಸಬಾರದು ಎಂದು ಸೂಚಿಸಿದೆ. ಒಂದು ವೇಳೆ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ ಎಂದೂ ತಿಳಿದುಬಂದಿದೆ.

`ನಮ್ಮ ಶಾಲೆಯಲ್ಲಿ ಪ್ರತಿವರ್ಷ ಇಂಥ ವಿದ್ಯಾರ್ಥಿಗಳದ್ದೇ ಒಂದು ಬ್ಯಾಚ್ ಆಗುತ್ತಿತ್ತು (30 ರಿಂದ 40 ಮಕ್ಕಳು). ನಗರದ ವಿವಿಧ ಪ್ರತಿಷ್ಠಿತ ಶಾಲೆಗಳಿಂದಲೇ ಇಂಥ ವಿದ್ಯಾರ್ಥಿಗಳು ಬರುತ್ತಿದ್ದರು. ಈ ವರ್ಷ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದರಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಆದರೂ ಬೇರೆ ಬೇರೆ ಮೂಲಗಳಿಂದ ಒತ್ತಡ ತಂದು  10 ಮಕ್ಕಳು ಸೇರಿದ್ದಾರೆ~ ಎಂದು ಹಾಸನದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಮುಖ್ಯ ಶಿಕ್ಷಕ ರಂಗಸ್ವಾಮಿ ತಿಳಿಸಿದ್ದಾರೆ.

ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ (ಪ್ರಧಾನ) ಈ ವರ್ಷ ಯಾರೂ ಸೇರ್ಪಡೆಯಾಗಿಲ್ಲ. ಆದರೆ 8 ರಿಂದ 10 ಬಾಲಕಿ ಯರು ಸೀಟ್ ಕೇಳಿಕೊಂಡು ಬಂದಿದ್ದರು. ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ವಿಭಜಿತದಲ್ಲಿ ಒಬ್ಬ ವಿದ್ಯಾರ್ಥಿನಿ ಬಂದಿದ್ದರೂ ಆಕೆ ಕಲಿಕೆಯಲ್ಲೂ ಮುಂದಿದ್ದಾಳೆ. ವಾಣಿ ವಿಲಾಸ ಹೈಸ್ಕೂಲ್‌ಗೆ  ಪ್ರತಿಷ್ಠಿತ ಸಂಸ್ಥೆಯೊಂದರಿಂದ ಒಬ್ಬ ವಿದ್ಯಾರ್ಥಿನಿ ಬಂದಿದ್ದರೂ ಅಂಥವರನ್ನು ಮರಳಿ ಅದೇ ಶಾಲೆಗೆ ಕಳುಹಸಿದ್ದೇವೆ ಎಂದು ಶಿಕ್ಷಕಿ ತಿಳಿಸಿದ್ದಾರೆ.

ನಗರದ ಇನ್ನೂ ಕೆಲವು ಶಾಲೆಗಳು ಇಂಥ ವಿದ್ಯಾರ್ಥಿಗಳನ್ನು ತಮ್ಮ ಶಾಲೆಯಿಂದ ಪರೀಕ್ಷೆಗೆ ಕೂಡಿಸದೆ ಬಾಹ್ಯ ವಿದ್ಯಾರ್ಥಿಗಳನ್ನಾಗಿ  ಹಾಜರು ಮಾಡುತ್ತಿವೆ. ಇಂಥ ಮಕ್ಕಳು ಪರೀಕ್ಷೆಗೆ ಬರುವಾಗ ಶಾಲೆಯ ಸಮವಸ್ತ್ರ ಹಾಕಿಕೊಂಡೇ ಬಂದಿರುತ್ತಾರೆ. ಈ ವರ್ಷ ಹೆಚ್ಚಿನ ಶಾಲೆಗಳು ಈ ದಾರಿ ಕಂಡುಕೊಳ್ಳುವ ಸಾಧ್ಯತೆ ಇರುವು ದರಿಂದ ಇದನ್ನು ತಡೆಯುವ ನಿಟ್ಟಿನಲ್ಲೂ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. `ಬಾಹ್ಯವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಸಾಮಾನ್ಯವಾಗಿ ಆಗಸ್ಟ್‌ನಿಂದಲೇ ಪ್ರಕ್ರಿಯೆ ಆರಂಭವಾಗುತ್ತದೆ.

ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು ಬಾಹ್ಯವಾಗಿ ಪರೀಕ್ಷೆ ಬರೆಯಿಸುವುದನ್ನು ತಡೆಯಲು ಈ ಬಾರಿ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಹಾಸನ ಕ್ಷೇತ್ರ ಶಿಕ್ಷಣಾಧಿಕಾರಿ  ಪುಟ್ಟರಾಜು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.