ADVERTISEMENT

ಗಂಡಸಿ ಕೆರೆ: ಗಿಡಗಂಟಿ ಕಾರುಬಾರು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 7:08 IST
Last Updated 19 ಡಿಸೆಂಬರ್ 2012, 7:08 IST

ಅರಸೀಕೆರೆ: ಬರಪೀಡಿತ ಪ್ರದೇಶ, ಜತೆಗೆ ಈ ಬಾರಿ ಮುಂಗಾರು, ಹಿಂಗಾರು ಮಳೆ ವೈಫಲ್ಯ, ಉರಿ ಬಿಸಿಲು... ಇವೆಲ್ಲ ಕಾರಣಗಳಿಂದ ತಾಲ್ಲೂಕಿನ ಗಂಡಸಿ ಗ್ರಾಮದ ದೊಡ್ಡಕೆರೆಯ ಒಡಲು ನೀರಿಲ್ಲದೆ ಬಣಗುಡುತ್ತಿದ್ದು, ಈ ಭಾಗದ ಜನರ ನಿದ್ದೆಗೆಡಿಸಿದೆ.

ಜಿಲ್ಲೆಯಲ್ಲಿ ಮೂರು ನದಿಗಳು ಹರಿದರೂ ನೀರಾವರಿಯಿಂದ ವಂಚಿತವಾಗಿರುವ ಅರಸೀಕೆರೆ ತಾಲ್ಲೂಕು ಮಳೆಯನ್ನೇ ಆಶ್ರಯಿಸಿದೆ. ಈ ಗ್ರಾಮದ ಶೇ 80 ರಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದಾರೆ.

ಎರಡು ದಶಕ ಹಿಂದಿನವರೆಗೂ ತುಂಬಿ ಕಂಗೊಳಿಸುತ್ತಿದ್ದ ಈ ಕೆರೆ ಕಳೆದ ಒಂದು ದಶಕದಿಂದ ಬರಿದಾಗಿದ್ದು, ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ತೊಂದರೆಯಾಗಿದೆ. ಈ ಭಾಗದಲ್ಲಿ ಅಂತರ್ಜಲ ಪಾತಾಳ ಕಂಡಿದ್ದು, ಸುಮಾರು 600 ರಿಂದ ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ.

ಇಲ್ಲಿನ ತೆಂಗಿನ ತೋಟಗಳು ತೇವಾಂಶ ಇಲ್ಲದೆ ಒಣಗಿ ಹೋಗುತ್ತಿವೆ.  ತೆಂಗು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದರಿಂದ ರೈತ ಸಮುದಾಯ ಇದನ್ನೇ ಅವಲಂಬಿಸಿದೆ.

ಗಂಡಸಿ ಗ್ರಾಮದ ದೊಡ್ಡ ಕೆರೆಯ ಅಚ್ಚುಕಟ್ಟು ಪ್ರದೇಶ 93.06 ಹೆಕ್ಟೇರ್ ಇದ್ದು, ವಿಸ್ತೀರ್ಣ 71. 81 ಹೆಕ್ಟೇರ್ ಇದೆ. ಅಲ್ಲದೆ ಕೆರೆಯ ಒಡಲು 41.62 ಎಂ.ಸಿಎಫ್‌ಟಿ ಸಾಮರ್ಥ್ಯ ಹೊಂದಿದೆ.

ಕೆರೆಯಲ್ಲಿ ಭಾರಿ ಪ್ರಮಾಣದಲ್ಲಿ ಹೂಳು ತುಂಬಿದ್ದು, ಜಾಲಿಗಿಡಗಳು ಬೆಳೆದು ನಿಂತಿವೆ. ಹೂಳೆತ್ತಲು ಸರ್ಕಾರ ಹಣ ನೀಡುತ್ತಿದ್ದರೂ ಈ ಕೆರೆ ಮಾತ್ರ ಜನಪ್ರತಿನಿಧಿಗಳಿಗೆ ಗೋಚರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಕೆರೆಯ ಹೂಳು ತೆಗೆಸುವುದರ ಜತೆಗೆ ಬೆಳೆದು ನಿಂತಿರುವ ಗಿಡ-ಗಂಟಿಗಳನ್ನು ತೆರವು ಮಾಡಿಸಲು ಆಗತ್ಯ ಕ್ರಮ ಕೈಗೊಂಡರೆ ಮುಂದಿನ ಮುಂಗಾರಿನಲ್ಲಾದರೂ ಕೆರೆಯಲ್ಲಿ ನೀರು ತುಂಬಬಹುದು. ಅಲ್ಲದೆ ತಿಪಟೂರು ತಾಲ್ಲೂಕಿನ ಕೆರೆ-ಕಟ್ಟೆಗಳಿ ಗೆ ನೀರು ತುಂಬಿಸುವಂತೆ ಗಂಡಸಿ ಹೋಬಳಿಯ ಕೆರೆಕಟ್ಟೆಗಳಿಗೆ ಹೇಮಾವತಿ ನದಿ ಮೂಲದಿಂದ ನೀರು ತುಂಬಿಸಬೇಕು ಎಂದು ಜನರ ಒತ್ತಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.