ಹಾಸನ:ಬೆಳಗಾವಿಯಲ್ಲಿ ಮಾ.11ರಿಂದ 13ರ ವರೆಗೆ ನಡೆಯುವ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಹಾಸನ ಜಿಲ್ಲೆಯಿಂದ ಹೊರಟ ವಿಶ್ವ ಕನ್ನಡ ತೇರಿಗೆ ನಗರದ ಹೇಮಾವತಿ ಪ್ರತಿಮೆ ಬಳಿ ಜಿಲ್ಲಾಧಿಕಾರಿ ನವೀನ್ ರಾಜ್ ಸಿಂಗ್ ಪುಷ್ಪ ಅರ್ಪಿಸಿ ಶುಭ ಹಾರೈಸಿದರು. ಇದರ ಜತೆಯಲ್ಲೇ ಮೈಸೂರಿನಿಂದ ಬಂದ ವಿಶ್ವ ಕನ್ನಡ ತೇರನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ‘ವಿಶ್ವ ಕನ್ನಡ ಸಮ್ಮೇಳನ ಜಿಲ್ಲೆಯಲ್ಲೂ ಹಬ್ಬದ ವಾತಾವರಣ ಮೂಡಿಸಿದೆ.
ಇದೇ ಮಾರ್ಚ್ 19ರಂದು ಹಾಸನದಲ್ಲಿ ಜರುಗುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಿಸಲಾಗುವುದು’ ಎಂದರು. ನಗರಸಭೆ ಅಧ್ಯಕ್ಷ ಸಿ.ಆರ್.ಶಂಕರ್ ಪಾಲ್ಗೊಂಡು ವಿಶ್ವ ಕನ್ನಡ ತೇರಿಗೆ ಶುಭ ಹಾರೈಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉದಯರವಿ, ‘ಕನ್ನಡ ನುಡಿ ಕರ್ನಾಟಕಕ್ಕೆ ಸೀಮಿತವಲ್ಲ, ಅದು ಪ್ರಪಂಚದಾದ್ಯಂತ ಪಸರಿ ಸಬೇಕು. ಈ ನಿಟ್ಟಿನಲ್ಲಿ ಕನ್ನಡ ಸಂರಕ್ಷಣೆಗೆ ಎಲ್ಲರೂ ಕಂಕಣ ಬದ್ಧರಾಗಬೇಕು’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದಾಮೋದರ್, ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರುಗಳಾದ ಹೆಚ್.ಬಿ.ಮದನಗೌಡ, ಬಿ.ಎನ್. ರಾಮ ಸ್ವಾಮಿ, ಮೈಸೂರಿನ ಚೇತನ ಕಲಾ ಬಳಗ, ಹಾಸನ ಜಿಲ್ಲಾ ಕಲಾವಿದರ ಬಳಗ ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಅರಸೀಕೆರೆ ವರದಿ: ಬೆಳಗಾವಿಯಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಹಾಸನದಿಂದ ಬೆಳಗಾವಿಗೆ ಹೊರಟಿರುವ ವಿಶ್ವ ಕನ್ನಡ ತೇರಿಗೆ ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಆಗಮಿಸಿದ ಸಂದರ್ಭದಲ್ಲಿ ತಾಲ್ಲೂಕು ಆಡಳಿತ, ತಾ.ಪಂ ಹಾಗೂ ಕರವೇ ವತಿಯಿಂದ ಅದ್ದೂರಿ ಸ್ವಾಗತ ನೀಡಲಾಯಿತು.
ನಂತರ ತಾಲ್ಲೂಕು ಆಡಳಿತದ ಪರವಾಗಿ ಉಪ ತಹಶೀಲ್ದಾರ್ ರಾಜಶೇಖರ್, ತಾ.ಪಂ ಸಿಇಓ ಎಚ್.ಎಸ್. ಚಂದ್ರಶೇಖರ್, ತಾ.ಪಂ. ಉಪಾಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ ಹಾಗೂ ಬೋರನ ಕೊಪ್ಪಲು ಜಾನಪದ ಕಲಾ ತಂಡ ಕನ್ನಡ ತೇರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತ ನೀಡಿದರು. ಬಳಿಕ ಬೋರನ ಕೊಪ್ಪಲು ಜಾನಪದ ಕಲಾ ತಂಡ ಹಾಗೂ ಡೊಳ್ಳು ಕುಣಿತದೊಂದಿಗೆ ಹಾಸನ ರಸ್ತೆ ಯಲ್ಲಿ ಸಾಗಿ ಬಿ.ಎಚ್.ರಸ್ತೆ ಮೂಲಕ ಮೆರವಣಿಗೆ ಯಲ್ಲಿ ಪಿಪಿ ವೃತ್ತಕ್ಕೆ ಬಂದಾಗ ಕರವೇ ನಗರ ಅಧ್ಯಕ್ಷ ಕಿರಣ್‌ಗೌಡ, ರಘು, ತಾಲ್ಲೂಕು ಕಸಾಪ ಕಾರ್ಯದರ್ಶಿ ಚಂದ್ರಶೇಖರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಸ್ವಾಗತಿಸಿದರು. ಜಾಜೂರು ಗ್ರಾಮಕ್ಕೆ ಬೀಳ್ಕೊಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.