ADVERTISEMENT

ಗೃಹ ಕೈಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಕರೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 5:35 IST
Last Updated 25 ಫೆಬ್ರುವರಿ 2012, 5:35 IST

ಹಾಸನ: ಗೃಹಿಣಿಯರು ಮನೆ ಕೆಲಸದ  ಜತೆಯಲ್ಲೇ ಸ್ವಲ್ಪ ಬಿಡುವು ಮಾಡಿ ಕೊಂಡು ಗೃಹ ಕೈಗಾರಿಕೆಗಳಲ್ಲಿ ತೊಡಗಿ ಆದಾಯ ಹೆಚ್ಚಿಸಿಕೊಳ್ಳುವತ್ತ ಗಮನ ಕೊಡಬೇಕು~ ಎಂದು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಿಳಾ ಮಹಾಮಂಡಳ ಹಾಗೂ ಹಾಸನ ಜಿಲ್ಲಾ ಸಹಕಾರ ಯೂನಿಯನ್‌ಗಳ ಸಹಯೋಗದಲ್ಲಿ ಶುಕ್ರವಾರ ಇಲ್ಲಿಯ ಹಾಸನ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಮಹಿಳೆಯರಿಗಾಗಿ ಏರ್ಪಡಿಸಿದ್ದ `ಆದಾಯೋತ್ಪನ್ನ ತರಬೇತಿ ಶಿಬಿರ~ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಒಂದೆಡೆ ಆದಾಯ ಇನ್ನೊಂದೆಡೆ ಸೂಕ್ತ ಮಾರ್ಗದರ್ಶನವಿಲ್ಲದೆ ಗ್ರಾಮೀಣ ಮಹಿಳೆಯರು ಜೀವನಕ್ಕಾಗಿ ಸಂಕಷ್ಟ ಅನುಭವಿಸಬೇಕಾಗುತ್ತದೆ. ಇಂಥ ತರಬೇತಿಗಳ ಸದುಪಯೋಗ ಪಡೆದರೆ ಮನೆ ಕೆಲಸದ ಜತೆಗೆ ಕುಟುಂಬದ ಆದಾಯವನ್ನೂ ಹೆಚ್ಚಿಸಬಹುದು~ ಎಂದು ಶಿವರಾಂ ನುಡಿದರು.

ಸಹಕಾರ ಮಂಡಳದ ನಿರ್ದೇಶಕ ಆರ್.ಟಿ. ದ್ಯಾವೇಗೌಡ ಮಾತನಾಡಿ, `ಮಹಿಳೆಯರು ಉಪ ಕಸುಬುಗಳಲ್ಲೂ ತೊಡಗಿಕೊಂಡರೆ ಮಾತ್ರ ಕುಟುಂಬದ ಆದಾಯ ಹೆಚ್ಚಿಸಲು ಸಾಧ್ಯ. ಈ ನಿಟ್ಟಿನಲ್ಲಿ ಇಂಥ ತರಬೇತಿ ಹೆಚ್ಚು ಸಹಾಯಕವಾಗುತ್ತದೆ~ ಎಂದರು.

`ಮಹಿಳೆಯರು ಮನೆಯಲ್ಲೇ ಕಾಫಿಪುಡಿ, ಉಪ್ಪಿನಕಾಯಿ, ಮೇಣದಬತ್ತಿ ಮುಂತಾದವು ತಯಾರಿಸಿ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು~ ಎಂದು ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಪಿ. ರಂಗನಾಥ್ ತಿಳಿಸಿದರು.

ಸಹಕಾರ ಸಂಘಗಳ ಉಪನಿಬಂಧಕ ರಾಜಣ್ಣ ಅತಿಥಿಯಾಗಿ ಮಾತನಾಡಿದರು. ಕಾರ್ಲೆ ಇಂದ್ರೇಶ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಗರದ ಮಹಿಳಾ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ. ಕೃಷ್ಣಪ್ಪ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಅನುಸರಿಸಬಹುದಾದ ವಿವಿಧ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದರು. ಹಾಸನ ಜಿಲ್ಲಾ ಕೈಗಾರಿಕಾ ಕೇಂದ್ರದ ತರಬೇತಿ ಅಧಿಕಾರಿ ಮಂಜುನಾಥಸ್ವಾಮಿ ಹಾಗೂ ಮಹಾಮಂಡಳದ ಮಹಿಳಾ ಸಹಕಾರ ಶಿಕ್ಷಣಾಧಿಕಾರಿ ಅನ್ನಪೂರ್ಣಾ ಅವರು ಗೃಹಕೈಗಾರಿಕೆಗಳ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ನಡೆಸಿಕೊಟ್ಟರು.

ವಿವಿಧ ಸಹಕಾರ ಯೂನಿಯನ್‌ಗಳ ನಿರ್ದೇಶಕರಾದ ಮಲ್ಲಪ್ಪ, ವನಿತಾ, ರಾಮಣ್ಣ ಹಾಗೂ ವಿವಿಧ ಸಹಕಾರ ಸಂಘಗಳ ಸದಸ್ಯರು, ಸ್ವಸಹಾಯ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು. ಸಹಕಾರ ಯೂನಿಯನ್ ಮಾಜಿ ಅಧ್ಯಕ್ಷ ವಿ.ಎನ್. ರಾಜಣ್ಣ ಸ್ವಾಗತಿಸಿದರು. ನಿರ್ದೇಶಕ ಎಚ್.ಬಿ. ಮಲ್ಲಪ್ಪ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಕಾರ್ಯಕ್ರಮ ನಿರೂಪಿಸಿದರು. ಕೇಶವಪ್ರಸಾದ್ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.