ADVERTISEMENT

`ಗೊರೂರರ ಜಾನಪದ ಪ್ರಜ್ಞೆ ಅನನ್ಯ'

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 5:58 IST
Last Updated 10 ಏಪ್ರಿಲ್ 2013, 5:58 IST

ಹಾಸನ: `ನಾವೆಲ್ಲರೂ ಅನಕ್ಷರಸ್ಥರ ಋಣದ ಮಕ್ಕಳು' ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ, ಸಾಹಿತಿ ಕಾಳೇಗೌಡ ನಾಗವಾರ ನುಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ಜಾನಪದ ಪರಿಷತ್ತಿನ ಹಾಸನ ಜಿಲ್ಲಾ ಘಟಕ ಹಾಗೂ ಸರ್ಕಾರಿ ಕಲಾ ಕಾಲೇಜಿನ ಕನ್ನಡ ವಿಭಾಗಗಳ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಎಸ್.ಕೆ. ಕರೀಂಖಾನ್ ಅವರ ಶತಮಾನ ಸ್ಮರಣೆ ಹಾಗೂ ವಿಚಾರಸಂಕಿರಣ ಮತ್ತು ಜಾನಪದ ಕಲಾ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಲಾ ಕ್ಷೇತ್ರಕ್ಕೆ ಗ್ರಾಮೀಣ ಅನಕ್ಷರಸ್ಥ ಜನಪದರು ನೀಡಿದ ಕೊಡುಗೆ ಸ್ಮರಿಸಿದರು.

ಕರೀಂ ಖಾನ್ ಹಾಗೂ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜತೆಗಿನ ತಮ್ಮ ಒಡನಾಟ ಸ್ಮರಿಸಿಕೊಂಡ ಕಾಳೇಗೌಡರು, `ಇಬ್ಬರೂ ಅರ್ಪಣಾ ಮನೋಭಾವದಿಂದ ದುಡಿದವರು. ಜಾನಪದ ಕಲಾ ಪ್ರಕಾರಗಳನ್ನು ಸ್ವಾತಂತ್ರ್ಯ ಹೋರಾಟಕ್ಕೆ ಅಸ್ತ್ರವಾಗಿಸಿಕೊಂಡರು ಎಂದರು.
`ಗಾಂಧೀಜಿ ಜತೆ ಕೆಲಸ ಮಾಡಿದ್ದ ಗೊರೂರು ಕೊನೆಯವರೆಗೂ ಸಮಾನತೆಯ ತತ್ವಕ್ಕೆ ಬದ್ಧರಾಗಿದ್ದರು. ಕರೀಂ ಖಾನರು ಜನಪದ ಹಾಡುಗಳ ಮೂಲಕ ಏಕೀಕರಣದ ಮುಂಚೂಣಿ ನಾಯಕರಾದರು  ಎಂದರು.

ಅಧ್ಯಕ್ಷತೆ ವಹಿಸಿದ್ದ ಜಾನಪದ ಅಕಾಡೆಮಿಯ ಅಧ್ಯಕ್ಷ ಬಾನಂದೂರು ಕೆಂಪಯ್ಯ ಜಾನಪದ ಕಲಾವಿದರ ಸ್ಥಿತಿಯ ಬಗ್ಗೆ ಮಾತನಾಡುತ್ತ, `ಜಾನಪದ ಕಲಾವಿದರ ಕಂಠ ಶ್ರೀಮಂತ ಆದರೆ ಹೊಟ್ಟೆ ಖಾಲಿ ಇರುತ್ತದೆ. ಅನೇಕ ಕಲಾವಿದರಿಗೆ ಸ್ವಂತ ಮನೆ ಇಲ್ಲ, ಊಟಕ್ಕೂ ತೊಂದರೆ ಇದೆ. ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಆಗಬೇಕು. ಎಂದರು.

ಪ್ರಕಾಶ್ ಬಿ. ನಾಯಕ್ ಬರೆದ `ಎಸ್.ಕೆ. ಕರೀಂ ಖಾನ್ ಜೀವನ ಸಾಧನೆ' ಕೃತಿ ಹಾಗೂ ಸಿ.ಜಿ.ವೆಂಕಟಯ್ಯ ಅವರು ಬರೆದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜೀವನ ಸಾಧನೆ' ಕೃತಿಗಳನ್ನು ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಐ.ಎಂ. ಮೋಹನ್ ಬಿಡುಗಡೆ ಮಾಡಿದರು. ಮೇಟಿಕೆರೆ ಹಿರಿಯಣ್ಣ ಹಾಗೂ ಜಿ.ಆರ್. ರಾಜಶೇಖರ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮೊಮ್ಮಗಳು ಉಷಾ ಹಾಗೂ ಕರೀಂ ಖಾನ್ ಮೊಮ್ಮಗ ತನ್ವೀರ್ ಅಹಮ್ಮದ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಜಾನಪದ ಕಲಾ ಉತ್ಸವದಲ್ಲಿ ನಂದಿಧ್ವಜ ಕುಣಿತ, ರಂಗ ಕುಣಿತ, ಕೋಲಾಟ, ಡೊಳ್ಳು ಕುಣಿತ ಮುಂತಾದ ಕಲಾ ಪ್ರಕಾರಗಳ ಪ್ರದರ್ಶನ ಏರ್ಪಡಿಸಲಾಯಿತು.

ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಬಿ.ಎನ್. ಪರಡ್ಡಿ ಸ್ವಾಗತಿಸಿ, ಜಿಲ್ಲಾ ಘಟಕದ ಅಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಪುಟ್ಟರಾಜು ನಿರೂಪಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.