ADVERTISEMENT

ಗೋಶಾಲೆಯಲ್ಲಿ ವಿದ್ಯಾರ್ಥಿಗಳ ಸ್ವಚ್ಛತಾ ಕಾರ್ಯ

ಗೋಬರ್‌ ಗ್ಯಾಸ್‌ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ

ಪ್ರಸನ್ನಕುಮಾರಸುರೆ
Published 30 ಜನವರಿ 2016, 10:39 IST
Last Updated 30 ಜನವರಿ 2016, 10:39 IST
ಬಾಣಾವರದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಗವಾನ್ ಮಹಾವೀರ ಗೋಶಾಲೆಯಲ್ಲಿ ಈಚೆಗೆ ಸ್ವಚ್ಛತಾ       ಕಾರ್ಯ ನಡೆಸಿದರು
ಬಾಣಾವರದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಗವಾನ್ ಮಹಾವೀರ ಗೋಶಾಲೆಯಲ್ಲಿ ಈಚೆಗೆ ಸ್ವಚ್ಛತಾ ಕಾರ್ಯ ನಡೆಸಿದರು   

ಬಾಣಾವರ: ‘ಸೇವೆಯೇ ಧರ್ಮ’ ಎಂಬ ತತ್ವದಡಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ಹಾಗೂ ಇಕೊ ಕ್ಲಬ್‌ನ ವಿದ್ಯಾರ್ಥಿಗಳು ಚಿಕ್ಕಾರೆಹಳ್ಳಿ ಗ್ರಾಮದಲ್ಲಿರುವ  ಭಗವಾನ್ ಮಹಾವೀರ ಗೋಶಾಲೆಯಲ್ಲಿ ಈಚೆಗೆ ಸ್ವಚ್ಛತಾ ಕಾರ್ಯ ನಡೆಸಿ ಗೋ ಪರಿವಾರದವರ ಮೆಚ್ಚುಗೆಗೆ ಪಾತ್ರರಾದರು.   

ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಸಬೇಕು. ಸ್ವಚ್ಛತೆಯ ಅರಿವು ಮೂಡಿಸಿ ಆ ಮೂಲಕ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸುವ ಉದ್ದೇಶ ಗಾಂಧೀಜಿಯವರಿಗಿತ್ತು. ಅದರಂತೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡ ತಮ್ಮ ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ಜತೆ ಮಹಾವೀರ್ ಗೋ ಶಾಲೆಗೆ ಭೇಟಿ ನೀಡಿ ದಿನವಿಡೀ ಅಲ್ಲಿನ ಪರಿಸರ ಹಾಗೂ ವಾತಾವರಣದಲ್ಲಿ ಕಲಿತು ಅಲ್ಲಿದ್ದ ರಾಸುಗಳ ಸ್ಥಿತಿಗತಿ ತಿಳಿಯುವ ಜತೆಗೆ ಗೋಶಾಲೆಯ ಸುತ್ತ ಇದ್ದ ದೊಡ್ಡ ಕಲ್ಲುಗಳನ್ನು ತೆಗೆದು ಸ್ವಚ್ಛಗೊಳಿಸಿತು.

  ದನಕರುಗಳಿಗೆ ನೀಡುವ ಹುಲ್ಲಿನ ರಾಶಿಯನ್ನು ಹದವಾಗಿ ಜೋಡಿಸಿಟ್ಟು ವ್ಯವಸ್ಥಿತವಾಗಿ ಗೋಶಾಲೆಯ ಸುತ್ತಮುತ್ತ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಅಲ್ಲದೇ ಗೋಶಾಲೆಯ ಆವರಣದಲ್ಲಿ ತಯಾರಿಸುವ ಅಗರಬತ್ತಿ, ಫಿನಾಯಿಲ್ ತಯಾರಿಕೆ ಬಗ್ಗೆ ಕುತೂಹಲ ಭರಿತರಾಗಿ ವೀಕ್ಷಿಸಿ ಅವುಗಳ ತಯಾರಿಕಾ ಮಾಹಿತಿ ಪಡೆದುಕೊಂಡರು.

ಇಕೊ ಕ್ಲಬ್ ಕಾರ್ಯದರ್ಶಿ ಡಿ. ಯೋಗಮೂರ್ತಿ ವಿದ್ಯಾರ್ಥಿಗಳಿಗೆ ಗೋವಿನ ಸಗಣಿಯಿಂದ ಗೋಬರ್ ಗ್ಯಾಸ್ ತಯಾರಿಸಿ ಇಂಧನ ಸಂಪನ್ಮೂಲಗಳನ್ನು ಉಳಿಸುವ ಬಗ್ಗೆ ಮಾಹಿತಿ ನೀಡಿದರು. ಪರಿಸರದ ಸಮತೋಲನಕ್ಕೆ ಗೋವುಗಳ ಕೊಡುಗೆ ಹಾಗೂ ಬಹು ಉಪಯೋಗದ ಮಾಹಿತಿ ನೀಡಿದರು.

ವಿದ್ಯಾರ್ಥಿ ಜೀವನದಲ್ಲಿ ಕಾಯಕದ ಅನುಭವ ಆಗುವುದರಿಂದ ಎನ್‌ಎಸ್‌ಎಸ್‌ ಉದ್ದೇಶ ಸಾರ್ಥಕವಾಗುತ್ತದೆ. ಮಕ್ಕಳ ಬದುಕಲ್ಲಿ ಧನಾತ್ಮಕ ಬದಲಾವಣೆ ತರುತ್ತದೆ
ಡಿ.ಬಿ. ಮೋಹನ್ ಕುಮಾರ್,
ಎನ್ಎಸ್ಎಸ್ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.