ADVERTISEMENT

ಗೌರಮ್ಮ ದೇವಿ ದರ್ಶನಕ್ಕೆ ಭಕ್ತಸಾಗರ

ಮಾಡಾಳು ಗ್ರಾಮ: ಚಂದ್ರಮಂಡಲೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 5:57 IST
Last Updated 16 ಸೆಪ್ಟೆಂಬರ್ 2013, 5:57 IST
ಗೌರಮ್ಮ ದೇವಿ ದರ್ಶನಕ್ಕೆ ಭಕ್ತಸಾಗರ
ಗೌರಮ್ಮ ದೇವಿ ದರ್ಶನಕ್ಕೆ ಭಕ್ತಸಾಗರ   

ಅರಸೀಕೆರೆ: ಶಕ್ತಿ ದೇವತೆ ಎಂದು ರಾಜ್ಯದಲ್ಲಿಯೇ ಹೆಸರು ಪಡೆದಿರುವ ತಾಲ್ಲೂಕಿನ ಮಾಡಾಳು ಗ್ರಾಮದ ಸ್ವರ್ಣಗೌರಮ್ಮ ದೇವಿ ದರ್ಶನಕ್ಕೆ ನಾಡಿನ ಮೂಲೆ ಮೂಲೆಯಿಂದ ಪ್ರತಿದಿನವೂ ಭಕ್ತ ಸಾಗರ ಹರಿದು ಬರುತ್ತಿದೆ.

ಗ್ರಾಮದ ಹೃದಯ ಭಾಗದಲ್ಲಿರುವ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಭಾದ್ರಪದ ಮಾಸದ ತದಿಗೆ ದಿನದಂದು ಹಾರನಹಳ್ಳಿ ಕೋಡಿಮಠದ ಪೀಠಾಧ್ಯಕ್ಷ ಶಿವಾನಂದ ಶಿವಯೋಗ ರಾಜೇಂದ್ರ ಸ್ವಾಮಿಜಿ ಸಮ್ಮುಖದಲ್ಲಿ ಪ್ರತಿಷ್ಠಾಪಿಸಿದ ದಿನದಿಂದಲೂ ಭಕ್ತರು ಅಪಾರ ಸಂಖ್ಯೆಯಲ್ಲಿ ಗ್ರಾಮಕ್ಕೆ ಆಗಮಿಸಿ ದೇವಿ ದರ್ಶನ ಪಡೆಯುತ್ತಿದ್ದಾರೆ.

ದಿನವಿಡೀ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದರೂ ಸಹ ಭಕ್ತರ ಸಂಖ್ಯೆ ಕಡಿಮೆಯಾಗದಿರುವುದು ಮಾತ್ರ ಈ ಬಾರಿಯ ವಿಶೇಷ.

ಭಾನುವಾರ ಹೊರ ರಾಜ್ಯ ಚನೈ,ರಾಜಸ್ಥಾನ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ತಂಡೋಪ ತಂಡಗಳಲ್ಲಿ ಆಗಮಿಸಿ ಶಕ್ತಿ ದೇವತೆಯ ದರ್ಶನ ಪಡೆಯುತ್ತಿದ್ದಾರೆ.

ಪ್ರತಿಯೊಬ್ಬರಿಗೂ ದೇವಿ ದರ್ಶನದ ಅವಕಾಶ ಕಲ್ಪಿಸುವ ಉದ್ದೇಶದಿಂದ ಗೌರಮ್ಮ ದೇವಿ ಭಕ್ತ ಮಂಡಲಿಯಯವರು ವ್ಯವಸ್ಥೆ ಕಲ್ಪಿಸಿದ್ದಾರೆ.

ಯಾವುದೇ ಚಿನ್ನಾಭರಣ ಧರಿಸದ ದೇವಿ ಸೀರೆ, ಅಕ್ಕಿ, ಕರ್ಪೂರ ಪ್ರಿಯೆ. ತಮ್ಮ ಇಷ್ಟಾರ್ಥ ಸಿದ್ದಿಗೆ ಮಾಡಿಕೊಂಡಿರುವ ಹರಕೆ ತೀರಿಸಲು ದೇವಾಲಯ ಮುಂಭಾಗದಲ್ಲಿರುವ ಕುಂಡದಲ್ಲಿ ಕರ್ಪೂರ ಹಚ್ಚುತ್ತಾರೆ.

ಹಾಗೆಯೇ ದೇವಾಲಯದ ಆವರಣದಲ್ಲಿ ಅಕ್ಕಿ ಕೊಡುತ್ತಾರೆ. ಈಗ ಹರಕೆ ರೂಪದಲ್ಲಿ ಬಂದಿರುವ ಅಕ್ಕಿಯನ್ನು ಸಂಗ್ರಹಿಸಿ ಇಡಲಾಗಿದೆ.

ಸೆ.16 ರಂದು ಚಂದ್ರಮಂಡಲೋತ್ಸವ; ಸೆ.16ರಂದು ಮಧ್ಯರಾತ್ರಿ 4 ಗಂಟೆಯ ಮೇಲೆ ದೇವಾಲಯದ ಮುಂಭಾಗ ಚಂದ್ರಮಂಡಲೋತ್ಸವ ಜರುಗಲಿದೆ.

ಅಲ್ಲದೇ ಪುಷ್ಪಾಲಂಕೃತವಾದ ಹೂವಿನ ಮಂಟಪದಲ್ಲಿ ಗೌರಮ್ಮ ದೇವಿ, ಬಸವೇಶ್ವರ ಸ್ವಾಮಿ, ಚನ್ನಬಸವಣ್ಣ ಹಾಗೂ ತಿರುಮಲೇಶ್ವರ ದೇವರನ್ನು ಗದ್ದಿಗೆ ಮೇಲೆ ಪ್ರತಿಷ್ಠಾಪಿಸಲಾಗುವುದು.
ನಂತರ ನೂರಾರು ಮಹಿಳೆಯರು ತಲೆ ಮೇಲೆ ದುಗ್ಗಲದ ಬಟ್ಟಲು ಹೊತ್ತು ಸಾಗುವರು.

ಸೆ 17 ರಂದು ಗೌರಮ್ಮ ದೇವಿ ವಿಸರ್ಜನೆ: ಸೆ.17ರಂದು ಬೆಳಿಗ್ಗೆ 8ಗಂಟೆಗೆ ಪುಷ್ಪಾಲಂಕೃತವಾದ ಹೂವಿನ ಮಂಟಪದಲ್ಲಿ ಗೌರಮ್ಮದೇವಿಯನ್ನು ಕೂರಿಸಿ ಗ್ರಾಮದಲ್ಲಿ ಮಂಗಲ ಕರಡೇವು ವಾದ್ಯದೊಂದಿಗೆ ಉತ್ಸವ ನಡೆಸಲಾಗುವುದು.

ಗೌರಮ್ಮ ದೇವಿ ಪ್ರತಿ ಮನೆಗೂ ದಯಮಾಡಿಸಿ ಮಹಿಳೆಯರು ಪೂಜೆ ಸಲ್ಲಿಸಿ ಮಡಿಲಕ್ಕಿ ಸಲ್ಲಿಸುವರು.
ಬಳಿಕ ಸಂಜೆ 5ಗಂಟೆಗೆ ಗ್ರಾಮದ ಮುಂಭಾಗದಲ್ಲಿರುವ ಕಲ್ಯಾಣಿಯಲ್ಲಿ ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗ ರಾಜೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಸಲ್ಲಿಸಿ ವಿಸರ್ಜಿಸಲಾಗುವುದು.   

ಪ್ರತಿದಿನ ದೇವಿ ದರ್ಶನಕ್ಕೆ ಬರುವ ಸಹಸ್ರಾರು ಮಂದಿ ಭಕ್ತಾದಿಗಳಿಗೆ ಭಕ್ತ ಮಂಡಳಿ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿದೆ.

ಅರಸೀಕೆರೆ, ತಿಪಟೂರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಘಟಕದಿಂದ ಪ್ರತಿದಿನ ಭಕ್ತರಿಗೆ ದೇವಿ ದರ್ಶನಕ್ಕೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದ್ದರೆ, ಪೊಲೀಸ್‌ ಭದ್ರತೆ ಉತ್ತಮವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.