ADVERTISEMENT

ಗ್ರಾಮೀಣ ಕ್ರೀಡೆಗಳ ಸುಗ್ಗಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 9:20 IST
Last Updated 13 ಜನವರಿ 2012, 9:20 IST

ಹಿರೀಸಾವೆ: ಗ್ರಾಮೀಣ ಪ್ರದೇಶಗಳಲ್ಲಿ ಮರೆಯಾ ಗುತ್ತಿರುವ ಗ್ರಾಮೀಣ ಕ್ರೀಡೆಗಳಾದ ರಾಗಿ ಬೀಸುವುದು, ಹಗ್ಗಜಗ್ಗಾಟ, ಕಲ್ಲುಗುಂಡು ಎತ್ತುವುದು ಮತ್ತಿತರ ಆಟಗಳನ್ನು ಉತ್ತೇಜಿಸಲು, ಹೋಬಳಿಯ ಬೂಕನಬೆಟ್ಟದ 81ನೇ ಜಾನುವಾರುಗಳ ಜಾತ್ರೆಯಲ್ಲಿ ತಾಲ್ಲೂಕು ಆಡಳಿತವು ಗುರುವಾರ ಗ್ರಾಮೀಣ ಕ್ರೀಡಾಕೂಟವನ್ನು ಏರ್ಪಡಿಸಿತ್ತು.

ಗ್ರಾಮೀಣ ಕ್ರೀಡಾಕೂಟದಲ್ಲಿ ಸುತ್ತ ಮುತ್ತಲಿನ ಗ್ರಾಮಗಳ ಮಹಿಳೆಯರು ರಂಗೋಲಿ ಬಿಡಿಸುವುದು, ತೆಂಗಿನಕಾಯಿ ಸುಲಿಯುವುದು, ಹೂ ಕಟ್ಟುವುದು, ಹಗ್ಗ ಜಗ್ಗಾಟ, ತೆಂಗಿನಕಾಯಿ ಸುಲಿಯುವುದು, ರಾಗಿ ಬೀಸುವ ಸ್ಪರ್ಧೆಗಳಲ್ಲಿ ಮತ್ತು ಪುರುಷರು ಹಗ್ಗ ಜಗ್ಗಾಟ, 80 ಕೆ.ಜಿ  ಕಲ್ಲುಗುಂಡು ಎತ್ತುವುದು, 50 ಕೆ.ಜಿ.ತೂಕದ ಮೂಟೆಯನ್ನು ಹೊತ್ತು ಓಡುವುದು, ಮ್ಯಾರಥಾನ್ ಓಟ, ನಿಧಾನ ಸೈಕಲ್ ರೇಸ್, ಮತ್ತು ತೆಂಗಿನ ಕಾಯಿಗಳನ್ನು ಸುಲಿಯುವ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ದಂಪತಿಗಳ ಸೈಕಲ್ ರೇಸ್ ವಿಶೇಷವಾಗಿತ್ತು.

ತಹಶೀಲ್ದಾರ್ ಬಿ.ಎನ್.ವರಪ್ರಸಾದ ರೆಡ್ಡಿ ಕ್ರೀಡಾಕೂಟದ ನೇತೃತ್ವವನ್ನು ವಹಿಸಿದ್ದರು. ಹಿಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರು ಸುಗ್ಗಿಕಾಲದ ನಂತರ ಹಾಗೂ ಹಬ್ಬ ಹರಿದಿನಗಳಲ್ಲಿ ಮನರಂಜನೆ ಗಾಗಿ ಗ್ರಾಮೀಣ ಕ್ರೀಡೆಗಳನ್ನು ಆಯೋಜನೆ ಮಾಡುತ್ತ್ದ್ದಿದರು. ಇತ್ತೀಚಿನ ದಿನಗಳಲ್ಲಿ ಆಧುನಿಕ ಕ್ರೀಡೆಗಳ ಪ್ರವಾಹದಲ್ಲಿ ಗ್ರಾಮೀಣ ಕ್ರೀಡೆಗಳು ಮರೆ ಯಾಗುತ್ತಿರುವ ಈ ಸಂದರ್ಭಗಳಲ್ಲಿ ಜಾತ್ರಾ ಮಹೋತ್ಸವದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಆಯೋಜನೆ ಮಾಡುವುದರ ಮೂಲಕ ಗ್ರಾಮೀಣ ಜನರಲ್ಲಿ ಪುನಃ ಆಸಕ್ತಿಯನ್ನು ಮೂಡಿಸಿದ್ದು ವಿಶೇಷವಾಗಿತ್ತು.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕ್ರೀಡಾಳುಗಳು ಮಾತನಾಡಿ, ತಾಲ್ಲೂಕು ಆಡಳಿತವನ್ನು ಅಭಿನಂದಿಸುತ್ತ, ಮುಂದಿನ ಜಾತ್ರೆ ಸಮಯದಲ್ಲಿ ಇನ್ನು ಹಲವು ಗ್ರಾಮೀಣ ಕ್ರೀಡೆಗಳನ್ನು ಆಯೋಜನೆ ಮಾಡುವಂತೆ ಮನವಿ ಮಾಡಿದರು. ಈ ಮೂಲಕ ಜಾತ್ರೆಗೆ ಬಂದವರಿಗೆ ಮನರಂಜನೆಯ ಜೊತೆಗೆ ಗ್ರಾಮೀಣ ಕ್ರೀಡೆಗಳನ್ನು ಬೆಳೆಸಲು ಸಹಾಯ ವಾಗುತ್ತದೆ ಎಂದರು. 

ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಎಸ್.ಪುಟ್ಟೇಗೌಡ, ಹಾಸನ ಜಿಲ್ಲಾ ಬ್ಯಾಂಕ್‌ನ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ, ಎಪಿಎಂಸಿ ಅಧ್ಯಕ್ಷ ಕೆ.ಬಿ.ಉದಯಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಕೆ.ಮಂಜೇಗೌಡ, ತಾ.ಪಂ. ಮಾಜಿ ಸದಸ್ಯ ರವಿಕುಮಾರ, ಹಿರೀಸಾವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಸ್.ಶ್ರೀಧರ್. ಮಹಾರಾಷ್ಟ್ರದ ವಕ್ಕಲಿಕ ಸಂಘದ ಉಪಾಧ್ಯಕ್ಷ ಬೂಕದ ರಂಕಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಮಕೃಷ್ಣ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.