ADVERTISEMENT

ಗ್ರಾಮೀಣ ಪ್ರತಿಭೆ ಯಶವಂತಗೆ 871ನೇ ರ‌್ಯಾಂಕ್

​ಪ್ರಜಾವಾಣಿ ವಾರ್ತೆ
Published 28 ಮೇ 2012, 5:15 IST
Last Updated 28 ಮೇ 2012, 5:15 IST

ಬಾಣಾವರ: 2011ನೇ ಸಾಲಿನಲ್ಲಿ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಹೋಬಳಿಯ ಮನಕತ್ತೂರು ಗ್ರಾಮದ ಎಂ.ಎನ್.ಶಾಂತಪ್ಪ ಮತ್ತು ಎಂ.ಎಸ್.ಸುಮಿತ್ರಮ್ಮ ದಂಪತಿ ಪುತ್ರ ಎಂ.ಎಸ್.ಯಶವಂತಕುಮಾರ್ ಐ.ಎ.ಎಸ್ ಪರೀಕ್ಷೆಯಲ್ಲಿ 871ನೇ ರ‌್ಯಾಂಕ್ ಪಡೆದು ಹೋಬಳಿಗೆ ಕೀರ್ತಿ ತಂದಿದ್ದಾನೆ.

8ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗಲೇ ತನ್ನ ಹೆಸರಿನ ಮುಂದೆ ಐಎಎಸ್ ಎಂದು ಬರೆದುಕೊಂಡು ಕನಸು ಕಂಡ ವಿದ್ಯಾರ್ಥಿಯೊಬ್ಬ ಆ ಕನಸನ್ನೇ ನನಸು ಮಾಡಿಕೊಂಡವನ ಯಶೋಗಾಥೆ ಇದು.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು ಸಿಂಗಟಗೆರೆಯ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿರುವ ತಂದೆ ಎಂ.ಎನ್.ಶಾಂತಪ್ಪ ಇಲಾಖೆಯ ಕರ್ತವ್ಯದಿಂದಾಗಿ ಊರೂರಿಗೆ ವರ್ಗವಣೆಯಾಗುತ್ತಿದ್ದರು.
 
ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ಠಾಣೆಗೆ ವರ್ಗಾವಣೆಯಾದಾಗ ಕೆಳೆಪೇಟೆಯ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮೇಲಿನ ಪೇಟೆಯ ಆರೂರು ಲಕ್ಷ್ಮೀನಾರಾಯಣ ರಾವ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ ಮುಗಿಸಿದ ಯಶವಂತ್, ಕುದರೆಮುಖದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಮತ್ತು 1997ರಿಂದ 98 ರವರೆಗೆ ಧಾರ ವಾಡದ ಪೊಲೀಸ್ ವಸತಿ ಮಕ್ಕಳ ಶಾಲೆಯಲ್ಲಿ 8 ರಿಂದರ 10ನೇ ತರಗತಿ ಯ ವರೆಗೆ ವ್ಯಾಸಂಗ ಮಾಡಿದರು.

   ನಂತರ ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಪಿಯುಸಿಯಲ್ಲಿ ವಿಜ್ಞಾನ ಆಯ್ಕೆಮಾಡಿಕೊಂಡರು. ಪಿಯುಸಿ ಮುಗಿಸಿ ನಂತರ ತನ್ನ ವಿದ್ಯಾಭ್ಯಾಸಕ್ಕೆ ಮಹತ್ತರ ತಿರುವು ಪಡೆದು 2007 ರಲ್ಲಿ ಕೃಷಿ ವಿಭಾಗದಲ್ಲಿ ಉತ್ತಮವಾಗಿ ಓದಿ ಬಿಎಸ್ಸಿ ಆಗ್ರಿಯಲ್ಲಿ ಪದವಿ ಪಡೆದು ಬೆಂಗಳೂರಿನ ಜಿಕೆವಿಕೆಯಲ್ಲಿ ಸ್ನಾತಕೋತ್ತರ ತರಗತಿಗೆ ಸೇರಿದರು.

ಯಶವಂತ 2009ರಲ್ಲಿ ಸಸ್ಯಶಾಸ್ತ್ರ ವಿಭಾಗ ಆಯ್ಕೆಮಾಡಿಕೊಂಡು ಎಂಎಸ್ಸಿ ಆಗ್ರಿಯಲ್ಲಿ ಪ್ರಬಂಧ ಮಂಡಿಸಿ ಶೇ.85.60 ಉತ್ತಮ ಫಲಿತಾಂಶ ಪಡೆದು ಸ್ನಾತಕ್ಕೊತ್ತರ ಪದವಿ ಪಡೆದು ಎಂ.ಎಸ್ಸಿ ಮುಗಿ ಸಿದರು. ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪಡೆದರೂ ಐಎಎಸ್‌ನ ಹಂಬಲ ಮನಸಿನಿಂದ ಮರೆಯಾಗಲಿಲ್ಲ.

`ಒಮ್ಮೆ ಪ್ರಯತ್ನಿಸಿದರೂ ಕನಸು ನನಸಾಗಲಿಲ್ಲ. ಎರಡನೇ ಬಾರಿ ವಿಜ್ಞಾನ ಕಷ್ಟ ಎನಿಸಿ ರಾಜ್ಯ ಶಾಸ್ತ್ರ ವನ್ನು ಐಚ್ಛಿಕ ವಿಷಯವಾಗಿ ಆಯ್ಕೆಮಾಡಿಕೊಂಡು ನಿರಂತರ ಅಧ್ಯಯನದ ಮೂಲಕ ಯಶಸ್ಸು ಸಾಧಿಸಿದೆ. ಪರೀಕ್ಷಾ ಸಮಯದಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾದಾಗ ಸಮಾಜ ಕಲ್ಯಾಣ ಇಲಾಖೆಯ ವತಿ ಯಿಂದ ಪರಿಶಿಷ್ಠ ಜಾತಿ ಪಂಗಡಗಳ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ನೀಡುವ ಸಹಾಯ ಧನದಿಂದ ದಿಲ್ಲಿಯ ವಾಜಿರಾವ್ ತರಬೇತಿ ಸಂಸ್ಥೆ ಸೇರಿಕೊಂಡೆ. ಉತ್ತಮ ಬೋಧನೆ ಮತ್ತು ಶಿಸ್ತಿನ ವ್ಯಾಸಂಗ ನನ್ನ ಕನಸು ನನಸಾಗಲು ಸಹಕರಿಸಿತು~ ಎನ್ನುತ್ತಾರೆ.

ಧಾರವಾಡದ ಪೊಲೀಸ್ ವಸತಿ ಮಕ್ಕಳ ಶಾಲೆಯಲ್ಲಿ 8ನೇ ತರಗತಿ ಓದುವಾಗ ತನ್ನ ಸಹಪಾಟಿಗಳ ಪೋಷಕರು ಐಎಎಸ್ ಮತ್ತು ಐಪಿಎಸ್‌ನಂತಹ ಉನ್ನತ ಹುದ್ದೆಗಳಲ್ಲಿ ಇದ್ದುದರಿಂದ ತಾನೂ ಕೂಡ ಐಎಎಸ್ ಅಧಿಕಾರಿ ಆಗಬೇಕೆಂದು ಇಚ್ಛೆ ಯನ್ನು ತಂದೆ ತಾಯಿಗಳಿಗೆ ಹೇಳಿದಾಗ ಪೋಷಕರಿಂದ ಸಿಕ್ಕ ಉತ್ತಮ ಪ್ರೋತ್ಸಾಹ ಈಗ ತಾನೂ ಐಎಎಸ್ ಪದವಿ ಪಡೆಯುವಂತಾಯಿತು ಎನ್ನುತ್ತಾನೆ ಯಶವಂತ.
`ಪುತ್ರ ಐಎಎಸ್ ರ‌್ಯಾಂಕ್ ಪಡೆದಿರುವುದು ಹೆಮ್ಮೆಯ ಸಂಗತಿ~ ಎಂದು ಪೋಷಕರು ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.