ADVERTISEMENT

ಚನ್ನಪಟ್ಟಣ ಕೆರೆಗೆ ನೀರು ಹರಿಸಲು ತಿಂಗಳ ಗಡುವು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 6:38 IST
Last Updated 4 ಅಕ್ಟೋಬರ್ 2017, 6:38 IST
ಬಿ.ಕೆ. ಮಂಜುನಾಥ್‌
ಬಿ.ಕೆ. ಮಂಜುನಾಥ್‌   

ಹಾಸನ: ‘ಚನ್ನಪಟ್ಟಣದ ಕೆರೆಗೆ 30 ದಿನದೊಳಗೆ ನೀರು ತುಂಬಿಸದಿದ್ದರೆ ನಗರ ಬಂದ್‌ಗೆ ಕರೆ ನೀಡಿ ಜೆಸಿಬಿ ಯಂತ್ರದಿಂದ ಕಾಲುವೆ ಮುಚ್ಚಿ ನೀರು ಹರಿಸಲಾಗುವುದು’ ಎಂದು ಹಿರಿಯ ನಾಗರಿಕರ ವೇದಿಕೆಯ ಮುಖಂಡ ಬಿ.ಕೆ. ಮಂಜುನಾಥ್ ಎಚ್ಚರಿಸಿದರು.

ಈಗಾಗಲೇ 159 ಎಕರೆ ವಿಸ್ತೀರ್ಣದ ಚನ್ನಪಟ್ಟಣ ಕೆರೆಯನ್ನು ಅಭಿವೃದ್ಧಿ ಸೋಗಿನಲ್ಲಿ ಮುಚ್ಚಲಾಗಿದೆ. ಇದರಿಂದ ಲಕ್ಷಾಂತರ ಜನ, ಜಾನುವಾರುಗಳು ನೀರಿಲ್ಲದೆ ಪರಿತಪ್ಪಿಸುವಂತಾಗಿದೆ. ಚನ್ನಪಟ್ಟಣ ಗ್ರಾಮ ಹಾಗೂ ನೂತನ ಬಸ್‌ ನಿಲ್ದಾಣದ ಮಧ್ಯೆ ನೀರು ನಿಲ್ಲಿಸಲು ಸರ್ಕಾರದಿಂದ ಯೋಜನೆ ರೂಪಿಸಿ ಕಾಮಗಾರಿ ಶುರುಮಾಡಿ ದಶಕಗಳೇ ಉರುಳಿದ್ದರೂ ಪೂರ್ಣಗೊಂಡಿಲ್ಲ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಕೆರೆಗೆ ನೀರು ತುಂಬಿಸಲು ಇಷ್ಟು ಹೋರಾಟ ಮಾಡಬೇಕಾದ ಅನಿವಾರ್ಯ ಇತ್ತೆ. ಸುಮಾರು ₹ 7 ಕೋಟಿ ಹಣ ಖರ್ಚಾಗಿರುವ ಬಗ್ಗೆ ಮಾಹಿತಿ ನೀಡದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ನಗರ ವ್ಯಾಪ್ತಿಯ 18 ಕೆರೆಗಳಿಗೆ ನೀರು ತುಂಬಿಸಿದ್ದರೆ ಕುಡಿಯುವ ನೀರಿಗೆ ತೊಂದರೆ ಎದುರಾಗುತ್ತಿರಲಿಲ್ಲ. ನೀರಿನಲ್ಲಿ ರಾಜಕೀಯ ಬಣ್ಣ ಬೆರೆಸುವುದು ಬೇಡ. ಮುಂದಿನ 30 ದಿನಗಳ ಒಳಗೆ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಪ್ರಾರಂಭಿಸದಿದ್ದರೆ ಜನರ ಬಳಿ ದೇಣಿಗೆ ಸಂಗ್ರಹಿಸಿ ಜೆಸಿಬಿ ಯಂತ್ರದ ಮೂಲಕ ಕಾಲುವೆ ಮುಚ್ಚಿಸಿ ನೀರು ತುಂಬಿಸುವ ಕೆಲಸ ಮಾಡಲಾಗುವುದು ಎಂದು ಸವಾಲು ಹಾಕಿದರು.

ಬೇಲೂರು ತಾಲ್ಲೂಕು ವ್ಯಾಪ್ತಿಯ ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿಗೆ ಆಗ್ರಹಿಸಿ ಸೆ. 4 ರಂದು ಹತ್ತು ಮಠಾಧೀಶರು ಹಾಗೂ ಸಂಘದ ಸಂಸ್ಥೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಹಿರಿಯ ನಾಗರಿಕರ ವೇದಿಕೆಯ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು. ಗೋಷ್ಟಿಯಲ್ಲಿ ಹಿರಿಯ ನಾಗರಿಕ ವೇದಿಕೆಯ ಮುಖಂಡರಾದ ಬಿ.ವಿ. ಕರೀಗೌಡ, ಎಂ.ಶಿವಣ್ಣ, ಜಯಲಕ್ಷ್ಮೀ ರಾಜೇಗೌಡ, ವೈ.ಎಸ್‌. ವೀರಭದ್ರಪ್ಪ, ಪುಟ್ಟಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.