ADVERTISEMENT

ಚಿಂದಿ ಆಯುವ ಮಕ್ಕಳಿಗೆ ಸಿಕ್ಕ ನೆಲೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 8:25 IST
Last Updated 14 ಜೂನ್ 2011, 8:25 IST

ಅರಸೀಕೆರೆ: ಪಟ್ಟಣದಲ್ಲಿ ಚಿಂದಿ ಆಯ್ದು ಜೀವನ ಸಾಗಿಸುತ್ತಿದ್ದ 11 ಅಲೆಮಾರಿ ಮಕ್ಕಳಿಗೆ ಆರ್‌ಎಸ್‌ಎಸ್ ಸಂಘಟನೆ  ಶಿಕ್ಷಣ ಹಾಗೂ ವಸತಿ ಕಲ್ಪಿಸಿಕೊಡಲು ನಿರ್ಧರಿಸಿದೆ ಎಂದು ಆರ್‌ಎಸ್‌ಎಸ್‌ಮೈಸೂರು ವಿಭಾಗದ ಸೇವಾ ಪ್ರಮುಖ್ ಕೆ.ಎನ್. ಸತ್ಯನಾರಾಯಣ ಭಾನುವಾರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿನಿತ್ಯ ಬೀದಿ ಹಾಗೂ ಗಲ್ಲಿಗಳಲ್ಲಿ ಚಿಂದಿ ಆಯುತ್ತಾ ಬದುಕನ್ನೇ ಮರೆತಿರುವ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದು ನಾಗರೀಕ ಸಮಾಜ ತಲೆ ತಗ್ಗಿಸುವ ವಿಚಾರ. ರಸ್ತೆ ಬದಿಯ ಮರಗಳ ನೆರಳಿನಡಿ ಮಳೆ ಬಿಸಿಲಿನಲ್ಲಿ ಬದುಕುತ್ತಾ ಈ ಮಕ್ಕಳು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು.

ಪೋಷಕರ ಒಪ್ಪಿಗೆ ಪಡೆದು ಬೆಂಗಳೂರು- ಮೈಸೂರು ರಾಜ್ಯ ಹೆದ್ದಾರಿಯ ಭೋಗಾದಿ `ಅಜಿತ್ ನೆಲ~ ಸೇವಾ ಸಂಸ್ಥೆಯಲ್ಲಿ ಆ ಮಕ್ಕಳನ್ನು ಸೇರಿಸಲಾಗುತ್ತದೆ. ಇಂತಹ ಸೇವಾ ಸಂಸ್ಥೆಗಳು ರಾಜ್ಯಾದ್ಯಂತ ಮೂರು ಕಡೆ ಕಾರ್ಯ ನಿರ್ವಹಿಸುತ್ತಿವೆ. ಶಿಕ್ಷಣದಿಂದ ವಂಚಿತವಾಗಿರುವ ಮಕ್ಕಳ ಒಳಿತಿಗಾಗಿ ಶ್ರಮಿಸುತ್ತಿವೆ ಎಂದು ಹೇಳಿದರು.

ಜೂ.13ರಂದು ಸಂಜೆ 6ಗಂಟೆಗೆ ಪಟ್ಟಣದ ರೋಟರಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಮಕ್ಕಳ ತಂದೆ- ತಾಯಂದಿರಿಗೆ ಅರಿವು ಮೂಡಿಸಿ ನಂತರ ಅವರನ್ನು ಭೋಗಾದಿ ~ಅಜಿತ್ ನೆಲ~ಸೇವಾ ಸಂಸ್ಥೆಗೆ ಕಳುಹಿಸಿ ಕೊಡಲಾಗುವುದು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್  ಎನ್.ಎಸ್. ಚಿದಾನಂದ, ಡಿವೈಎಸ್‌ಪಿ ಜೆ.ಕೆ. ರಶ್ಮಿ, ಹಿಂದೂ ಸೇವಾ ಪ್ರತಿಷ್ಠಾನದ ಪ್ರಾಂತ್ಯ ಪ್ರಮುಖ್ ಕೃಷ್ಣಮೂರ್ತಿ ಭಾಗವಹಿಸುವರು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮಿನರಸಿಂಹಶಾಸ್ತ್ರಿ, ಶಿವಶಂಕರ್, ಡಾ. ಮಧು, ಡಿ.ಆನಂದ್‌ಕೌಶಿಕ್, ಕೆ.ಜಿ..ವೆಂಕಟೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.