ADVERTISEMENT

ಚಿರತೆ ದಾಳಿ: ರೈತನಿಗೆ ತೀವ್ರ ಗಾಯ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 9:15 IST
Last Updated 13 ಜನವರಿ 2012, 9:15 IST

ಅರಕಲಗೂಡು: ತಾಲ್ಲೂಕಿನಲ್ಲಿ ಚಿರತೆ ದಾಳಿ ಮುಂದುವರೆದಿದ್ದು, ಕಣದಲ್ಲಿ ಮಲಗಿದ್ದ ರೈತರೊಬ್ಬರ ಮೇಲೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಕೊರಟಿಕೆರೆ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಚಲುವೇಗೌಡ (48) ಗಾಯಗೊಂಡಿರುವ ರೈತ. ರಾತ್ರಿ 2 ಗಂಟೆಯವರೆಗೆ ಕಣದಲ್ಲಿ ಭತ್ತದ ಒಕ್ಕಣೆ ನಡೆಸಿ ಕಣದಲ್ಲಿ ಮಲಗಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ಚಲುವೇಗೌಡ ಮುದ್ದನಹಳ್ಳಿ ಗ್ರಾಮದವರು. ಕೊರಟಿಕೆರೆ ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ ಇತರೆ ರೈತರ ಜೊತೆ ಭತ್ತ ಬಡಿಯುವ ಕಾರ್ಯ ಮುಗಿಸಿ ಮಲಗಿದ್ದಾಗ ಚಿರತೆ ಹಠಾತ್ ದಾಳಿ ನಡೆಸಿದೆ. ಭತ್ತದ ಹುಲ್ಲನ್ನು ಹೊದ್ದು ಮಲಗಿದ್ದ ಪರಿಣಾಮ ಸರಿಯಾದ ಗುರುತು ಸಿಗದೆ ಚಿರತೆ ಕುತ್ತಿಗೆಗೆ ಬಾಯಿ ಹಾಕಲು ಸಾಧ್ಯವಾಗಿಲ್ಲ. ಚಿರತೆ ದಾಳಿ ನಡೆಸಿದಾಗ ಚಲುವೇಗೌಡ ಜೋರಾಗಿ ಕಿರುಚಾಡಿದ್ದಾರೆ. ಅಕ್ಕಪಕ್ಕದಲ್ಲಿ ಮಲಗಿದ್ದವರು ಎದ್ದು ಗಲಾಟೆ ಮಾಡಿದ್ದಲ್ಲದೆ ಹುಲ್ಲಿಗೆ ಬೆಂಕಿ ಹಾಕಿದ್ದಾರೆ ಇದರಿಂದ ಗಾಬರಿಗೊಂಡ ಚಿರತೆ ಪರಾರಿಯಾಗಿದೆ. ಕೂಡಲೆ ಗಾಯಳುವನ್ನು ಹೊಳೆನರಸೀಪುರಕ್ಕೆ ಕರೆದೊಯ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರಟಿಕೆರೆ ಯಲ್ಲಿ ಚಲುವೇಗೌಡರ ಮೇಲೆ ದಾಳಿ ನಡೆಸಿ ಪರಾರಿಯಾದ ಚಿರತೆ ಮುದ್ದನಹಳ್ಳಿಗೆ ಬಂದು ಬೀದಿ ನಾಯಿ ಮರಿಯೊಂದನ್ನು ಹಿಡಿದು ಭಕ್ಷಿಸಿದೆ. ಸುದ್ದಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಚಿರತೆ ದಾಳಿ ನಡೆಸಿದ ಜಾಗದ ಸಮೀಪ ಬೋನನ್ನು ಇಟ್ಟು ಚಿರತೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ.

ಗ್ರಾಮಸ್ಥರ ಭೀತಿ: ಚಿರತೆ ದಾಳಿ ವಿಷಯ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ತೀವ್ರ ಭೀತಿಗೊಳ ಗಾಗಿದ್ದಾರೆ. ಭತ್ತ, ರಾಗಿಯ ಒಕ್ಕಣೆ ಕಾರ್ಯ ನಡೆಯುತ್ತಿರುವುದರಿಂದ ಹಗಲು ರಾತ್ರಿ ಕಣದ ಕೆಲಸ ನಡೆಸಬೇಕು.

ಕೃಷಿ ಕಾರ್ಯಕ್ಕೆ ಕೂಲಿ ಕಾರ್ಮಿಕರು ದೊರೆಯದೆ ಸಮಸ್ಯೆ ಎದುರಿಸುತ್ತಿದ್ದೇವೆ. ಈಗ ಚಿರತೆ ದಾಳಿಯ ಭೀತಿಯಿಂದ ಬರುತ್ತಿದ್ದ ಕಾರ್ಮಿಕರು ಬರುವುದಿಲ್ಲ. ಇದರಿಂದ ರೈತರು ತೀವ್ರ ನಷ್ಟ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು. ಚಿರತೆಗಳನ್ನು ಹಿಡಿದು ಸ್ಥಳಾಂತರಿಸಲು ಅರಣ್ಯ ಇಲಾಖೆ ಗಂಭೀರವಾಗಿ ಪ್ರಯತ್ನಿಸುವಂತೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.