ADVERTISEMENT

ಚುನಾವಣೆ ಬಹಿಷ್ಕಾರ: ಮತಗಟ್ಟೆ ಖಾಲಿ!

​ಪ್ರಜಾವಾಣಿ ವಾರ್ತೆ
Published 1 ಜನವರಿ 2011, 7:20 IST
Last Updated 1 ಜನವರಿ 2011, 7:20 IST

ರಾಮನಾಥಪುರ: ಕೊಣನೂರು ಗ್ರಾ. ಪಂ. ವ್ಯಾಪ್ತಿಯ ಗ್ರಾಮಸ್ಥರು ಮತದಾನ ಬಹಿಷ್ಕರಿಸಿರುವುದನ್ನು ಬಿಟ್ಟರೆ, ವಿವಿಧೆಡೆ ಜಿ.ಪಂ. ಮತ್ತು ತಾ.ಪಂ. ಕ್ಷೇತ್ರಗಳಿಗೆ ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿತು.

ಹಳ್ಳಿಗಳಲ್ಲಿ ಬತ್ತದ ಗದ್ದೆ ಕೊಯಿಲಿನ ಸುಗ್ಗಿ ಸಮಯವಾದ್ದರಿಂದ ರೈತರು ಬೆಳಿಗ್ಗೆ ಎದ್ದೊಡನೆ ಜಮೀನಿನತ್ತ ಹೆಜ್ಜೆ ಹಾಕುತ್ತಿದ್ದುದು ಕಂಡುಬಂತು. ಹಾಗಾಗಿ ಬೆಳಿಗ್ಗೆ ಹೊತ್ತು ನೀರಸವಾಗಿದ್ದ ಮತದಾನ ಮಧ್ಯಾಹ್ನದ ನಂತರ ಬಿರುಸು ಪಡೆದುಕೊಂಡಿತು. ರಾಮನಾಥಪುರ, ಕೇರಳಾಪುರ, ಬಸವಾಪಟ್ಟಣ ಗ್ರಾಮದ ಮತಗಟ್ಟೆಗಳಲ್ಲಿ ಸಂಜೆ 5 ಗಂಟೆವರೆಗೂ ಮತದಾರರು ನೂಕು- ನುಗ್ಗಲಿನಲ್ಲಿ ಬಂದು ಮತದಾನ ಮಾಡುತ್ತಿದ್ದ ದೃಶ್ಯ ಕಂಡುಬಂತು.

ಕೊಣನೂರು ಜಿ.ಪಂ. ಕ್ಷೇತ್ರದಿಂದ ಮಾಜಿ ಸಚಿವ ಕೆ.ಬಿ. ಮಲ್ಲಪ್ಪ ಅವರ ಪತ್ನಿ ಶಾರದಮ್ಮ ಅವರು ಸ್ಪರ್ಧಿಸಿದ್ದು, ಬೆಳಿಗ್ಗೆ ಈ ದಂಪತಿಗಳಿಬ್ಬರು ಗ್ರಾಮದ ಕಡುವಿನ ಹೊಸಹಳ್ಳಿ ಶಾಲೆಯೊಂದರಲ್ಲಿ ಸ್ಥಾಪಿಸಿದ್ದ ಮತಗಟ್ಟೆಗೆ ಬಂದು ಮತದಾನ ಮಾಡಿದರು.

ಲಕ್ಕೂರು, ಹನ್ಯಾಳು ಹಾಗೂ ಕೊಣನೂರು ಹೋಬಳಿಯ ಬಿದರೂರು ಗ್ರಾಮದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಣ್ಣ ಕಾರಣಕ್ಕಾಗಿ ಮಾತಿನ ಚಕಮಕಿ ನಡೆದಿದೆ. ರಾಮನಾಥಪುರದ ಮತಗಟ್ಟೆ ಸಂಖ್ಯೆ 134ರಲ್ಲಿ ವ್ಯಕ್ತಿಯೊಬ್ಬರು, ವಯಸ್ಸಾಗಿರುವ ತಮ್ಮ ತಾಯಿಗೆ ಕಣ್ಣು ಕಾಣದೆಂದು ಹೇಳಿಕೊಂಡು ಅವರ ಮತವನ್ನು ತಾನೇ ಚಲಾಯಿಸುವುದಾಗಿ ಬಂದಿದ್ದರಿಂದ ಪೋಲಿಂಗ್ ಆಫೀಸರ್‌ಗಳ ನಡುವೆ ಕೆಲಹೊತ್ತು ಮಾತಿನ ಚಕಮಕಿಗೆ ಕಾರಣವಾಗಿತ್ತು.

ಕೊಣನೂರು ಗ್ರಾ.ಪಂ. ಅನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವಂತೆ ಅಲ್ಲಿನ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದರಿಂದ ಮತದಾನದಿಂದಲೇ ದೂರ ಉಳಿದರು. ಆದರೆ ಕೊಣನೂರು ತಾ.ಪಂ. ಕ್ಷೇತ್ರದ ಚುನಾವಣೆಗೆ ಪಂಚಾಯಿತಿ ವ್ಯಾಪ್ತಿಯಿಂದ ಹೊರಗುಳಿದ ಗ್ರಾಮದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರಿಂದ ಲಕ್ಕನಹಳ್ಳಿ, ವಡ್ವಾಣ ಹೊಸಹಳ್ಳಿ, ಕೂಡಲೂರು ಗ್ರಾಮದಲ್ಲಿ ಮತದಾನ ಶಾಂತಿಯುತವಾಗಿ ಸಾಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.