ADVERTISEMENT

ಜಿ.ಪಂ: ಅಧ್ಯಕ್ಷೆ ಅಂಬಿಕಾ, ಉಪಾಧ್ಯಕ್ಷ ಬಿಳಿಚೌಡಯ್ಯ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 7:10 IST
Last Updated 12 ಅಕ್ಟೋಬರ್ 2012, 7:10 IST

ಹಾಸನ: `ನನ್ನ ಅಧಿಕಾರಾವಧಿಯಲ್ಲಿ ಕುಡಿಯುವ ನೀರು, ಶಿಕ್ಷಣಕ್ಕೆ ಒತ್ತು ನೀಡುವುದರ ಜತೆಗೆ ಜಿಲ್ಲೆಯ ಸ್ತ್ರೀಶಕ್ತಿಯನ್ನು ಬಲಪಡಿಸಲು ಆದ್ಯತೆ ನೀಡುತ್ತೇನೆ~ ಎಂದು ಹಾಸನ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಅಂಬಿಕಾ ರಾಮಕೃಷ್ಣ   ತಿಳಿಸಿದರು.

ಅಧ್ಯಕ್ಷರ ಆಯ್ಕೆ ಚುನಾವಣೆಯ ಬಳಿಕ ಅವರು ಪತ್ರಕರ್ತರೊಡನೆ   ಮಾತನಾಡಿದರು. ಗುರುವಾರ    ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಚುನಾವಣೆಯಲ್ಲಿ ಹಿರೀಸಾವೆ    ಕ್ಷೇತ್ರದ ಅಂಬಿಕಾ ರಾಮಕೃಷ್ಣ ಅಧ್ಯಕ್ಷರಾಗಿ ಮತ್ತು ಹಾರನಹಳ್ಳಿ ಕ್ಷೇತ್ರದ ಬಿಳಿಚೌಡಯ್ಯ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎರಡನೇ ಅವಧಿಯಲ್ಲಿ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಎಂದು ಮೀಸಲಾತಿ ಘೋಷಿಸಲಾಗಿತ್ತು. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗದ ಬಿಳಿಚೌಡಯ್ಯ ಅವರನ್ನು ಜೆಡಿಎಸ್ ಆಯ್ಕೆ ಮಾಡಿದೆ.

ಪತ್ರಕರ್ತರೊಡನೆ ಮಾತನಾಡಿದ ಉಪಾಧ್ಯಕ್ಷ ಬಿಳಿಚೌಡಯ್ಯ, `ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿದ್ದರೂ ಪಕ್ಷದ ಹಿರಿಯರು ನನಗೆ ಈ ಅವಕಾಶ ನೀಡಿದ್ದಾರೆ. ಅವರ   ಮಾರ್ಗದರ್ಶನದಲ್ಲಿ, ವಿಶ್ವಾಸ ಉಳಿಸುವ ನಿಟ್ಟಿನಲ್ಲಿ   ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಪ್ರಾದೇಶಿಕ ಆಯುಕ್ತೆ ಕೆ.ವೈ.ಜಯಂತಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್, ಜಿಲ್ಲಾ ಪಂಚಾಯಿತಿ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಟ್ಟಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರು, ಇತರ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.