ADVERTISEMENT

ಜಿಲ್ಲೆಯ ನಾಲ್ಕು ಕ್ಷೇತ್ರಕ್ಕೆ ಹೊಸಬರು

ಕಾಂಗ್ರೆಸ್‌ ಪಟ್ಟಿ ಪ್ರಕಟ: ಬೇಲೂರಿಗೆ ಕೀರ್ತನಾ, ಹೊಳೆನರಸೀಪುರಕ್ಕೆ ಮಂಜೇಗೌಡ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 8:37 IST
Last Updated 16 ಏಪ್ರಿಲ್ 2018, 8:37 IST

ಹಾಸನ: ಎರಡು ದಿನ ಅಳೆದೂ ತೂಗಿ ಹೈಕಮಾಂಡ್‌ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ನಾಲ್ಕು ಕ್ಷೇತ್ರಗಳಿಗೆ ಹೊಸ ಮುಖಗಳನ್ನು ಪರಿಚಯಿಸಿದೆ.

ಅರಕಲಗೂಡಿಗೆ ಎ.ಮಂಜು, ಹೊಳೆ ನರಸೀಪುರಕ್ಕೆ ಬಿ.ಪಿ.ಮಂಜೇಗೌಡ, ಶ್ರವಣಬೆಳಗೊಳಕ್ಕೆ ಸಿ.ಎಸ್‌.ಪುಟ್ಟೇಗೌಡ, ಅರಸೀಕೆರೆಗೆ ಜಿ.ಬಿ.ಶಶಿಧರ್‌, ಆಲೂರು–ಸಕಲೇಶಪುರಕ್ಕೆ ಎಚ್‌.ಸಿದ್ದಯ್ಯ, ಹಾಸನಕ್ಕೆ ಎಚ್‌.ಕೆ.ಮಹೇಶ್‌, ಬೇಲೂರಿಗೆ ಎಂ.ಎನ್‌.ಕೀರ್ತನಾ ರುದ್ರೇಶ್‌ಗೌಡರಿಗೆ ಟಿಕೆಟ್‌ ನೀಡಲಾಗಿದೆ.

ನಿರೀಕ್ಷೆಯಂತೆ ಹಾಸನ, ಶ್ರವಣಬೆಳಗೊಳಕ್ಕೆ ಕಳೆದ ಬಾರಿ ಪರಭಾವಗೊಂಡಿದ್ದ ಎಚ್‌.ಕೆ.ಮಹೇಶ್‌ ಮತ್ತು ಸಿ.ಎಸ್‌.ಪುಟ್ಟೇಗೌಡರಿಗೆ ಟಿಕೆಟ್ ನೀಡಲಾಗಿದೆ. ಸಚಿವ ಎ.ಮಂಜು ಏಳನೇ ಬಾರಿಗೆ ಅರಕಲಗೂಡು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ADVERTISEMENT

ಸಿದ್ದರಾಮಯ್ಯ ಅವರ ಆಪ್ತರಾದ ನಿವೃತ್ತ ಸರ್ಕಾರಿ ಅಧಿಕಾರಿ ಬಿ.ಪಿ.ಮಂಜೇಗೌಡ ಅವರನ್ನು ಎಚ್‌.ಡಿ.ರೇವಣ್ಣ ವಿರುದ್ಧ ಸ್ಪರ್ಧೆಗೆ ಇಳಿಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ಕಳೆದ ಬಾರಿ ಸೋಲು ಕಂಡಿದ್ದ ಅನುಪಮಾ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದರು.

ಇನ್ನು ಆಲೂರು, ಸಕಲೇಶಪುರ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳೀಯ ಮುಖಂಡರ ಪ್ರತಿರೋಧದ ನಡುವೆಯೂ ಬಿಡಿಎ, ಬಿಬಿಎಂಪಿ ಆಯುಕ್ತ, ಮೈಸೂರು ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಆಪ್ತ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಸಿದ್ದಯ್ಯ ಅವರಿಗೆ ಟಿಕೆಟ್‌ ನೀಡಲಾಗಿದೆ.

ಅರಸೀಕೆರೆ ಯಿಂದ ಮಾಜಿ ಶಾಸಕ ಜಿ.ಎಸ್‌.ಬಸವರಾಜು ಅವರ ಪುತ್ರ ಶಶಿಧರ್ ಅವರು ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಶಶಿಧರ್‌ ಪರವಾಗಿ ಸಚಿವ ಮಂಜು ಲಾಬಿ ನಡೆಸಿದ್ದರು.

ಇನ್ನು ಬೇಲೂರು ಕ್ಷೇತ್ರಕ್ಕೆ ಶಾಸಕ ವೈ.ಎನ್‌.ರುದ್ರೇಶ್‌ಗೌಡರ ಪತ್ನಿ ಎಂ.ಎನ್‌.ಕೀರ್ತನಾ ರುದ್ರೇಶ್‌ಗೌಡರಿಗೆ ಟಿಕೆಟ್ ನೀಡಲಾಗಿದೆ. ದಿನದ ಹಿಂದೆಯಷ್ಟೇ ಕ್ಷೇತ್ರದ ಮೂವರು ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಸಭೆ ಸೇರಿ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಮು ಅವರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿ, ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದರು. ಆದರೆ, ಹೈಕಮಾಂಡ್‌ ಅನುಕಂಪದ ಅಲೆಯ ಲಾಭ ಪಡೆಯಲು ಕೀರ್ತನಾ ಅವರಿಗೆ ಟಿಕೆಟ್‌ ನೀಡಿದೆ.

‘ಚುನಾವಣಾ ಪ್ರಚಾರ ಸಿದ್ಧತೆ ಜೋರಾಗಿ ನಡೆಸಬೇಕು. ಕಡಿಮೆ ಅವಧಿ ಇದೆ. ಕಾಂಗ್ರೆಸ್ ಪಕ್ಷದ ಐದು ವರ್ಷದ ಸಾಧನೆ ಜನರಿಗೆ ತಿಳಿಸಿ ಮತ ಯಾಚಿಸಲಾಗುವುದು’ ಎಂದು ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶಶಿಧರ್‌ ತಿಳಿಸಿದರು.

ನೆಲೆ ಕಳೆದುಕೊಂಡ ಶಿವರಾಮು

1989ರಿಂದ ಮೊದಲ ಬಾರಿಗೆ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಮು ಅವರು ಅನಿವಾರ್ಯವಾಯವಾಗಿ ಕಣದಿಂದ ಆಚೆ ಉಳಿಯುವಂತೆ ಆಗಿದೆ. ಗಂಡಸಿ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ಗಮನ ಸೆಳೆದಿದ್ದರು.

2008 ಮತ್ತು 2013ರ ಚುನಾವಣೆಯಲ್ಲಿ ಕ್ರಮವಾಗಿ ಹಾಸನ ಮತ್ತು ಅರಸೀಕೆರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದರಿಂದಾಗಿ ಅವರು ರಾಜಕೀಯ ಮುಖ್ಯವಾಹಿನಿಯಲ್ಲಿ ಹಿನ್ನಡೆ ಅನುಭವಿಸಿದ್ದರು.

ಈ ಬಾರಿ ಚುನಾವಣೆಯಲ್ಲಿ ಬೇಲೂರು ಕ್ಷೇತ್ರದಿಂದ ಸ್ಪರ್ಧಿಸಿ ಅದೃಷ್ಟ ಪರೀಕ್ಷಿಸಬೇಕು ಎಂಬ ಆಕಾಂಕ್ಷೆ ಹೊಂದಿದ್ದರು. ಇದ್ದಕಾಗಿ ಒಂದು ವರ್ಷದಿಂದ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರ ಮೂಲಕ ಪ್ರತ್ಯೇಕವಾಗಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು.

ಬೇಲೂರು ಶಾಸಕ ವೈ.ಎನ್‌.ರುದ್ರೇಶ್‌ಗೌಡ ಅವರು ಅನಾರೋಗ್ಯದ ಕಾರಣಕ್ಕೆ ಸ್ಪರ್ಧೆಯಿಂದ ಹಿಂದೆ ಸರಿದರೆ ತಮಗೆ ಸುಲಭವಾಗಿ ಅವಕಾಶ ದೊರೆಯತ್ತದೆ ಎಂಬ ವಿಶ್ವಾಸ ಹೊಂದಿದ್ದರು. ಆದರೆ, ರುದ್ರೇಶ್‌ಗೌಡರ ಹಠಾತ್‌ ನಿಧನ ಕ್ಷೇತ್ರದ ಚಿತ್ರಣ ಬದಲಿಸಿತು. ಪಕ್ಷದ ವರಿಷ್ಠರು ಅನುಕುಂಪದ ಅಲೆಯ ಲಾಭ ಪಡೆಯಲು ರುದ್ರೇಶ್‌ಗೌಡರ ಪತ್ನಿ ಕೀರ್ತನಾ ಅವರಿಗೆ ಟಿಕೆಟ್‌ ನೀಡಿದ್ದಾರೆ.

ಇದರಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿ.ಶಿವರಾಮು ಅವರು ಮೂರು ದಶಕಗಳಲ್ಲಿ ಇದೇ ಮೊದಲ ಬಾರಿ ವಿಧಾನಸಭೆ ಚುನಾವಣೆ ಕಣದಿಂದ ದೂರ ಉಳಿಯುವಂತೆ ಆಗಿದೆ. ಎಐಸಿಸಿ ರುದ್ರೇಶ್‌ಗೌಡರ ಕುಟುಂಬಕ್ಕೆ ಟಿಕೆಟ್ ನೀಡಲು ನಿರ್ಧರಿಸಿದ್ದರೂ ಛಲ ಬಿಡದ ಶಿವರಾಂ ದೆಹಲಿಯಲ್ಲಿ ವಾಸ್ತವ್ಯ ಹೂಡಿ ಲಾಬಿ ಮುಂದುವರಿಸಿದ್ದರು. ಆದರೆ ಮ್ಲಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ನಾಯಕರಿಂದಲೂ ಸೂಕ್ತ ಸ್ಪಂದನೆ ದೊರಕಿರಲಿಲ್ಲ. ಸಚಿವ ಡಿ.ಕೆ.ಶಿವಕುಮಾರ್‌ ಅವರ ಬೆಂಬಲ ತಮಗೆ ಅಂತಿಮ ಕ್ಷಣದಲ್ಲಿ ‘ಬಿ’ ಫಾರಂ ದೊರಕಿಸಿಕೊಡಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.