ADVERTISEMENT

ಜೆಡಿಎಸ್ ನಿಂದ ಅನುಕೂಲಸಿಂಧು ರಾಜಕಾರಣ

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 5:17 IST
Last Updated 20 ಡಿಸೆಂಬರ್ 2013, 5:17 IST

ಬೇಲೂರು: ‘ಬಿಜೆಪಿ, ಕಾಂಗ್ರೆಸ್‌ನೊಂದಿಗೆ ಅನುಕೂಲ ಸಿಂಧು ರಾಜಕಾರಣ ಮಾಡುವ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಲಿ’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದರು.

ಭಾರತೀಯ ಜನತಾ ಪಕ್ಷ ಗುರುವಾರ ಇಲ್ಲಿ ಏರ್ಪಡಿಸಿದ್ದ ಹಾಸನ ಲೋಕಸಭಾ ಕ್ಷೇತ್ರದ ಶಕ್ತಿ ಕೇಂದ್ರ ಪ್ರಮುಖರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಜರಿಯುವ ದೇವೇಗೌಡರು ಇತ್ತೀಚೆಗೆ ಲೋಕಸಭೆಗೆ ನಡೆದ ಎರಡು ಉಪ ಚುನಾವಣೆಗಳಲ್ಲಿ ತಮ್ಮ ಸೊಸೆಯನ್ನು ಗೆಲ್ಲಿಸಿಕೊಳ್ಳುವ ಸಲುವಾಗಿ ಬಿಜೆಪಿ ಮುಖಂಡರನ್ನು ಪ್ರಚಾರಕ್ಕೆ ಕರೆದುಕೊಂಡು ಹೋಗಿದ್ದನ್ನು ಮರೆತಿರುವಂತಿದೆ’ ಎಂದು ಲೇವಡಿ ಮಾಡಿದರು.

‘ಜೆಡಿಎಸ್‌ ನಿಮಿಷಕ್ಕೊಮ್ಮೆ ನಿಲುವು ಬದಲಾಯಿಸುತ್ತಿದೆ. ಒಮ್ಮೆ ಕಾಂಗ್ರೆಸ್‌ ಜತೆ ಕೈ ಜೋಡಿಸಿದರೆ ಮತ್ತೊಮ್ಮೆ ಬಿಜೆಪಿ ಜತೆ ಕೈ ಜೋಡಿಸುವ ಮೂಲಕ ಅನುಕೂಲ ಸಿಂಧು ರಾಜಕಾರಣ ಮಾಡುತ್ತಿದೆ. ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ದೇವೇಗೌಡ ಎಂಬ ದಿಗ್ಗಜನನ್ನು ಬಿಜೆಪಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಲಿದೆ. ಕಾರ್ಯಕರ್ತರು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ಮುಟ್ಟಿಸುವ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು.

ಸಿದ್ದರಾಮಯ್ಯ ಪದಚ್ಯುತಿ ಸನ್ನಿಹಿತ
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್‌ನವರೇ ಪ್ರಯತ್ನಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಲೋಕಸಭಾ ಚುನಾವಣೆ ನಡೆದ ಆರು ತಿಂಗಳ ಬಳಿಕ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ’ ಎಂದು ಈಶ್ವರಪ್ಪ ಭವಿಷ್ಯ ನುಡಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದು­­ವರಿ­ಯು­ವುದು ಕಾಂಗ್ರೆಸ್ಸಿಗರಿಗೆ ಇಷ್ಟವಿಲ್ಲ. ಬಿಜೆಪಿ ಐದು ವರ್ಷದಲ್ಲಿ ಕಚ್ಚಾಡಿ ದರೆ, ಕಾಂಗ್ರೆಸ್‌ ಪಕ್ಷ ಆರೇ ತಿಂಗಳಲ್ಲಿ ಕಚ್ಚಾಡುತ್ತಿದೆ. ಸಿದ್ದರಾಮಯ್ಯ ಹೇಳುವುದು ಏನೂ ನಡೆಯುತ್ತಿಲ್ಲ. ಅವರು ಮುಖ್ಯಮಂತ್ರಿ­ಯಾಗಿ ಘೋಷಣೆ ಮಾಡಿದ್ದನ್ನು ಕಾಂಗ್ರೆಸ್‌ ಶಾಸಕರೇ ಒಪ್ಪುತ್ತಿಲ್ಲ’ ಎಂದು ವ್ಯಂಗ್ಯ ವಾಡಿದರು.

‘ಅನ್ನಭಾಗ್ಯ ಯೋಜನೆಯ ಅಕ್ಕಿ ಬಡವರಿಗೆ ದೊರಕುತ್ತಿಲ್ಲ. ಕಾಳಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಕಾಂಗ್ರೆಸ್‌ ಪಕ್ಷ ಮುಂಬರುವ ಲೋಕಸಭಾ ಚುನಾವಣೆಗೆ ಹಣ ಸಂಗ್ರ ಮಾಡುತ್ತಿದೆ’ ಎಂದು ಆರೋಪಿಸಿದ ಈಶ್ವರಪ್ಪ, ಕೆಲ ನಾಯಕರ ಕಿತ್ತಾಟದಿಂದಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿತು. ಇದೀಗ ಬಿಜೆಪಿಯ ಎಲ್ಲಾ ನಾಯಕರು ಒಂದಾಗಿ ದ್ದಾರೆ.

ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ರಾಜ್ಯದಲ್ಲಿ 22 ಸ್ಥಾನಗಳಲ್ಲಿ ಜಯಗಳಿಸ ಲಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ ಜಪ ದೇಶದಲ್ಲೆಡೆ ನಡೆಯು ತ್ತಿದೆ. 2ನೇ ಅಟಲ್‌ಬಿಹಾರಿ ವಾಜಪೇಯಿ ರೂಪದಲ್ಲಿ ನರೇಂದ್ರ ಮೋದಿ ಉದಯಿಸಿದ್ದಾರೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಗೋ. ಮಧುಸೂದನ್‌ ಮಾತನಾಡಿ, ‘ರೈತರು, ಮಣ್ಣಿನ ಮಕ್ಕಳ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್‌ ಕಳೆದ ವಿಧಾನಸಭೆಯ ಅಧಿವೇಶನದಲ್ಲಿ ರೈತರ ಪರವಾಗಿ ನಿಲ್ಲದೆ ಕಾಂಗ್ರೆಸ್‌ ಪರವಾಗಿ ನಿಲ್ಲುವ ಮೂಲಕ ತನ್ನ ಮುಖವಾಡ ಕಳಚಿಕೊಂಡಿದೆ. ಜಾತಿ ಹೆಸರೇಳಿ ಮತ ಬ್ಯಾಂಕ್‌ ರಾಜಕಾರಣ ಮಾಡುವುದು ಜೆಡಿಎಸ್‌ನ ಹೀನ ಪ್ರವೃತ್ತಿ ಯಾಗಿದೆ’ ಎಂದರು.

ಶಾಸಕ ಸಿ.ಟಿ. ರವಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರೇಣುಕುಮಾರ್‌, ಮಾಜಿ ಅಧ್ಯಕ್ಷರಾದ ನವಿಲೆ ಅಣ್ಣಪ್ಪ, ರಾಜ್ಯ ಉಪಾಧ್ಯಕ್ಷ ಅಶ್ವತ್ಥ ನಾರಾಯಣಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಮಿತ್‌ಕುಮಾರ್‌ಶೆಟ್ಟಿ, ಬಿ. ಜಯಶೀಲಾ ಜಯಶಂಕರ್‌, ಕೃಷ್ಣೇಗೌಡ, ಬಿಜೆಪಿ ಮುಖಂಡರಾದ ಡಾ.ನಾರಾಯಣಸ್ವಾಮಿ, ರವಿಶಂಕರ್‌ ಇತರರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.