ADVERTISEMENT

ಡಿಪ್ಲೊಮಾ: ಜಿಲ್ಲಾಮಟ್ಟದಲ್ಲೇ ಪರೀಕ್ಷೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಮೇ 2012, 4:45 IST
Last Updated 31 ಮೇ 2012, 4:45 IST

ಹಾಸನ: ರಾಜ್ಯದಲ್ಲಿ ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಕೋರ್ಸ್‌ಗಳ ಡಿಪ್ಲೊಮಾ ಪ್ರವೇಶಕ್ಕೆ ಪ್ರಸಕ್ತ ಸಾಲಿನಿಂದ ಕೇಂದ್ರೀಕೃತ ಕೌನ್ಸಿಲಿಂಗ್ ವ್ಯವಸ್ಥೆ ಜಾರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದಾಗಿದ್ದು, ಇದನ್ನು ಕೈಬಿಟ್ಟು ಜಿಲ್ಲಾ ಮಟ್ಟದಲ್ಲಿಯೇ ಪ್ರವೇಶ ಪರೀಕ್ಷೆಗಳನ್ನು ನಡೆಸಬೇಕು~ ಎಂದು ಆಗ್ರಹಿಸಿ ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್ತಿನ ನೇತೃತ್ವದಲ್ಲಿ ಬುಧವಾರ ಹಾಸನದಲ್ಲಿ           ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಸರ್ಕಾರ 2012-13ನೇ ಸಾಲಿನಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೌನ್ಸಿಲಿಂಗ್ ಮೂಲಕ ಪಾಲಿಟೆಕ್ನಿಕ್‌ಗಳಿಗೆ ಪ್ರವೇಶ ನೀಡಲು ಮುಂದಾಗಿದೆ. ಇದರಿಂದಾಗಿ ಪ್ರವೇಶ ಪಡೆಯಲು ಇಚ್ಛಿಸುವವರು ಕೌನ್ಸಿಲಿಂಗ್‌ಗಾಗಿ ಬೆಂಗಳೂರಿಗೆ ಹೋಗಬೇಕಾಗುತ್ತದೆ.

ಡಿಪ್ಲೊಮಾಗೆ ಬರುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಬಡ ಕುಟುಂಬದವರೇ ಇರುತ್ತಾರೆ. ಇಂಥವರು ಕೌನ್ಸಿಲಿಂಗ್‌ಗಾಗಿಯೇ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಈ ವ್ಯವಸ್ಥೆಯನ್ನು ಎಬಿವಿಪಿ ವಿರೋಧಿಸುತ್ತದೆ ಎಂದು ಪ್ರತಿಭಟನಾಕಾರರು ನುಡಿದರು.

ಹಿಂದೆ ಜಿಲ್ಲೆಯ ನೋಡೆಲ್  ಕೇಂದ್ರಗಳಲ್ಲೇ ಪರೀಕ್ಷೆ ನಡೆಸಲಾಗುತ್ತಿತ್ತು ಮತ್ತು ಈ ವ್ಯವಸ್ಥೆ ಚೆನ್ನಾಗಿಯೇ ನಡೆಯುತ್ತಿತ್ತು. ಪರೀಕ್ಷಾ ಪ್ರಾಧಿಕಾರ ಏಕಾಯೇಕಿ ಈ ಬದಲಾವಣೆ ಮಾಡಿರುವುದು ಸರಿಯಲ್ಲ. ಹೊಸ ವ್ಯವಸ್ಥೆಯನ್ನು ಕೈಬಿಟ್ಟು ಜಿಲ್ಲಾ ನೋಡಲ್ ಕೇಂದ್ರಗಳಲ್ಲೇ ಪ್ರವೇಶ ಪರೀಕ್ಷೆಗಳನ್ನು ನಡೆಸಬೇಕು.

ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಡಿ.ಡಿ ತೆಗೆಯುವಂತೆ ಪ್ರಾಧಿಕಾರ ಸೂಚಿಸಿದ್ದು, ಅದನ್ನು ವಾಪಸ್ ಪಡೆದು ಅರ್ಜಿ ಸಿಗುವ ಕೇಂದ್ರದಲ್ಲಿಯೇ ಹಣ ಪಾವತಿಸಲು ಅವಕಾಶ ಮಾಡಿಕೊಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ    ಎನ್.ಆರ್ ವೃತ್ತದ ಮೂಲಕ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿ.ಎಂ.ರಸ್ತೆಯಲ್ಲಿ ಸ್ವಲ್ಪ ಹೊತ್ತು ರಸ್ತೆತಡೆ ನಡೆಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಮನವಿ ಸಲ್ಲಿಸಿದರು. ರಾಜ್ಯ ಸಹಕಾರ್ಯದರ್ಶಿ ನರೇಶ್, ಅಮಿತ್, ರಾಕೇಶ್, ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.