ADVERTISEMENT

ತಂಬಾಕು ಬೆಲೆ ಕುಸಿತ: ರೈತರು ಹೈರಾಣ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 9:55 IST
Last Updated 23 ಫೆಬ್ರುವರಿ 2012, 9:55 IST

ರಾಮನಾಥಪುರ: ಇಲ್ಲಿನ ತಂಬಾಕು ಮಾರುಕಟ್ಟೆಯಲ್ಲಿ ದಾಖಲೆ ಪ್ರಮಾಣದಲ್ಲಿ ಬೆಲೆ ಕುಸಿತ ಕಾಣುತ್ತಿರುವ ಪರಿಣಾಮ ಕಷ್ಟಪಟ್ಟು ಹೊಗೆಸೊಪ್ಪು ಉತ್ಪಾದಿಸಿದ ರೈತರು ಹೈರಾಣಾಗಿ ಹೋಗಿದ್ದಾರೆ.

ಈ ಬಾರಿ ಪ್ರಾರಂಭದಿಂದಲೂ ಎರಡೂ ಮಾರುಕಟ್ಟೆಗಳಲ್ಲಿ ಬೆಲೆ ಏರಿಳಿತ ಸಾಮಾನ್ಯ ಎಂಬಂತಾಗಿದೆ. ಕೆಲ ದಿನಗಳಿಂದ ಗುಣಮಟ್ಟದ ತಂಬಾಕಿಗೆ ರೂ. 125 ನೀಡಲಾಗುತ್ತಿತ್ತು. ಇದೇ ರೀತಿಯ ಬೇಲ್‌ಗಳಿಗೆ ಬುಧವಾರ ದಿಢೀರ್ 100ರಿಂದ 110 ರೂಪಾಯಿಗೆ ಇಳಿಕೆ ಕಂಡಿತು.
 
ಇದಲ್ಲದೇ 50ರಿಂದ 90 ರೂಪಾಯಿಗೆ ಕೊಳ್ಳುತ್ತಿದ್ದ ಕಳಪೆ ದರ್ಜೆ ತಂಬಾಕನ್ನು 45 ರೂಪಾಯಿಯಷ್ಟು ಕಡಿಮೆ ದರಕ್ಕೆ ಇಳಿಸಿ ಖರೀದಿಸಲಾಯಿತು. ಆದರೂ ಮಾರುಕಟ್ಟೆಯಲ್ಲಿ ದಿನನಿತ್ಯ ಬೇಕಾಬಿಟ್ಟಿ ಬೆಲೆಗೆ ಖರೀದಿಸುತ್ತಿದ್ದರೂ ಮಂಡಳಿ ಅಧಿಕಾರಿಗಳು ಮತ್ತು ವರ್ತಕರನ್ನು ರೈತರು ಪ್ರಶ್ನಿಸುವಂತೆಯೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಕಡಿಮೆ ಬೆಲೆಗೆ ಕೂಗುತ್ತಿರುವುದರ ಬಗ್ಗೆ ಯಾರಾದರೂ ಚಕಾರ ಎತ್ತಿದವರಿಗೆ ಮಾರಾಟಕ್ಕೆ ಬೇಲ್‌ಗಳನ್ನೇ ತರದಂತೆ ಬೆದರಿಸಿ ದಬಾಯಿಸುತ್ತಾರೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ವರ್ಷದ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಈ ಬಾರಿ ನೀಡುತ್ತಿರುವ ಬೆಲೆ ತೀರ ಕಳಪೆಯಾಗಿದೆ. ಪ್ರಾರಂಭದಿಂದಲೂ ದರ ಕುಸಿತ ಕಂಡು ರೈತರನ್ನು ಸಮಸ್ಯೆಯ ಸುಳಿಗೆ ಸಿಲುಕಿಸಿದೆ. ಹೀಗಾಗಿ ಕಷ್ಟಪಟ್ಟು ಹೊಗೆಸೊಪ್ಪು ಬೆಳೆದವರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. ವರ್ಷವಿಡೀ ಕೂಲಿಯಾಳುಗಳ ಕೊರತೆ ನಡುವೆ ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿ ಬಡ್ಡಿ ಸಾಲ ಮಾಡಿಕೊಂಡು ಉತ್ಪಾದನಾ ಸಾಮಗ್ರಿಗಳಿಗೆ ದುಬಾರಿ ಬೆಲೆ ತೆತ್ತು ಉತ್ಪಾದಿಸಿದ ಆಸೆಯ ಬೆಳೆ ಕಡೇ ಗಳಿಗೆಯಲ್ಲಿ ಕೈಕೊಟ್ಟಿರುವುದು ನುಂಗಲಾರದ ತುತ್ತಾಗಿದೆ.

ಕನಿಷ್ಠ ತಂಬಾಕು ಬೆಳೆಯಲು ತಗಲುವ ಖರ್ಚನ್ನು ಲೆಕ್ಕ ಹಾಕಿದರೆ ಮಾರುಕಟ್ಟೆಯಲ್ಲಿ ನೀಡುತ್ತಿರುವ ದರ ಯಾವುದಕ್ಕೂ ಸಾಲದಾಗಿದೆ. ಮಾಡಿದ ಸಾಲವನ್ನಾದರೂ ತೀರಿಸಲು ಸಾಧ್ಯವಾಗದೇ ದಿಕ್ಕು ತೋಚದಾಗಿ ತಂಬಾಕು ಬೆಳೆದ ರೈತರು ಗೋಳಿಡಬೇಕಾದ ಪರಿಸ್ಥಿತಿ ಎದುರಾಗಿದೆ.

ತಗ್ಗಿದ ಆವಕ: ತಂಬಾಕು ಮಾರುಕಟ್ಟೆಯಲ್ಲಿ ದಿನೇ ದಿನೇ ಬೆಲೆ ಪಾತಾಳಕ್ಕೆ ಕುಸಿಯುತ್ತಿರುವುದರಿಂದ ಬೇಸತ್ತ ಕೆಲವು ರೈತರು ಇಂದಲ್ಲ ನಾಳೆ ಏರಿಕೆ ಕಾಣಬಹುದು ಎಂಬ ನಿರೀಕ್ಷೆಯಲ್ಲಿ ಮಾರುಕಟ್ಟೆಗೆ ಬೇಲ್‌ಗಳನ್ನು ತರುವುದನ್ನೇ ನಿಲ್ಲಿಸಿದ್ದಾರೆ.

ಅನಧಿಕೃತವಾಗಿ ಬೆಳೆದ ರೈತರು ಮಾತ್ರ ಬೇಲ್‌ಗಳನ್ನು ಸಿದ್ಧಪಡಿಸಿಕೊಂಡು ತಾತ್ಕಾಲಿಕವಾಗಿ ನೀಡಿರುವ ಕಾರ್ಡ್ ಮೇಲೆ ಮಾರಾಟ ಮಾಡಲು ಕಾಯುತ್ತಿದ್ದಾರೆ. ಇದರಿಂದಾಗಿ ಕಳೆದ ಕೆಲ ವಾರಗಳಿಂದ ಮಾರುಕಟ್ಟೆಗೆ ಆವಕವಾಗುತ್ತಿರುವ ತಂಬಾಕು ಬೇಲ್‌ಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.

ಇದೇ ತಿಂಗಳ 29ರಿಂದ ಮಾರ್ಚ್ ತಿಂಗಳ ಅಂತ್ಯದವರೆಗೆ ಆಂಧ್ರಪ್ರದೇಶದಲ್ಲಿರುವ ಎಲ್ಲ ತಂಬಾಕು ಮಾರುಕಟ್ಟೆಗಳಲ್ಲಿ ಹರಾಜು ಪ್ರಕ್ರಿಯೆಯು ಪ್ರಾರಂಭವಾಗಲಿದ್ದು, ಇಲ್ಲಿನ ಬಹುತೇಕ ವರ್ತಕರು ಅಲ್ಲಿಗೆ ತೆರಳಲಿದ್ದಾರೆ. ಹೀಗಾಗಿ ಇಲ್ಲಿನ ಮಾರುಕಟ್ಟೆಯಲ್ಲಿ ದರ ಏರಿಕೆಯಾಗುವ ಬಗ್ಗೆ ಹೇಳಲಾಗದು ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.