ADVERTISEMENT

ತಮಿಳಿಗಿಂತ ಕನ್ನಡ ಮೊದಲ ಭಾಷೆ: ಪ್ರೊ.ಟಿವಿವಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 9:05 IST
Last Updated 4 ಜನವರಿ 2011, 9:05 IST

ಮೈಸೂರು: ‘ತಮಿಳು ಭಾಷೆಗಿಂತ ಕನ್ನಡ ಭಾಷೆ ಮೊದಲು. ಈ ಮಾತನ್ನು ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯ ಅವರು ಭಾಷಣವೊಂದರಲ್ಲಿ ಹೇಳಿದ್ದರು’ ಎಂದು ಹಿರಿಯ ವಿದ್ವಾಂಸ ಪ್ರೊ.ಟಿ.ವಿ.ವೆಂಕಟಾಚಲಶಾಸ್ತ್ರೀ ಅವರು ಇಲ್ಲಿ ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬನುಮಯ್ಯ ರಸ್ತೆಯ ದಳವಾಯಿ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ ‘ಬಿ.ಎಂ.ಶ್ರೀ ಜನ್ಮ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಶ್ರೀಕಂಠಯ್ಯ ಅವರೊಂದಿಗೆ ಒಡನಾಟ ಹೊಂದಿದ್ದವರು ಅವರಿಗೆ ತುಂಬಾ ಗೌರವ ನೀಡುತ್ತಿದ್ದರು. ಅವರು ಇಂಗ್ಲಿಷ್‌ನಲ್ಲಿ ಎಂಎ ಮಾಡಿದ್ದರೂ ಕನ್ನಡ ಭಾಷೆಯನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದರು. ಇದಕ್ಕೆ ಅವರು ಬರೆದ ಕೃತಿಗಳೇ ಸಾಕ್ಷಿ. ಆದರೆ ಶ್ರೀಕಂಠಯ್ಯ ಅವರ ನೆನಪಿನಾರ್ಥ ಕಾರ್ಯಕ್ರಮಗಳು ನಡೆಯುತ್ತಿರುವುದು ಬಹಳ ಕಡಿಮೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕನ್ನಡ ಭಾಷೆಗೆ ಅತ್ಯುನ್ನತ ಸ್ಥಾನ ಸಿಕ್ಕಲು ಬಿಎಂಶ್ರೀ ಅವರೇ ಕಾರಣ. ನವೋದಯಕ್ಕೆ ಹೊಸ ಆಯಾಮ ನೀಡಿದ ಅವರು ಕನ್ನಡದ ಗುಡಿಯ ಕಳಶ ಆಗದೆ ಕನ್ನಡದ ತಳಪಾಯವಾದರು. ಕನ್ನಡ, ಇಂಗ್ಲಿಷ್, ಲ್ಯಾಟಿನ್, ಗ್ರೀಕ್, ಸಂಸ್ಕೃತ ಇತರೆ ಭಾಷೆಗಳನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು’ ಎಂದು ತಿಳಿಸಿದರು. ‘ಕನ್ನಡದ ಕಾವಲು ನಾಯಿ ಎಂದು ಹೇಳಿಕೊಂಡಿದ್ದ ಬಿಎಂಶ್ರೀ ಅವರು, ಕನ್ನಡ ಭಾಷೆಗೆ ಬಿಸಿ ತಟ್ಟಿದರೆ ನಾನು ಬೊಗಳುತ್ತೇನೆ, ಕಚ್ಚುವುದಿಲ್ಲ. ಕನ್ನಡಕ್ಕೆ ಕನ್ನಡವೇ ಗತಿ, ಬೇರೊಂದು ಭಾಷೆ ಅಲ್ಲ. ಕನ್ನಡ ಭಾಷೆ ಉದ್ದಾರ ಮಾಡಿದರೆ, ಭಾರತ ಮಾತೆಯನ್ನು ಉದ್ದಾರ ಮಾಡಿದಂತೆ ಎಂಬ ಮಾತನ್ನು ಹೇಳಿದ್ದರು’ ಎಂದರು.

ನೆಹರು ಯುವಜನ ಕೇಂದ್ರದ ಸಮನ್ವಯಾಧಿಕಾರಿ ಎಂ.ಎನ್. ನಟರಾಜು, ದಳವಾಯಿ ಡಿ.ಇಡಿ ಸಂಸ್ಥೆಯ ಪ್ರಾಂಶುಪಾಲರಾದ ಆರ್.ವಿಮಲಾ, ಎಸ್.ಸಿ. ಚಂದ್ರೇಗೌಡ, ಗೌರವ ಕಾರ್ಯದರ್ಶಿ ಬಿ.ವಿದ್ಯಾಸಾಗರ ಕದಂಬ, ಎಂ.ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.