ADVERTISEMENT

ತಾ.ಪಂ ಉಪಾಧ್ಯಕ್ಷರಾಗಿ ಬಲ್ಲೇನಹಳ್ಳಿ ರವಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 5:40 IST
Last Updated 25 ಫೆಬ್ರುವರಿ 2012, 5:40 IST

ಬೇಲೂರು: ಇಲ್ಲಿನ ತಾಲ್ಲೂಕು ಪಂಚಾ ಯಿತಿ ಉಪಾಧ್ಯಕ್ಷರಾಗಿ ಬಿಜೆಪಿಯ ಬಲ್ಲೇನಹಳ್ಳಿ ರವಿ ಶುಕ್ರವಾರ  ಚುನಾಯಿತರಾದರು.

ಪ್ರಥಮ ಬಾರಿಗೆ ಬಿಜೆಪಿಗೆ ಉಪಾಧ್ಯಕ್ಷ ಸ್ಥಾನ ಒಲಿದು ಬಂದಿದೆ. ಜೆ.ಸಿ.ಮೋಹನ್‌ಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಬಿಜೆಪಿ ಯಿಂದ ಬಲ್ಲೇನಹಳ್ಳಿ ರವಿ ಮತ್ತು ಜೆಡಿಎಸ್ ನಿಂದ ಅಬ್ದುಲ್ ಸುಭಾನ್ ನಾಮಪತ್ರ ಸಲ್ಲಿಸಿದ್ದರು. 

9 ಮತಗಳನ್ನು ಪಡೆದ ಬಿಜೆಪಿಯ ಬಲ್ಲೇನಹಳ್ಳಿ ರವಿ ಅವರ ಆಯ್ಕೆಯನ್ನು ಚುನಾವಣಾಧಿ ಕಾರಿಯಾಗಿದ್ದ ಸಕಲೇಶಪುರ ಉಪ ವಿಭಾಗಾಧಿಕಾರಿ ಪಲ್ಲವಿ ಆಕುರಾತಿ ಘೋಷಿಸಿದರು.

ರವಿ ಅವರ ಪ್ರತಿಸ್ಪರ್ಧಿ ಜೆಡಿಎಸ್‌ನ ಅಬ್ದುಲ್ ಸುಭಾನ್ ಕೇವಲ 6 ಮತ ಪಡೆದು ಸೋಲು ಅನುಭವಿಸಿದರು. ಕಾಂಗ್ರೆಸ್‌ನ ಗಂಗಮ್ಮ ಮತ್ತು ಪವಿತ್ರ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದರೆ, ಕಾಂಗ್ರೆಸ್‌ನ ತುಂಬದೇವನಹಳ್ಳಿ ಕ್ಷೇತ್ರದ ಕಮಲಮ್ಮ ಮತ್ತು ಒಂದು ವಾರದಿಂದ ಬಿಜೆಪಿ ಪಾಳಯದಲ್ಲಿ ಗುರುತಿಸಿ ಕೊಂಡಿದ್ದ ಜೆಡಿಎಸ್‌ನ ಸಿದ್ದಾಪುರ ಕ್ಷೇತ್ರದ ಪೂರ್ಣಿಮಾ ಚುನಾವಣೆ ಸಂದರ್ಭದಲ್ಲಿ ಗೈರು ಹಾಜರಾಗುವ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪರೋಕ್ಷ ಬೆಂಬಲ ನೀಡಿದರು. ಜೆಡಿಎಸ್ ಪಾಳಯದಲ್ಲಿ ಗುರುತಿಸಿ ಕೊಂಡಿದ್ದ ಬಿಜೆಪಿಯ ಶೇಖರಯ್ಯ ಕೊನೆಗಳಿಗೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿ ಅಚ್ಚರಿ ಮೂಡಿಸಿದರು.
ತಹಶೀಲ್ದಾರ್ ಎನ್.ಎಸ್. ಚಿದಾ ನಂದ್, ತಾ.ಪಂ. ಇ.ಓ. ಶಿವಪ್ಪ ಹಾಜರಿದ್ದರು.

ಉಪಾಧ್ಯಕ್ಷರಾಗಿ ಆಯ್ಕೆಯಾದ ಬಲ್ಲೇನಹಳ್ಳಿ ರವಿ ಅವರನ್ನು ನಗರಾ ಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನವಿಲೆ ಅಣ್ಣಪ್ಪ, ತಾಲ್ಲೂಕು ಬಿಜೆಪಿ ಅಧ್ಯಕ್ಷ ರೇಣುಕುಮಾರ್, ಜಿ.ಪಂ. ಸದಸ್ಯರಾದ ಬಿ.ಜಯಶೀಲ, ಅಮಿತ್‌ಶೆಟ್ಟಿ, ಮುಖಂ ಡರಾದ ಬಿ.ಶಿವರುದ್ರಪ್ಪ, ಜಿ.ಕೆ. ಕುಮಾರ, ಅಭಿಗೌಡ, ವಿಕ್ರಂ, ನಾಗೇಶ್‌ಶೆಟ್ಟಿ, ಕಾಂತರಾಜ್, ಎಚ್.ಎಲ್.ಮೋಹನ್ ಅಭಿನಂದಿಸಿದರು. ರವಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರಲ್ಲದೆ, ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.