ADVERTISEMENT

ತೆರವಿಗೆ ಯತ್ನ; ಗ್ರಾ.ಪಂ ಅಧ್ಯಕ್ಷೆ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 9:50 IST
Last Updated 8 ಫೆಬ್ರುವರಿ 2011, 9:50 IST

ಅರಕಲಗೂಡು: ಕುಡಿಯುವ ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ಗ್ರಾ.ಪಂ. ನಿರ್ಣಯದಂತೆ ಕ್ರಮ ಕೈಗೊಳ್ಳಲು ಮುಂದಾದ ಅಧ್ಯಕ್ಷ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಅಂಕನಾಯನಕಹಳ್ಳಿ ಕಾವಲು ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

ವಡ್ಡರಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಸಾವಿತ್ರಮ್ಮ ಹಲ್ಲೆಗೆ ಒಳಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾ.ಪಂ. ವ್ಯಾಪ್ತಿಯ ಅಂಕನಾಯಕನಹಳ್ಳಿ ಕಾವಲು ಗ್ರಾಮದಲ್ಲಿ ನಾಲ್ಕು ಕುಟುಂಬಗಳು ವಾಸವಿದ್ದು, ಇವರಿಗೆ ಕಿರು ನೀರು ಯೋಜನೆ ಮೂಲಕ ನೀರು ಸರಬರಾಜು ನಡೆಯುತ್ತಿತ್ತು. ಮೂರು ಕುಟುಂಬಗಳು ಬೇರೆಡೆ ಮನೆ ನಿರ್ಮಿಸಿಕೊಂಡು ತೆರಳಿದ ಕಾರಣ ಶಿವಣ್ಣ ಎಂಬುವವರ ಕುಟುಂಬ ಮಾತ್ರ ಇಲ್ಲಿನ ಉಳಿದಿತ್ತು.

ಕಿರು ನೀರು ಯೋಜನೆಯ ಟ್ಯಾಂಕಿನ ಪೂರ್ಣ ನೀರು ಒಂದೇ ಕುಟುಂಬಕ್ಕೆ ಹೋಗುತ್ತಿದ್ದು, ಇವರು ಒಂದು ವರ್ಷದಿಂದ ಈ ನೀರನ್ನು ಬಳಸಿಕೊಂಡು ಜಮೀನಿನಲ್ಲಿ ಬೆಳೆ ಬೆಳೆಯುತ್ತಿದ್ದರು ಎನ್ನಲಾಗಿದೆ. ಈ ವಿಚಾರ ಗ್ರಾಮ ಪಂಚಾಯತಿ ಗಮನಕ್ಕೆ ಬಂದಾಗ ಸಭೆಯಲ್ಲಿ ಚರ್ಚೆ ನಡೆದ ಈ ಕುಟುಂಬಕ್ಕೆ ನಲ್ಲಿಯೊಂದನ್ನು ಅಳವಡಿಸಿ ನೀರು ನೀಡುವಂತೆ ಹಾಗೂ ಟ್ಯಾಂಕ್‌ನ್ನು ಗ್ರಾಮದ ಶಾಲೆಯ ಬಳಿಗೆ ಸ್ಥಳಾಂತರಕ್ಕೆ ಗ್ರಾ.ಪಂ. ನಿರ್ಣಯ ಕೈಗೊಂಡಿತ್ತು.

ಇದರಂತೆ ಕ್ರಮಕೈಗೊಳ್ಳಲು ಬುಧವಾರ ಎಂಜಿನೀಯರ್ ಸಂಗಡ ಸ್ಥಳಕ್ಕೆ ತೆರಳಿದ್ದ ಅಧ್ಯಕ್ಷೆ ಸಾವಿತ್ರಮ್ಮ ಅವರನ್ನು ಶಿವಣ್ಣ ಅವರ ಕುಟುಂಬದ ಸದಸ್ಯರು ಕಾರ್ಯ ನಿರ್ವಹಿಸದಂತೆ ತಡೆ ಒಡ್ಡಿದ್ದರು. ಈ ಬಗ್ಗೆ ಚರ್ಚಿಸಲು ಭಾನುವಾರ ಗ್ರಾಮಸ್ಥರು ಪಂಚಾಯತಿ ನಡೆಸುತ್ತಿದ್ದ ವೇಳೆ ಶಿವಣ್ಣ, ದಿನೇಶ, ವೆಂಕಟರಾಮು ಎಂಬುವವರು ದಲಿತ ಮಹಿಳೆಯಾದ ತಮ್ಮನ್ನು ಜಾತಿ ಹೆಸರಿನಿಂದ ನಿಂದನೆ ಮಾಡಿದ್ದಲ್ಲದೆ ಹಲ್ಲೆ ನಡೆಸಿದರು ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾವಿತ್ರಮ್ಮ ಪತ್ರಕರ್ತರಿಗೆ ತಿಳಿಸಿದರು.ಗಲಾಟೆಯಲ್ಲಿ ತಮ್ಮ ಎರಡು ಉಂಗುರ, ವಾಚ್ ಹಾಗೂ ಮೊಬೈಲ್ ಕಳುವಾಗಿವೆ ಎಂದರು ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿರುವುದಾಗಿ ಹೇಳಿದರು.

ನಿರ್ಲಕ್ಷ ದೂರು: ಪ್ರಕರಣದ ಬಗ್ಗೆ ಭಾನುವಾರ ರಾತ್ರಿ ದೂರು ಸಲ್ಲಿಸಿದ್ದರೂ ಪೊಲೀಸರು ಪ್ರಕರಣದ ಬಗ್ಗೆ ತೀವ್ರ ನಿರ್ಲಕ್ಷ ತಾಳಿದ್ದಾರೆ ಎಂದು ಸಾವಿತ್ರಮ್ಮ ಆರೋಪಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮನ್ನು ಪೊಲೀಸರು ಭೇಟಿಮಾಡಿ ಪ್ರಕರಣದ ಬಗ್ಗೆ ವಿಚಾರಿಸಲಿಲ್ಲ. ವಿಷಯವನ್ನು ಶಾಸಕ ಎ.ಮಂಜು ಅವರ ಗಮನಕ್ಕೆ ತಂದು ಅವರು ಪೊಲೀಸರನ್ನು ಪ್ರಶ್ನಿಸಿದಾಗಷ್ಟೆ ಬಂದು ವಿಚಾರಿಸಿದರು ಎಂದು ದೂರಿದರು.
ಖಂಡನೆ: ದಲಿತ ಮಹಿಳೆ ಸಾವಿತ್ರಮ್ಮ ಅವರ ಮೇಲಿನ ಹಲ್ಲೆಯನ್ನು ದಸಂಸ ಮುಖಂಡ ಗಣೇಶ್ ವೇಲಾಪುರಿ ತೀವ್ರವಾಗಿ ಖಂಡಿಸಿದ್ದಾರೆ. ಹಲ್ಲೆ ಪ್ರತಿಭಟಿಸಿ ಸದ್ಯದಲ್ಲೆ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.