ADVERTISEMENT

ತೊಗಲುಗೊಂಬೆ ಕಲೆಗೆ ಪ್ರೋತ್ಸಾಹದ ಕೊರತೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 9:45 IST
Last Updated 26 ಸೆಪ್ಟೆಂಬರ್ 2011, 9:45 IST

ಹಾಸನ: ಪಾರಂಪರಿಕ ಕಲಾ ಪ್ರಕಾರಗಳಲ್ಲಿ ಒಂದಾದ ತೊಗಲುಗೊಂಬೆ ಕಲೆ ಪ್ರೋತ್ಸಾಹದ ಕೊರತೆಯಿಂದ ಮೂಲೆಗೊಂಪಾಗಿದ್ದು, ಇದರ ಉಳಿವಿಗೆ ಪ್ರಾಯೋಗಿಕ ನೆಲೆಯಲ್ಲಿ ಚಿಂತನೆ ಮತ್ತು ಅಧ್ಯಯನ ನಡೆಯಬೇಕಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ.ಲಕ್ಷ್ಮೀನಾರಾಯಣ ಸಾಮಗ ಅಭಿಪ್ರಾಯಪಟ್ಟರು.

ಹಾಸನ ಕಲಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಂಜುನಾಥ ತೊಗಲು ಗೊಂಬೆ ಕಲಾ ಸಂಘದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ತೊಗಲುಗೊಂಬೆ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತೊಗಲುಗೊಂಬೆಯಂತ ಹಲವಾರು ಪಾರಂಪರಿಕ ಕಲಾ ಪ್ರಕಾರಗಳು ಅಳಿವಿನಂಚಿನಲ್ಲಿರುವುದು ವಿಷಾದದ ಸಂಗತಿ ಎಂದರು.

ಯಾವುದೇ ಕಲೆ ಪ್ರಸ್ತುತ ಸಮಾಜಕ್ಕೆ ಹೊಂದಿಕೊಂಡು ಬದಲಾವಣೆಯಾಗದಿದ್ದರೆ ಸಮಾಜದೊಂದಿಗೆ ಮುನ್ನಡೆಯುವುದು ಕಷ್ಟ. ಪ್ರಸ್ತುತ ಸಮಾಜಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ಯಕ್ಷಗಾನ ಕಲೆ ಈಗಲೂ ತನ್ನದೇ ಆದ ಮಹತ್ವ ಉಳಿಸಿಕೊಂಡಿದೆ ಎಂದರು.

ಯಾವುದೇ ಕಲೆ ಉಳಿಯಲು ಪ್ರಮುಖವಾಗಿ ಆಶ್ರಯ ಮತ್ತು ಪ್ರೋತ್ಸಾಹ ಅತಿಮುಖ್ಯ. ಕಲಾ ಪ್ರದರ್ಶನಕ್ಕೆ ಅವಕಾಶವೇ ಇಲ್ಲದಿದ್ದರೆ ಕಲೆ ಉಳಿಯುವುದಾದರೂ ಹೇಗೆ ಎಂದು ಸಾಮಗ ಪ್ರಶ್ನಿಸಿದರು. ಕಲೆ ಉಳಿವಿಗೆ ಸರ್ಕಾರ ಹಣ ಬಿಡುಗಡೆ ಮಾಡಿದರೆ ಸಾಲದು, ಸಾರ್ವಜನಿಕರ ಸಹಕಾರವೂ ಕೂಡ ಅತಿಮುಖ್ಯ. ಯುವ ಪೀಳಿಗೆಗೆ ಚಿಕ್ಕ ವಯಸ್ಸಿನಿಂದಲೇ ಕಲೆಯ ಬಗ್ಗೆ ಆಸಕ್ತಿ ಬೆಳೆಸಬೇಕು ಎಂದು ಹೇಳಿದರು.

ತೊಗಲುಗೊಂಬೆಯಂತ ಪಾರಂಪರಿಕ ಕಲಾ ಪ್ರಕಾರಗಳು ತನ್ನದೇ ಆದ ವೈಶಿಷ್ಟ್ಯತೆಯಿಂದ ಕೂಡಿವೆ. ಇದನ್ನು ಉಳಿಸಿ ಬೆಳೆಸಲು ತಜ್ಞರು, ಕಲಾವಿದರು ಒಟ್ಟಾಗಿ ಸೇರಿ ಪ್ರಾಯೋಗಿಕ ನೆಲೆಗಟ್ಟಿನಲ್ಲಿ ಚಿಂತನೆ ನಡೆಸಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಎಸ್.ಪ್ರಕಾಶ್ ಮಾತನಾಡಿ, ಸ್ಥಳೀಯ ಕಲೆ ಮತ್ತು ಕಲಾವಿದರಿಗೆ ಗೌರವ ನೀಡಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ದಾಮೋದರ್, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ರಾಮೇಗೌಡ, ತೊಗಲು ಗೊಂಬೆ ಕಲಾವಿದರಾದ ಕಷ್ಣಯ್ಯ, ಶಾಂತಯ್ಯ, ಜಾನಪದ ವಿದ್ವಾಂಸ ಡಾ.ಟಿ.ಗೋವಿಂದಯ್ಯ, ರಾಷ್ಟ್ರಪ್ರಶಸ್ತಿ ವಿಜೇತ ಕಲಾವಿದ ಗುಂಡೂರಾಜ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.