ADVERTISEMENT

ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ಯೋಜನೆ –ಶಾಸಕ

ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಪ್ರಕಟ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 12:57 IST
Last Updated 1 ಜೂನ್ 2018, 12:57 IST

ಹಾಸನ: ‘ರಾಜ್ಯಕ್ಕೆ ಮಾದರಿ ಆಗುವ ರೀತಿ ನಗರ, ಸುತ್ತಲಿನ ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಲು ಯೋಜನೆ ರೂಪಿಸಲಾಗಿದೆ’ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.

‘ಮೂರು ತಿಂಗಳಲ್ಲಿ ನಗರಸಭೆ ಚುನಾವಣೆ ನಡೆಯಲಿದೆ. ಪ್ರಜ್ಞಾವಂತ ಮತದಾರರು ಬಿಜೆಪಿ ಬೆಂಬಲಿಸುವ ವಿಶ್ವಾಸವಿದೆ. ತಾಜ್ಯ ವಿಲೇವಾರಿ ಹಾಗೂ ಇತರ ಅಭಿವೃದ್ಧಿ ವಿಚಾರದಲ್ಲಿ 223 ಕ್ಷೇತ್ರದ ಜನಪ್ರತಿನಿಧಿಗಳು ಇಲ್ಲಿಗೆ ಬಂದು ಅಧ್ಯಯನ ಮಾಡುವಂತೆ ಬದಲಾವಣೆ ತರುತ್ತೇನೆ’ ಎಂದು ಗುರುವಾರ ಮಾಧ್ಯಮ ಸಂವಾದದಲ್ಲಿ ತಿಳಿಸಿದರು.

‘ಕಸ ವಿಲೇವಾರಿ ಮೂಲಕ ಸಾಮಾಜಿಕ ಜವಾಬ್ದಾರಿ ಆರಂಭಿಸಿರುವ ಕಾರಣ ಗಂಭೀರವಾಗಿ ಪರಗಣಿಸಿದ್ದೇನೆ. ಹಸಿ ಹಾಗೂ ಒಣ ಕಸ ಬೇರ್ಪಡಿಸಿ ಖಾಸಗಿ ಸಹಭಾಗಿತ್ವದಲ್ಲಿ ಗೊಬ್ಬರ ತಯಾರಿಸಿ ರೈತರಿಗೆ ನೀಡುವ ಉದ್ದೇಶವಿದೆ’ ಎಂದು ವಿವರಿಸಿದರು.

ADVERTISEMENT

‘ಹಾಸನ ಕ್ಷೇತ್ರ ಅಭಿವೃದ್ಧಿ ಕುರಿತು ಸಮಗ್ರ ಯೋಜನೆ ರೂಪಿಸಲಾಗಿದೆ. ಗುಂಡಿ ಹಾಗೂ ಧೂಳು ಮುಕ್ತ ರಸ್ತೆ, ಸ್ಥಳೀಯ ಮಟ್ಟದಲ್ಲೇ ಯುವಕರಿಗೆ ಉದ್ಯೋಗಾವಕಾಶ, ನಗರ ಹಾಗೂ ಸುತ್ತಮುತ್ತಲ ಬಡಾವಣೆಗಳಿಗೆ 24*7 ಕುಡಿಯುವ ನೀರು ಪೂರೈಕೆ. ಕೆರೆಗಳ ಅಭಿವೃದ್ಧಿ ಮತ್ತು ನೀರು ತುಂಬಿಸುವ ಕೆಲಸಕ್ಕೆ ಆದ್ಯತೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

‘ಸರ್ಕಾರದ ಅನುದಾನದಿಂದಲೇ ಅಭಿವೃದ್ಧಿ ಸಾಧ್ಯವಿಲ್ಲ. ಖಾಸಗಿ ಕೈಗಾರಿಕೆ ಹಾಗೂ ಉದ್ದಿಮೆಗಳ ಸಹಭಾಗಿತ್ವದಲ್ಲಿ ನಗರದ ಉದ್ಯಾನಗಳ ಅಭಿವೃದ್ಧಿ ಚಿಂತನೆಇದೆ. ನಗರದ ಉದ್ಯಾನಗಳ  ಬಗ್ಗೆ ಹುಡಾದಿಂದ ಮಾಹಿತಿ ಕೇಳಿದ್ದೇನೆ.’ ಎಂದು ತಿಳಿಸಿದರು.

‘ಗ್ರಾ.ಪಂ ಚುನಾವಣೆ ಎದುರಿಸದೆ ನೇರವಾಗಿ ವಿಧಾನಸಭೆ ಪ್ರವೇಶಿಸಿದ್ದೇನೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅರ್ಧಕ್ಕೆ ನಿಂತಿರುವ ಕಾಮಗಾರಿಗಳು ಹಾಗೂ ಮುಂದಿನ ಕಾಮಗಾರಿಗಳ ಕುರಿತು ಚರ್ಚೆ ನಡೆಸುತ್ತೇನೆ’ ಎಂದರು.

‘ಹೊಸ ಬಸ್ ನಿಲ್ದಾಣ ಸಮೀಪ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ತುರ್ತಾಗಿ ಆಗಬೇಕಿದ್ದು, ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೊಯೆಲ್ ಅವರನ್ನು ಜೂನ್‌ 15ರ ಒಳಗೆ ಭೇಟಿಯಾಗಿ ಸಮಸ್ಯೆ ಕುರಿತು ಚರ್ಚಿಸುತ್ತೇನೆ. ಡಿಸೆಂಬರ್ ವೇಳೆಗೆ ಕಾಮಗಾರಿ ಆರಂಭ ವಾಗಲಿದೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿಶ್ವಾಸ ಗಳಿಸಿ ಎಲ್ಲ ಕಾಮಗಾರಿ ಮಾಡಿಸಿ ಕೊಳ್ಳುತ್ತೇನೆ. ಕ್ಷೇತ್ರದ ಸರ್ವತೋಮುಖ ಬೆಳವಣಿಗೆಯೇ ನನ್ನ ಉದ್ದೇಶವಾಗಿದ್ದು, ವೈಯಕ್ತಿಕ ವರ್ಚಸ್ಸಿಗಾಗಿ ಏನನ್ನೂ ಮಾಡುವುದಿಲ್ಲ’ ಎಂದರು.

‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕ ಎಚ್.ಡಿ.ರೇವಣ್ಣ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡುವುದಿಲ್ಲ ಎಂಬ ನಂಬಿಕೆಯಿದೆ. ಹಿರಿಯರಾದ ಇತರೆ ಶಾಸಕರ ಸಲಹೆ, ಸಹಕಾರ ಪಡೆಯುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.