ADVERTISEMENT

ದೊಡ್ಡಕೆರೆ: ಹೂಳು, ಸಮಸ್ಯೆಗಳ ಗೋಳು

ಬಿ.ಎಂ.ರವೀಶ್
Published 14 ಅಕ್ಟೋಬರ್ 2012, 4:25 IST
Last Updated 14 ಅಕ್ಟೋಬರ್ 2012, 4:25 IST

ಬೇಲೂರು:  ಒಂದು ಕಾಲದಲ್ಲಿ ಇಡೀ ಊರಿಗೆ ನೀರುಣಿಸಿದ ಕೆರೆಗಳೆಲ್ಲ ಇಂದು ನಿರ್ವಹಣೆ ಇಲ್ಲದೆ, ಹೂಳು ತುಂಬಿ, ಗಿಡಗಂಟಿಗಳು ಬೆಳೆದು ನಿಂತಿರುವ ದೃಶ್ಯಗಳು ಎಲ್ಲ ಊರಿನಲ್ಲೂ ಕಂಡುಬರುತ್ತವೆ.  ಇದಕ್ಕೆ ಅಪವಾದವೆನಿಸುವಂತೆ ತಾಲ್ಲೂಕಿನ ನಾರಾಯಣಪುರ ಗ್ರಾಮದ ದೊಡ್ಡಕೆರೆ ನೋಡುಗರ ಮನಸೂರೆಗೊಳ್ಳುತ್ತದೆ.

ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿ ಗ್ರಾಮಕ್ಕೆ ತೆರಳುವಾಗ ಹೊಸಮೇನಹಳ್ಳಿ ಗ್ರಾಮದ ರಸ್ತೆ ಬದಿಯಲ್ಲಿ ಈ ಕೆರೆ ಕಾಣಸಿಗುತ್ತದೆ. 53 ಎಕರೆ ವಿಸ್ತೀರ್ಣ ಹೊಂದಿರುವ ದೊಡ್ಡಕೆರೆ 230 ಎಕರೆ ಪ್ರದೇಶದ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತಿದೆ.

ನಾರಾಯಣಪುರ ದೊಡ್ಡಕೆರೆ ಬಹು ಹಿಂದೆಯೇ ನಿರ್ಮಾಣಗೊಂಡಿದ್ದು. ಮಳೆಗಾಲದಲ್ಲಿ ತುಂಬಿ ಹರಿಯುವ ಈ ಕೆರೆ ಬೇಸಿಗೆಯಲ್ಲಿ ಬಹುತೇಕ ಬತ್ತಿ ಹೋಗುತ್ತದೆ. ಎಲ್ಲಾ ಕೆರೆಗಳಂತೆ ಈ ಕೆರೆಯ ಅಭಿವೃದ್ಧಿಯ ಬಗ್ಗೆಯೂ ಸರ್ಕಾರ ಮತ್ತು ಜಿಲ್ಲಾ ಪಂಚಾಯಿತಿ ನಿರಾಸಕ್ತಿಯನ್ನು ತೆಳೆದಿದೆ. ಇತ್ತೀಚೆಗೆ ಕೆರೆಯ ಅಭಿವೃದ್ಧಿಗೆ ಆರು ಲಕ್ಷ ರೂಪಾಯಿ ವೆಚ್ಚ ಮಾಡಿ ಏರಿ ಮತ್ತು ರಿವಿಟ್‌ಮೆಂಟ್ ನಿರ್ಮಿಸಲಾಗಿದೆಯಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕೆರೆಯ ಅರ್ಧ ಭಾಗಕ್ಕೆ ಮಾತ್ರ ರಿವಿಟ್‌ಮೆಂಟ್ ಕಟ್ಟಲಾಗಿದೆ.

ನಾರಾಯಣಪುರ ಮತ್ತು ಹೊಸಮೇನಹಳ್ಳಿಗಳಿಗೆ ಹೊಂದಿಕೊಂಡಂತಿರುವ ದೊಡ್ಡಕೆರೆ ಮೇಲೆ ತಿಳಿಯಾಗಿ ಕಂಡರೂ ಕೆಳಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಹೂಳು ತುಂಬಿ ಕೊಂಡಿದೆ. ಹೂಳು ತೆಗೆದು ದಶಕಗಳೇ ಕಳೆದಿವೆ. ಹೂಳು ತೆಗೆಸಿ ಕೆರೆಯಲ್ಲಿ ಹೆಚ್ಚಿನ ನೀರನ್ನು ನಿಲ್ಲಿಸಿ ರೈತರಿಗೆ ಅನುಕೂಲ ಕಲ್ಪಿಸಿ ಎಂಬ ಈ ಎರಡೂ ಗ್ರಾಮಸ್ಥರ ಬೇಡಿಕೆ ಇಲ್ಲಿಯವರೆಗೆ ಈಡೇರಿಲ್ಲ. ಇದರ ಜೊತೆಗೆ ಹಾಳಾಗಿರುವ ಚಿಕ್ಕ ತೂಬನ್ನು ದುರಸ್ತಿ ಪಡಿಸಬೇಕಾಗಿದೆ. ಕೆರೆಯ ಹೊರ ಭಾಗದಲ್ಲಿ ಬಾಕ್ಸ್ ಡ್ರೈನೇಜ್ ನಿರ್ಮಿಸಬೇಕಾಗಿದೆ.

ವಿಶಾಲವಾಗಿರುವ ನಾರಾಯಣಪುರ ದೊಡ್ಡಕೆರೆ ಮೀನು ಸಾಕಾಣಿಕೆಗೂ ಪ್ರಶಸ್ತ ಸ್ಥಳ. ನಾರಾಯಣಪುರ ಮತ್ತು ಹೊಸಮೇನಹಳ್ಳಿ ಗ್ರಾಮಸ್ಥರು ಕೂಡಿ ಸುಮಾರು ಒಂದು ಲಕ್ಷ ರೂಪಾಯಿ ಹಣ ಸಂಗ್ರಹಿಸಿ 50 ಸಾವಿರ ಮೀನು ಮರಿಗಳನ್ನು ಕೆರೆಯಲ್ಲಿ ಬಿಟ್ಟಿದ್ದಾರೆ. ಎರಡೂ ಗ್ರಾಮಗಳ ಜನರು ಸೇರಿ ಮೀನನ್ನು ಹಿಡಿಸುತ್ತಾರಲ್ಲದೆ ಪ್ರತಿ ಮನೆಯವರು ಮೀನನ್ನು ಹಂಚಿಕೊಳ್ಳುವುದು ಇಲ್ಲಿನ ವಿಶೇಷವಾಗಿದೆ.

ರಾಜ ಮಹಾರಾಜರ ಆಳ್ವಿಕೆಯಲ್ಲಿ ರೈತರ ಉಪಯೋಗಕ್ಕಾಗಿ ಪ್ರತಿ ಗ್ರಾಮಗಳಲ್ಲಿಯೂ ಕೆರೆಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ಆ ಮೂಲಕ ರೈತರು ತಮ್ಮ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆಯುತ್ತಿದ್ದರು. ಆದರೆ ಆಧುನಿಕ ಸರ್ಕಾರದ ಆಳ್ವಿಕೆಯ ಅವಧಿಯಲ್ಲಿ ಎಲ್ಲಿಯೂ ಒಂದೇ ಒಂದು ಕೆರೆ ನಿರ್ಮಾಣ ಮಾಡಿದ ಉದಾಹರಣೆಯೂ ಇಲ್ಲ.
ಈ ಹಿಂದೆ ನಿರ್ಮಾಣಗೊಂಡಿರುವ ಕೆರೆಗಳನ್ನು ಜೀರ್ಣೋದ್ಧಾರ ಮಾಡಿ ಅವುಗಳನ್ನು ಉಳಿಸಿ ರೈತರ ಜಮೀನಿಗೆ ನೀರಾವರಿ ಕಲ್ಪಿಸ ಬೇಕಾದ ಸರ್ಕಾರಗಳು ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ರೈತರ ಪ್ರಶ್ನೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.