ADVERTISEMENT

ಧಾರ್ಮಿಕ ನಂಬಿಕೆಯಿಂದ ಶಾಂತಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 19:30 IST
Last Updated 5 ಮಾರ್ಚ್ 2012, 19:30 IST

ಅರಸೀಕೆರೆ: `ದೇವತೆಗಳ ಆರಾಧನೆ ಹಾಗೂ ಧಾರ್ಮಿಕ ನಂಬಿಕೆಯಿಂದ ಜನರಲ್ಲಿ ಶಾಂತಿ, ನೆಮ್ಮದಿ, ಸಹಬಾಳ್ವೆ ಸಾಧ್ಯವಾಗಿದೆ~ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ನುಡಿದರು.

ತಾಲ್ಲೂಕಿನ ಯಳವಾರೆ ಗ್ರಾಮದಲ್ಲಿ ಸೋಮವಾರನಡೆದ ಗ್ರಾಮ ದೇವತೆ ಹುಚ್ಚಮ್ಮ ದೇವಿ ದೇವಾಲಯದ ವಿಮಾನ ಗೋಪುರ ಕಲಶ ಸ್ಥಾಪನೆ, ಮಹಾದ್ವಾರ ಉದ್ಘಾಟನೆ ಹಾಗೂ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

`ಸನಾತನ ಧರ್ಮ ಪರಂಪರೆಯಲ್ಲಿ ಸಾಧು-ಸಂತರು, ಋಷಿ ಮುನಿಗಳು ಯಜ್ಞ-ಯಾಗಾದಿಗಳನ್ನು ಮಾಡುತ್ತ ಬಂದಿದ್ದು, ಇದರ ಮೂಲ ಉದ್ದೇಶ ಮನುಷ್ಯ ಜೀವನ ಜಂಜಾಟಗಳಿಂದ ದೂರ ಬಂದು ಸಮೃದ್ಧಿಯಿಂದ ಜೀವನ ಸಾಗಿಸಲು ದಾರಿ ಮಾಡಿ ಕೊಡುವುದಾಗಿದೆ~ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ ಹಾರನಹಳ್ಳಿ, ಅನಾದಿ ಕಾಲದಿಂದಲೂ ನಾವು ಭಗವಂತನ ಮೇಲೆ ನಂಬಿಕೆ ಇಟ್ಟುಕೊಂಡಿದ್ದೆವು. ಆಗಲೂ ದೇವರನ್ನು ಅಲ್ಲಗಳೆಯುವವರು ಇದ್ದರು, ಈಗಲೂ ಇದ್ದಾರೆ. ರಾವಣ ಕಂಸನನ್ನು ಬಿಟ್ಟು ರಾಮನನ್ನು ಅನುಕರಣೆ ಮಾಡುವುದು ಒಳಿತು~ ಎಂದರು.

ಇದಕ್ಕೂ ಮೊದಲು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಪೀಠಾಧ್ಯಕ್ಷ ಶಿವಾನಂದ ಶಿವಯೋಗೀ ರಾಜೇಂದ್ರ ಸ್ವಾಮೀಜಿ ಹಾಗೂ ಬೆಲಗೂರು ಬಿಂದು ಮಾಧವ ಶರ್ಮಾ ದೇವಾಲಯಕ್ಕೆ ಆಗಮಿಸಿ ವಿಮಾನ ಗೋಪುರ ಕಲಶ ಪ್ರತಿಷ್ಠಾಪನೆ ಕಾರ್ಯ ನಡೆಸಿಕೊಟ್ಟರು.

ಶಾಸಕ ಕೆ.ಎಂ.ಶಿವಲಿಂಗೇಗೌಡ, ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಕಾರ್ಯದರ್ಶಿ ಬಿ.ಕೆ. ಮಂಜುನಾಥ್, ತಾ.ಪಂ. ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್, ಉಪಾಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT