ADVERTISEMENT

ನಶಿಸುತ್ತಿರುವ ಜನಪದ ಕಲೆಗಳು: ವಿಷಾದ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 8:00 IST
Last Updated 20 ಮಾರ್ಚ್ 2012, 8:00 IST

ಅರಸೀಕೆರೆ: ಎಲೆಕ್ಟ್ರಾನಿಕ್ ಮಾಧ್ಯಮಗಳ ಹಾವಳಿಯಿಂದಾಗಿ ಜನಪದ ಕಲೆಗಳಿಗೆ ಇಂದು ಹೆಚ್ಚು ಮನ್ನಣೆ ದೊರೆ ಯುತ್ತಿಲ್ಲ. ಆದ್ದರಿಂದ ಬಹಳಷ್ಟು ಜನಪದ ಕಲೆಗಳು ನಶಿಸುತ್ತಿವೆ ಎಂದು ತಾಲ್ಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಎಚ್.ಜಿ. ರೇವಣ್ಣ ಶನಿವಾರ ವಿಷಾದಿಸಿದರು.

ಪಟ್ಟಣದ ಹೊಯ್ಸಳೇಶ್ವರ ಕಾಲೇಜು ಆವರಣದಲ್ಲಿ ಶಿವಕುಮಾರ ಬಳಗ ಹಾಗೂ ತರಳಬಾಳು ಯುವ ವೇದಿಕೆ ಸಂಯುಕ್ತಾಶ್ರಯದಲ್ಲಿ ಸಾಣೇ ಹಳ್ಳಿ ಶಿವ ಸಂಚಾರ ನಾಟಕೋತ್ಸವ ತಂಡದಿಂದ ಆಯೋಜಿಸಿರುವ ಮೂರು ದಿನಗಳ ನಾಟಕೋತ್ಸವ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾತನಾಡಿದರು.

ನಾಟಕ ಕಲೆ ಶತಮಾನಗಳ ಇತಿಹಾಸ ಹೊಂದಿದೆ. ಅಲ್ಲದೆ ರಂಗ ಕಲಾವಿದರು ಜನಪದ ಕಲೆಯಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನ ಪಡೆದುಕೊಂಡಿದ್ದಾರೆ. ಮನರಂಜನೆಯ ಜತೆಗೆ ಸಾಮಾಜಿಕ ಆರ್ಥಿಕ ಪ್ರಜ್ಞೆ ಮೂಡಿಸುವ ಪ್ರಯತ್ನವಾಗಿ ಪ್ರತಿಯೊಂದು ಹಳ್ಳಿಗಳಲ್ಲೂ ನಾಟಕಗಳ ಪ್ರದರ್ಶನ ನಡೆಯುತ್ತಿತ್ತು. ಆದರೆ ಇಂದು ಆಧುನಿಕತೆಯ ಭರಾಟೆಯಲ್ಲಿ ಯುವ ಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ಜನಪದ ಕಲೆಗಳನ್ನು ಮರೆಯುತ್ತಿದ್ದೇವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಎಸ್.ಸಿ. ಸಿದ್ದರಾಮಪ್ಪ ಮಾತನಾಡಿ, ಶಿವ ಸಂಚಾರ ನಾಟಕ ಕಲಾ ತಂಡ ಕಳೆದ 14 ವರ್ಷಗಳಲ್ಲಿ ವಿಭಿನ್ನ ವಸ್ತು, ವಿಷಯಗಳನ್ನೊಳ ಗೊಂಡ 42 ನಾಟಕಗಳ 2000ಕ್ಕೂ ಹೆಚ್ಚು ಪ್ರದರ್ಶನಗಳನ್ನು ನಾಡಿನ ಒಳಗೂ-ಹೊರಗೂ ನೀಡಿದೆ. ಅಲ್ಲದೆ ಲಕ್ಷಾಂತರ ಕಲಾಭಿಮಾನಿಗಳ ಮನ ತಣಿಸಿದೆ. ವಿಶೇಷವಾಗಿ ಗ್ರಾಮೀಣ ಜನತೆ ಶಿವಸಂಚಾರವನ್ನು ಬರ ಮಾಡಿ ಕೊಳ್ಳುವ ರೀತಿಯೇ ಅನನ್ಯವಾದುದು ಎಂದು ಅವರು ತಿಳಿಸಿದರು.

ಹೊಯ್ಸಳೇಶ್ವರ ಕಾಲೇಜಿನ ಪ್ರಾಂಶುಪಾಲ ಶಿವಸ್ವಾಮಿ, ಶಿವಕುಮಾರ ಬಳಗದ ಸಿಂಧಿಗೆರೆ ಮಹಲಿಂಗಸ್ವಾಮಿ, ತಾಲ್ಲೂಕು ತರಳಬಾಳು ಯುವ ವೇದಿಕೆ ಅಧ್ಯಕ್ಷ ಓಂಕಾರಮೂರ್ತಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಜಿ.ಎಸ್.ಚಂದ್ರಶೇಖರ್(ಬಾಬು), ಮುಖ್ಯ ಶಿಕ್ಷಕ ಶ್ರೀಕಂಠಪ್ಪ, ಯುವ ವೇದಿಕೆ ಕಾರ್ಯದರ್ಶಿ ಸಂಗಮೇಶ್, ಅಗ್ಗುಂದ ಶೇಖರಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.