ADVERTISEMENT

ನೇತ್ರಾವತಿಗೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಗರಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 5:15 IST
Last Updated 11 ಸೆಪ್ಟೆಂಬರ್ 2011, 5:15 IST

ಹಳೇಬೀಡು: ಖಾಸಗಿ ಶಾಲೆಗಳ ವ್ಯಾಮೋಹದಿಂದ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳು ನಗರ ಪಟ್ಟಣದಿಂದ ದೂರದಲ್ಲಿದ್ದರೂ ಮುಚ್ಚುತ್ತಿವೆ. ಆದರೆ ಶಿಕ್ಷಕಿಯರ ಉತ್ಸಾಹ, ಪೋಷಕರ ಸಹಕಾರ ಹಾಗೂ ಗ್ರಾಮಸ್ಥರ ಪ್ರೋತ್ಸಾಹದಿಂದ ಹಳೇಬೀಡು ಪಟ್ಟಣಕ್ಕೆ ಹೊಂದಿಕೊಂಡಿರುವ ಬಸ್ತಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉತ್ತಮ ಶಾಲೆ ಎಂದು ಪ್ರಸಿದ್ದಿಯಾಗಿದೆ.

1ರಿಂದ 5ನೇ ತರಗತಿವರೆಗೆ ನಡೆಯುತ್ತಿರುವ ಶಾಲೆಯಲ್ಲಿ ಇಬ್ಬರು ಉತ್ಸಾಹಿ ಶಿಕ್ಷಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷೆ ಹಾಗೂ ಭಯದ ವಾತವರಣ ಇಲ್ಲದೆ ವಿದ್ಯಾರ್ಥಿಗಳನ್ನು ಅಕ್ಕರೆಯಿಂದ ಮನೆಯ ಮಕ್ಕಳಂತೆ ಕಾಣುವುದು ಈ ಶಾಲೆಯ ಯಶಸ್ಸಿನ ಗುಟ್ಟು.

ಉಜ್ವಲ ಭವಿಷ್ಯವುಳ್ಳ ಮಕ್ಕಳಲ್ಲಿ ಉತ್ತಮ ಬೀಜ ಬಿತ್ತುವುದೆ ಮುಖ್ಯಶಿಕ್ಷಕಿ ನೇತ್ರಾವತಿ ಅವರ ಹೆಬ್ಬಯಕೆ. ಶಿಕ್ಷಕಿಯ ಸಾಧನೆಯನ್ನು ಗುರುತಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರ ದಿನದಿಂದ ಅತ್ಯುತ್ತಮ ಶಿಕ್ಷಕಿ ಎಂದು ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಿದೆ. ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿಯೂ ಇವರ ಮಡಿಲಿಗೆರಿದೆ.

ವಾತ್ಸಲ್ಯಮಯಿ ಶಿಕ್ಷಕಿ ನೇತ್ರಾವತಿ ಮಕ್ಕಳ ಪ್ರೀತಿ ಗಳಿಸಿರುವುದಲ್ಲದೆ ಗ್ರಾಮಸ್ಥರ ಮೆಚ್ಚುಗೆ ಗಳಿಸಿದ್ದಾರೆ. ಸರಳ ಸಜ್ಜನಿಕೆಯ ಸಹ ಶಿಕ್ಷಕಿ ಓಂಕಾರಮ್ಮ ಮುಖ್ಯ ಶಿಕ್ಷಕಿಗೆ ಬೆನ್ನುಲುಬಾಗಿ ದುಡಿ ಯುತ್ತಿದ್ದಾರೆ. ಮಕ್ಕಳು ತಪ್ಪಿಸಿಕೊಳ್ಳದೆ ಪ್ರತಿದಿನ ಹಾಜಾರಾಗುವಂತಹ ಆಕರ್ಷಣೆ ಶಾಲೆಯಲ್ಲಿದೆ. 

ಹಳ್ಳಿಗಳಿಂದ ನಗರ ಪಟ್ಟಣದ ದುಪ್ಪಟ್ಟು ವೆಚ್ಚದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಣಿಸುವ ಪ್ರವೃತ್ತಿ ಮಿತಿಮೀರಿ ಮುಂದುವರೆದಿರುವ ಕಾಲದಲ್ಲಿಯೂ ಹಳೇಬೀಡು ಪಟ್ಟಣ ಹಾಗೂ ಹತ್ತಿರದ ಗ್ರಾಮದ             ಮಕ್ಕಳು ಬಸ್ತಿಹಳ್ಳಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ.

ಸರ್ಕಾರದ ನಿಯಮದಂತೆ 1ರಿಂದ 3ನೇ ತರಗತಿವರೆಗೆ ನಲಿ ಕಲಿ, 4, 5ನೇ ತರಗಳಿಗೆ ಕಲಿ ನಲಿ ಪದ್ದತಿಯಲ್ಲಿ ಪಠ್ಯಚಟುವಟಿಕೆ ನಡೆಯುತ್ತಿದೆ. ಶಿಕ್ಷಕರ ಸಹಾಯದಿಂದ ಮಕ್ಕಳೇ ಮಾದರಿಗಳನ್ನು ತಯಾರಿಸಿ ಪ್ರಾಯೋಗಿಕವಾಗಿ ಕಲಿಯು ತ್ತಾರೆ.

ತರಗತಿ ಗ್ರಂಥಾಲಯದಲ್ಲಿ ಪುಸ್ತಕ ಓದಿದ ವಿದ್ಯಾರ್ಥಿಗಳು ರಿಜಿಸ್ಟರ್‌ನಲ್ಲಿ ನಮೂದಿಸಿ, ಟಿಪ್ಪಣಿ ಪುಸ್ತಕದಲ್ಲಿ ವಿವರಣೆ ಬರೆಯುತ್ತಾರೆ. ವಾರಕ್ಕೊಮ್ಮೆ ಸಾಂಸ್ಕೃತಿಕ ಚಟುವಟಿಕೆ ನಡೆಸಿ ಮಕ್ಕಳಲ್ಲಿ ವೇದಿಕೆ ಭಯ ಹೋಗಲಾಡಿಸುವ ಪ್ರಯತ್ನದಲ್ಲಿ ಶಿಕ್ಷಕರು ಯಶಸ್ವಿ ಯಾಗಿದ್ದಾರೆ. ಶಿಕ್ಷಕರು ಹಾಗೂ ಮಕ್ಕಳ ಚಟುವಟಿಕೆಯಿಂದ ಆಕರ್ಷಿತರಾದ ಪ್ರಗತಿಪರ ರೈತ ಮಹಿಳೆ ಭಾಗೀರಥಮ್ಮ 12 ಮಕ್ಕಳನ್ನು ದತ್ತು ಪಡೆದು ವರ್ಷದ ಶೈಕ್ಷಣಿಕ ವೆಚ್ಚದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಶಾಲೆಯ ಎಸ್‌ಡಿಎಂಸಿ ಸಹ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಉತ್ತಮ ಎಸ್‌ಡಿಎಂಸಿ ಪುರಸ್ಕಾರವನ್ನು ಪಡೆದಿದೆ.

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವಂತಹ ಕಾಲದಲ್ಲಿಯೂ ಬಸ್ತಿಹಳ್ಳಿ ಕಿರಿಯ ಪ್ರಾಥಮಿಕ ಶಾಲೆ ನಗರದ ಖಾಸಗಿ ಶಾಲೆಗಳಿಗಿಂತಲೂ ಉತ್ತಮವಾಗಿ ಮುನ್ನೆಡೆಯುತ್ತಿದೆ. ಗ್ರಾಮದಲ್ಲಿ ಶಾಲೆಯನ್ನು ಉಳಿಸಿ ಬೆಳೆಸಬೇಕೆಂಬುದು ಗ್ರಾಮಸ್ಥರ ಅಭಿಲಾಷೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.