ADVERTISEMENT

ನೋಡ ಬನ್ನಿ ದಸರಾ ಬೊಂಬೆಗಳ ವೈಭವ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 5:50 IST
Last Updated 18 ಅಕ್ಟೋಬರ್ 2012, 5:50 IST

ಹಾಸನ: ದಸರಾ ಆರಂಭವಾ ಯಿತೆಂದರೆ ಸಾಂಪ್ರದಾಯಿಕವಾಗಿ ಬೊಂಬೆಗಳನ್ನು ಕೂರಿಸುತ್ತ ಬಂದಿರುವ ಅನೇಕ ಮಹಿಳೆಯರಲ್ಲಿ ಸಂಭ್ರಮ ಆರಂಭವಾಗುತ್ತದೆ. ಹಬ್ಬ ಆರಂಭವಾಗುವು ದಕ್ಕಿಂತ ವಾರ ಮೊದಲೇ ಅಟ್ಟದ ಮೇಲಿಟ್ಟಿದ್ದ ಬೊಂಬೆಗಳನ್ನೆಲ್ಲ ತೆಗೆದು ಶುಚಿಮಾಡಿ, ಅವುಗಳಿಗೆ ಬಣ್ಣ ಬಣ್ಣದ ಬಟ್ಟೆ ಬರೆ ತೊಡಿಸಿ, ಹಬ್ಬ ಆರಂಭವಾಗುವ ದಿನ ಮನೆಯೊಳಗೆ ಒಪ್ಪವಾಗಿ ಜೋಡಿಸಿ ಸಂಭ್ರಮಿಸು ತ್ತಾರೆ. ಒಂಬತ್ತು ದಿನಗಳ ಕಾಲ ಮನೆಗೆ ಅತಿಥಿಗಳನ್ನು ಆಹ್ವಾನಿಸಿ, ಅವರಿಗೂ ಬೊಂಬೆಗಳನ್ನು ತೋರಿಸಿ, ಸಿಹಿತಿಂಡಿ, ಅರಸಿನ ಕುಂಕುಮ ನೀಡಿ ಗೌರವಿಸು ವುದು ದಶಕಗಳಿಂದ ಬಂದ ಸಂಪ್ರ ದಾಯ. ಇಂದಿಗೂ ಅನೇಕ ಮನೆಗಳಲ್ಲಿ ಮಹಿಳೆಯರು ಈ ಸಂಪ್ರದಾಯವನ್ನು ತಪ್ಪದೆ ಪಾಲಿಸುತ್ತ ಬಂದಿದ್ದಾರೆ.

ಹಾಸನದ ಸಾಲಗಾಮೆ ರಸ್ತೆಯ ಲ್ಲಿರುವ ಚಂದ್ರಶೇಖರ ಹಾಗೂ ಪಾರ್ವತಿ ಅವರು 46 ವರ್ಷಗಳಿಂದ ತಪ್ಪದೆ ಈ ಸಂಪ್ರದಾಯ ಪಾಲಿಸಿ ಕೊಂಡು ಬಂದಿದ್ದಾರೆ. ಈ ಮನೆಯ ವಿಶೇಷ ವೆಂದರೆ ಬರಿಯ ಸ್ಥಳೀಯ ಬೊಂಬೆಗಳಲ್ಲ, ಇಲ್ಲಿ ದೇಶದ ವಿವಿಧ ಭಾಗಗಳಿಂದ ಖರೀದಿಸಿ  ತಂದಿರುವ ಬೊಂಬೆ,ವಿದೇಶಿ ಬೊಂಬೆಗಳೂ ಇವೆ.

ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತ ಜೀವನವನ್ನು ಸವಿಯು ತ್ತಿರುವ ಚಂದ್ರಶೇಖರ್ ಅವರು ತಮ್ಮ ವೃತ್ತಿಯ ಅವಧಿಯಲ್ಲಿ ಮೈಸೂರು, ಮೆಡ್ರಾಸ್, ಉತ್ತರಪ್ರದೇಶ, ಗೋರಖ್‌ಪುರ, ಈಶಾನ್ಯ ರಾಜ್ಯಗಳು, ದಿಲ್ಲಿ ಹೀಗೆ ಹಲವು ರಾಜ್ಯ ಗಳಲ್ಲಿ ಸೇವೆ ಸಲ್ಲಿಸಿದವರು.

ದೇಶದ ಯಾವುದೇ ಮೂಲೆಯಲ್ಲಿದ್ದರೂ ಬೊಂಬೆ ಕೂರಿಸುವ ಸಂಪ್ರ ದಾಯ ಬಿಟ್ಟಿಲ್ಲ. ಜತೆಗೆ ಯಾವ ರಾಜ್ಯದಲ್ಲಿದ್ದರೋ ಆ ರಾಜ್ಯದ ಕೆಲವು ಬೊಂಬೆಗಳನ್ನೂ ಖರೀದಿಸಿ ತಮ್ಮ ಸಂಗ್ರಹಕ್ಕೆ ಸೇರಿಸಿಕೊಂಡಿದ್ದಾರೆ. ಇವರ ಮಗಳು-ಅಳಿಯ ಅಮೆರಿಕದಲ್ಲಿದ್ದಾರೆ. ಮಗ ಮತ್ತು ಸೊಸೆ ಮುಂಬೈನಲ್ಲಿದ್ದಾರೆ. ಅವರೂ ತಮ್ಮ ಮನೆಗಳಲ್ಲಿ ಈ ಸಂಪ್ರದಾಯ ಪಾಲಿಸುತ್ತಾರೆ. ಜತೆಗೆ ಅಲ್ಲಿಂದ ಕೆಲವು ಬೊಂಬೆಗಳನ್ನು ತಂದು ತಾಯಿ ಪಾರ್ವತಿ ಅವರಿಗೆ ನೀಡುತ್ತಾರೆ. ಪಾರ್ವತಿ ಅವರ ಸಂಗ್ರಹದಲ್ಲಿ ಈಗ ಅಮೆರಿಕ, ಜಪಾನ್ ಮುಂತಾದ ಕೆಲವು ರಾಷ್ಟ್ರಗಳ ಗೊಂಬೆಗಳೂ ಇವೆ.

ಕಾಲಕಾಲಕ್ಕೆ ಪ್ರದರ್ಶನದ ವಿಷಯಗಳಲ್ಲಿ ಬದಲಾವಣೆಗಳಾಗುತ್ತ ಬಂದಿವೆ. ಈಗ ಕಿರಾಣಿ ಅಂಗಡಿ, ದೋಸೆ ಕಾರ್ನರ್, ಫಾಸ್ಟ್ ಫೂಡ್, ಸಾರಿ ಸೆಂಟರ್, ಕ್ರೀಡಾ ಕೂಟ ಮುಂತಾದ ಹಲವು ಆಶಯಗಳು ಸೇರಿಕೊಂಡಿವೆ. ಒಂದು ಕೊಂಡರೆ ಇನ್ನೊಂದು ಉಚಿತ ಎಂಬ ಗ್ರಾಹಕರನ್ನು ಆಕರ್ಷಿಸುವ ಆಶಯ ಪ್ರದರ್ಶನದಲ್ಲಿದೆ.

`ಈಗ ವಯಸ್ಸಾಗಿದೆ. ಸಂಪ್ರದಾಯಕ್ಕೆ ಒಂದೆರಡು ಬೊಂಬೆಗಳನ್ನಿಟ್ಟರೆ ಸಾಕು ಎಂದು ಮಕ್ಕಳು ಹೇಳುತ್ತಾರೆ. ಆದರೆ ಸಮಾಧಾನವಾಗು ವುದಿಲ್ಲ. ಅದಕ್ಕೆ ಎಲ್ಲವನ್ನೂ ಜೋಡಿಸುತ್ತೇವೆ. ಸ್ಪರ್ಧೆಗಳಲ್ಲಿ ಭಾಗವಹಿಸಿ ಎನ್ನುವವರಿದ್ದಾರೆ. ಈಗ ಅದರಲ್ಲಿ ಆಸಕ್ತಿ ಉಳಿದಿಲ್ಲ. ಆತ್ಮ ಸಂತೋಷಕ್ಕೆ ಬೊಂಬೆಗಳನ್ನಿಟ್ಟು ಸಂಭ್ರಮಿಸುತ್ತೇವೆ~ ಎಂದು ಪಾರ್ವತಿ ನುಡಿಯುತ್ತಾರೆ.

ದಸರಾಗಿಂತ ಒಂದು ವಾರ ಮೊದಲೇ ಇದಕ್ಕೆ ಕೆಲಸಗಳು ಆರಂಭವಾಗುತ್ತವೆ. ದಸರಾ ಮುಗಿದ ಬಳಿಕ ನಾಲ್ಕು ದಿನ ಇವುಗಳನ್ನು ಕಟ್ಟಿ ಜೋಪಾನ ವಾಗಿ ಇಡಲು ಬೇಕಾಗುತ್ತವೆ ಎಂದು ಪತ್ನಿಗೆ ಪ್ರೋತ್ಸಾಹ, ಸಾಥ್ ನೀಡುತ್ತ ಬಂದಿರುವ ಚಂದ್ರಶೇಖರ್ ನುಡಿಯುತ್ತಾರೆ.

ಕಳೆದ 17ವರ್ಷಗಳಿಂದ ಬೊಂಬೆ ಕೂರಿಸುತ್ತ ಬಂದಿರುವ ಹೇಮಾವತಿ ನಗರದ ನಿವಾಸಿ ಪದ್ಮಾ ಶರ್ಮಾ ಅವರೂ ಅದೇ ಸಂಭ್ರಮದಲ್ಲಿ ಮನೆಯನ್ನು ಬೊಂಬೆಗಳಿಂದ ಅಲಂಕರಿಸಿದ್ದಾರೆ.

`ಹಿಂದೆ ಅತ್ತೆ ಸಣ್ಣ ಪ್ರಮಾಣದಲ್ಲಿ ಬೊಂಬೆ ಗಳನ್ನಿಡುತ್ತಿದ್ದರು. ಈಚಿನ ವರ್ಷಗಳಲ್ಲಿ  ಎಲ್ಲರೂ ಸೇರಿ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಇಟ್ಟು ಅತಿಥಿ ಆಹ್ವಾನಿಸಿ ಸಂಭ್ರಮಿಸುತ್ತಿದ್ದೇವೆ~ ಎಂದು ಪದ್ಮಾ ಶರ್ಮಾ ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.