ADVERTISEMENT

ನ್ಯಾಯಾಲಯಕ್ಕೆ ಮೂಲ ಸೌಕರ್ಯ: ಸಚಿವ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 10:15 IST
Last Updated 20 ಮಾರ್ಚ್ 2011, 10:15 IST

ಚನ್ನರಾಯಪಟ್ಟಣ: ಪ್ರಸಕ್ತ ಸಾಲಿನಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ವಿವಿಧ ನ್ಯಾಯಾಲಯದ ಕಟ್ಟಡ, ವಕೀಲರ ಸಂಘದ ಕಟ್ಟಡ, ವಸತಿ ಗೃಹ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್‌ಕುಮಾರ್ ಶನಿವಾರ ತಿಳಿಸಿದರು.
ಜಿಲ್ಲಾ ನ್ಯಾಯಾಂಗ ಇಲಾಖೆ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಹಿರಿಯ ಸಿವಿಲ್ ನ್ಯಾಯಾಲಯ ಕಟ್ಟಡದ ಶಂಕುಸ್ಥಾಪನೆ ಹಾಗೂ ವಕೀಲರ ಸಂಘದ ಕಟ್ಟಡ ಉದ್ಘಾಟಿಸಿದ ನಂತರ ಮಾತನಾಡಿದರು.

ರಾಜ್ಯದ ಅನೇಕ ಜಿಲ್ಲೆಗಳಿಂದ ಬೇಡಿಕೆ ಬರುತ್ತಿದ್ದು, ಅದಕ್ಕನುಸಾರವಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ ನ್ಯಾಯಾಲಯದ ಕಟ್ಟಡ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಕಳೆದ ವರ್ಷ 10 ಕೋಟಿ ರೂ. ಮೀಸಲಿರಿಸಲಾಗಿತ್ತು. ಈ ವರ್ಷ 200 ಕೋಟಿ ರೂ. ಇರಿಸಲಾಗಿದೆ. ಪಟ್ಟಣದಲ್ಲಿ ಆರಂಭಿಸಿರುವ ಕಟ್ಟಡದ ಕಾಮಗಾರಿಯನ್ನು 12 ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದರು.

ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಮಾತನಾಡಿದರು. ಹೈಕೋರ್ಟ್ ನ್ಯಾಯಾ ಮೂರ್ತಿ ಕೆ.ಎಲ್. ಮಂಜುನಾಥ್ ಮಾತನಾಡಿ, ಕೋರ್ಟ್‌ಗಳಲ್ಲಿ ವ್ಯಾಜ್ಯಗಳ ಸಂಖ್ಯೆ ಹೆಚ್ಚಾಗಲು ಸರ್ಕಾರ ಕಾರಣ. ವಿವಿಧ ಅಭಿವೃದ್ಧಿ ಯೋಜನೆಗೆ ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವಾಗ ರೈತರೊಂದಿಗೆ ಚರ್ಚೆ ನಡೆಸಿ ತಕ್ಷಣ ಪರಿಹಾರ ನೀಡಬೇಕು. ಅದನ್ನು ಬಿಟ್ಟು ಪರಿಹಾರ ನೀಡುವುದು ವಿಳಂಬವಾದರೆ ಅದು ಕೋರ್ಟ್ ಮೆಟ್ಟಿಲೇರುತ್ತದೆ. ಈ ಬಗ್ಗೆ ಹಿಂದಿನಿಂದಲೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.

ಹೈಕೋರ್ಟ್ ನ್ಯಾಯಾಧೀಶರಾದ ಎಸ್. ಅಬ್ದುಲ್ ನಜೀರ್, ಕೆ.ಎನ್. ಕೇಶವನಾರಾಯಣ, ಅರವಿಂದ್‌ಕುಮಾರ್, ಶಾಸಕರಾದ ಸಿ.ಎಸ್. ಪುಟ್ಟೇಗೌಡ, ಪಟೇಲ್ ಶಿವರಾಂ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಬಿ.ಸಿ. ಮುರಳೀಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಕೆ. ಸೋಮಶೇಖರ್ ಸ್ವಾಗತಿಸಿದರೆ, ವಕೀಲರ ಸಂಘದ ಕಾರ್ಯದರ್ಶಿ ಸಿ.ಎನ್. ನಾಗೇಶ್ ವಂದಿಸಿದರು.

ಸಿಎಂ ಬದಲಾವಣೆ ಇಲ್ಲ: ಸುರೇಶ್‌ಕುಮಾರ್
ಚನ್ನರಾಯಪಟ್ಟಣ:
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ 2 ದಿನದಿಂದ ಇಲ್ಲ-ಸಲ್ಲದ ವದಂತಿ ಸೃಷ್ಟಿಸಲಾಗುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್‌ಕುಮಾರ್ ಶನಿವಾರ ಇಲ್ಲಿ ಹೇಳಿದರು.

ಪಟ್ಟಣದಲ್ಲಿ  ಹಿರಿಯ ವಿಭಾಗದ ಸಿವಿಲ್ ನ್ಯಾಯಾಲಯದ ಕಟ್ಟಡ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಪಕ್ಷದ ಮುಖಂಡರಾದ ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಅನಂತಕುಮಾರ್, ಬಿಜೆಪಿಯನ್ನು ಸದೃಢವಾಗಿ ಸಂಘಟಿಸಿದ್ದಾರೆ. ಶಾಸಕರು ಎರಡು ಸಲ ಸಭೆ ಸೇರಿದಾಕ್ಷಣ ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.