ADVERTISEMENT

ಪಡೆದಿದ್ದು 79, ಕೊಟ್ಟಿದ್ದು 28 ಅಂಕ

ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿ ಯಡವಟ್ಟು, ನಕಲು ಪ್ರತಿಯಿಂದ ಬಹಿರಂಗ

​ಪ್ರಜಾವಾಣಿ ವಾರ್ತೆ
Published 28 ಮೇ 2018, 11:16 IST
Last Updated 28 ಮೇ 2018, 11:16 IST
ಪಡೆದಿದ್ದು 79, ಕೊಟ್ಟಿದ್ದು 28 ಅಂಕ
ಪಡೆದಿದ್ದು 79, ಕೊಟ್ಟಿದ್ದು 28 ಅಂಕ   

ಬ್ಯಾಡಗಿ: ಪಟ್ಟಣದ ಸೇಂಟ್ ಜಾನ್ ಪ್ರೌಢ ಶಾಲೆಯ ವಿದ್ಯಾರ್ಥಿ ಚಂದ್ರು ಕರಿಯಪ್ಪ ಛತ್ರದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ (ದ್ವಿತೀಯ ವಿಷಯ) 48 ಅಂಕದ ಬದಲಾಗಿ 99 ಪಡೆದಿರುವುದು ಉತ್ತರ ಪತ್ರಿಕೆಯ ನಕಲು ಪ್ರತಿಯ(ಸ್ಕ್ಯಾನ್) ಮೂಲಕ ಬೆಳಕಿಗೆ ಬಂದಿದೆ.

ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಯಾದ ಚಂದ್ರುವಿನ ಫಲಿತಾಂಶದ ಅಂಕಪಟ್ಟಿಯಲ್ಲಿ ಕನ್ನಡ ವಿಷಯದಲ್ಲಿ 20 ಆಂತರಿಕ ಮೌಲ್ಯಮಾಪನ ಮತ್ತು ಪರೀಕ್ಷೆಯ 28 ಅಂಕಗಳು ಸೇರಿದಂತೆ ಒಟ್ಟು 48 ಅಂಕ ಪಡೆದಿರುವುದಾಗಿ ನಮೂದಾಗಿತ್ತು. ಇದರಿಂದ ಸಂಶಯಗೊಂಡ ವಿದ್ಯಾರ್ಥಿ ಉತ್ತರ ಪತ್ರಿಕೆಯ ನಕಲು (ಸ್ಕ್ಯಾನ್) ತರಿಸಿಕೊಂಡಿದ್ದನು. ಅದರಲ್ಲಿ ಆಂತರಿಕ ಮೌಲ್ಯಮಾಪನದಲ್ಲಿ 20 ಹಾಗೂ ಪರೀಕ್ಷೆಯಲ್ಲಿ 79 ಅಂಕ ಪಡೆದಿರುವುದು ದೃಢಗೊಂಡಿದೆ.  

‘ಅಂಕಗಳನ್ನು ದಾಖಲಿಸುವಾಗ ಮೌಲ್ಯಮಾಪಕರು ಮಾಡಿದ ನಿರ್ಲಕ್ಷ್ಯದಿಂದ ಅನ್ಯಾಯವಾಗಿದೆ’ ಎಂದು ವಿದ್ಯಾರ್ಥಿಯ ಸಂಬಂಧಿ ಎನ್.ಡಿ.ಛತ್ರದ ಆರೋಪಿಸಿದ್ದಾರೆ.

ADVERTISEMENT

ಕನ್ನಡ ವಿಷಯದಲ್ಲಿ 51 ಅಂಕಗಳು ವ್ಯತ್ಯಾಸವಾಗಿರುವುದನ್ನು ಪರೀಕ್ಷಾ ಮಂಡಳಿ ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಉಳಿದಂತೆ ಪ್ರಥಮ ಭಾಷೆ  ಇಂಗ್ಲಿಷ್– 100,  ಹಿಂದಿ– 93, ಗಣಿತ– 84, ವಿಜ್ಞಾನ– 64 ಹಾಗೂ ಸಮಾಜ ವಿಜ್ಞಾನ– 96  ಅಂಕಗಳನ್ನು ಪಡೆದ ಬಗ್ಗೆ ಅಂಕ ಪಟ್ಟಿಯಲ್ಲಿ ದಾಖಲಾಗಿದೆ. ವಿಜ್ಞಾನ ವಿಷಯದ ಬಗ್ಗೆಯೂ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದಾಗಿ ಅವರು ತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುನಾಥ ಸ್ವಾಮಿ, ‘ವಿದ್ಯಾರ್ಥಿ ಹಾಗೂ ಶಾಲೆಯಿಂದ ಮಾಹಿತಿ ಪಡೆದುಕೊಂಡು ಪರೀಕ್ಷಾ ಮಂಡಳಿಗೆ ಪತ್ರಬರೆಯಲಾಗುವುದು’ ಎಂದರು.  

–ಪ್ರಮೀಳಾ ಹುನಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.