ADVERTISEMENT

ಬತ್ತಿದ್ದ ತಟ್ಟೆಕೆರೆಗೆ ಜೀವಸೆಲೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 6:56 IST
Last Updated 20 ಅಕ್ಟೋಬರ್ 2017, 6:56 IST
ಅರಕಲಗೂಡು ಸಮೀಪದ ಹೊನ್ನವಳ್ಳಿ ಗ್ರಾಮದ ಕೆರೆಗೆ ಕೊಳವೆ ಮೂಲಕ ನೀರು ಹಾಯಿಸುತ್ತಿರುವುದು
ಅರಕಲಗೂಡು ಸಮೀಪದ ಹೊನ್ನವಳ್ಳಿ ಗ್ರಾಮದ ಕೆರೆಗೆ ಕೊಳವೆ ಮೂಲಕ ನೀರು ಹಾಯಿಸುತ್ತಿರುವುದು   

ಅರಕಲಗೂಡು: ದಶಕದಿಂದ ನೀರಿಲ್ಲದೆ ಬತ್ತಿದ್ದ ಹೊನ್ನವಳ್ಳಿ ಗ್ರಾಮದ ಕೆರೆಗೆ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ತುಂಬಿಸಲಾಗುತ್ತಿದ್ದು, ಕೆರೆಗೆ ಮರುಜೀವ ಬಂದಂತಾಗಿದೆ. ಸಾಕಷ್ಟು ಮಳೆಯಾಗದ ಕಾರಣ ಗ್ರಾಮದ ಮುಂದಿರುವ ತಟ್ಟೆಕೆರೆ ಹತ್ತು ವರ್ಷಗಳಿಂದ ಬರಡಾಗಿತ್ತು. ಇದರಿಂದ ಗ್ರಾಮದ ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಎದುರಾಗಿತ್ತು.

‘ಗ್ರಾಮದಿಂದ ಮುಕ್ಕಾಲು ಕಿ.ಮೀ. ದೂರದಲ್ಲಿರುವ ಅರೇಹಳ್ಳ ತುಂಬಿ ವ್ಯರ್ಥವಾಗಿ ಹೇಮಾವತಿ ನದಿ ಸೇರುತ್ತಿರುವ ನೀರನ್ನು ಈ ಕೆರೆಗೆ ಹಾಯಿಸಿದರೆ ಗ್ರಾಮಸ್ಥರ ನೀರಿನ ಬವಣೆ ನೀಗುವುದಲ್ಲದೆ, ಅಂತರ್ಜಲದ ಮಟ್ಟ ಹೆಚ್ಚುತ್ತದೆ. ಕೊಳವೆ ಬಾವಿಗಳು ಮರುಪೂರಣಗೊಂಡು ಕುಡಿಯಲು ಹಾಗೂ ಕೃಷಿಗೆ ಅನುಕೂಲವಾಗುತ್ತದೆ’ ಎಂದು ಯೋಚಿಸಿದ ಗ್ರಾಮದವರೆ ಆದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಯೋಗಾರಮೇಶ್‌, ತಮ್ಮ ಅಲೋಚನೆಯನ್ನು ಗ್ರಾಮದ ಮುಖಂಡರು ಹಾಗೂ ಯುವಜನರೊಂದಿಗೆ ಚರ್ಚಿಸಿದರು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ಈ ಕುರಿತು ಕಾರ್ಯಪ್ರವೃತ್ತರಾಗಿ ಕೆರೆಗೆ ನೀರು ಹಾಯಿಸುವ ಯೋಜನೆಗೆ ಮುಂದಾದರು.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ‘ನೀರು ಹಾಯಿಸಲು ಅಗತ್ಯವಾದ ನೀರೆತ್ತುವ ಯಂತ್ರಕ್ಕಾಗಿ ಶೋಧ ನಡೆಸಿ, ಸಕಲೇಶಪುರದ ಕಾಫಿ ತೋಟವೊಂದರಲ್ಲಿ ಬಳಸುತ್ತಿದ್ದ 80 ಅಶ್ವ ಶಕ್ತಿಯ ಡಿಸೆಲ್‌ ಮೋಟಾರ್‌ ಅನ್ನು ಬಾಡಿಗೆಗೆ ತರಿಸಲಾಯಿತು. ಕೊಳವೆಗಳನ್ನು ಜೋಡಿಸಿ ವಾರದಿಂದ ನೀರನ್ನು ಪಂಪ್‌ ಮಾಡಿದ ಪರಿಣಾಮ ಸುಮಾರು ನಾಲ್ಕು ಎಕರೆ ವಿಸ್ತೀರ್ಣದ ಕೆರೆಯು ಶೇ 80ರಷ್ಟು ತುಂಬಿದೆ. 1.20 ಕೋಟಿ ಲೀಟರ್‌ ನೀರು ಸಂಗ್ರಹವಾಗಿದೆ’ ಎಂದರು.

ADVERTISEMENT

‘ಇನ್ನು ಒಂದರೆಡು ದಿನದಲ್ಲಿ ಕೆರೆ ಸಂಪೂರ್ಣ ತುಂಬಲಿದೆ. ಇದರಿಂದ ಗ್ರಾಮದ ಜನ ಹಾಗೂ ಜಾನುವಾರುಗಳ ನೀರಿನ ಬವಣೆಗೆ ಪರಿಹಾರ ದೊರಕಲಿದೆ. ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಸುಮಾರು ₹ 1.5 ಲಕ್ಷ ವೆಚ್ಚವಾಗಿದೆ. ಕೆರೆಯಲ್ಲಿ ಸುಮಾರು 25ರಿಂದ 30 ಸಾವಿರ ಮೀನಿನ ಮರಿಗಳನ್ನು ಸಾಕಲು ಉದ್ದೇಶಿಸಿದ್ದು, ಇದರಿಂದ ನೀರು ತುಂಬಿಸಲು ಮಾಡಿರುವ ಖರ್ಚು ವಾಪಸ್ಸಾಗಲಿದೆ’ ಎಂದರು. ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಪಿ.ಬೊಮ್ಮೇಗೌಡ, ಖಜಾಂಚಿ ಹೊನ್ನವಳ್ಳಿ ಲೋಕೇಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.