ADVERTISEMENT

ಬಾಗೂರು: ಒಡೆದ ಪೈಪ್ ದುರಸ್ತಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 6:55 IST
Last Updated 12 ಅಕ್ಟೋಬರ್ 2011, 6:55 IST

ಚನ್ನರಾಯಪಟ್ಟಣ: ಬಾಗೂರು ಏತ ನೀರಾವರಿ ಯೋಜನೆಯ ಪೈಪ್ ಒಡೆದು ನೀರು ಪೋಲಾಗುತ್ತಿದೆ. ಇದನ್ನು ದುರಸ್ತಿಗೊಳಿಸಬೇಕು ಎಂದು ಬಿಜೆಪಿ ಮುಖಂಡರು, ರೈತರು ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ಗೆ ಸೋಮವಾರ ಮನವಿ ಮಾಡಿದರು.

ಪೈಪ್ ಒಡೆದು 6 ತಿಂಗಳಾಗಿದೆ. ಈಗ ಕಾಮಗಾರಿ ಶುರು ಮಾಡಿದ್ದಾರೆ. ಕಲ್ಲೇಸೋಮನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಗೆ ರೂ.56 ಲಕ್ಷ ವ್ಯಯಮಾಡಲಾಗಿದೆ. ಈಗ ಕಾಮಗಾರಿ ಸ್ಥಗಿತಗೊಂಡಿದೆ. ಏತ ನೀರಾವರಿ ಯೋಜನೆ ಆರಂಭಿಸಿದ ಜಾಗ ಸೂಕ್ತವಾಗಿಲ್ಲ. ಹಾಗಾಗಿ ಯೋಜನೆಯನ್ನು ಬೇರೆ ಜಾಗಕ್ಕೆ ಸ್ಥಳಾಂತರಿಸಬೇಕು. ಹಲವು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಕಿರಿಯ ಎಂಜಿನಿಯರ್‌ಗಳಾದ ನಾಗೇಂದ್ರರಾವ್, ದೇವೇಂದ್ರ ಅವರನ್ನು ವರ್ಗಮಾಡಬೇಕು ಎಂದು ಆಗ್ರಹಿಸಿದರು.

ಮುಖ್ಯ ಎಂಜಿನಿಯರ್ ಬಾಲಕೃಷ್ಣ ಮಾತನಾಡಿ, ಬಾಗೂರು ಏತ ನೀರಾವರಿ ಯೋಜನೆಯ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲಾಗಿದೆ. 58 ಕ್ಯೂಸೆಕ್ ನೀರನ್ನು 7 ಕೆರೆಗಳಿಗೆ ಹರಿಸಲಾಗುತ್ತಿದೆ. ದ್ಯಾವೇನಹಳ್ಳಿ ಗ್ರಾಮದ ಬಳಿ ಗಾಡಿ ಸೇತುವೆ ನಿರ್ಮಿಸಲಾಗುವುದು. ಕಲ್ಲೇಸೋಮನಹಳ್ಳಿ ಏತ ನೀರಾವರಿ ಯೋಜನೆಯ ಕಾಮಗಾರಿ ಕಳೆದ 4 ವರ್ಷಗಳ ಹಿಂದೆ ಸ್ಥಗಿತಗೊಂಡಿದೆ ಎಂಬ ಮಾಹಿತಿ ಇದೆ. ಇದರ ದಾಖಲೆ ಪರಿಶೀಲಿಸುತ್ತೇನೆ ಎಂದರು.

ಓಬಳಾಪುರ ಏತ ನೀರಾವರಿ ಯೋಜನೆಗೆ ಎಕ್ಸ್‌ಪ್ರೆಸ್ ಲೈನ್ ವಿದ್ಯುತ್ ಸಂಪರ್ಕ ಒದಗಿಸಲಾಗುವುದು. ಇದರಿಂದ 500 ಎಕರೆಗೆ ನೀರು ಹರಿಸಲು ಅನುಕೂಲವಾಗಲಿದೆ. ಇಬ್ಬರು ಕಿರಿಯ ಎಂಜಿನಿಯರ್‌ಗಳ ವರ್ಗಾವಣೆ ಸಂಬಂಧ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.