ಹಾಸನ: `ತುಳಿತಕ್ಕೆ ಒಳಗಾದ ಎಲ್ಲ ವರ್ಗದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಬಾಬು ಜಗಜೀವನ್ ರಾಮ್ ಶ್ರಮಿಸಿದ್ದಾರೆ. ಹಸಿರು ಕ್ರಾಂತಿ ತಂದ ಮಹಾ ಪುರುಷ ಬಾಬೂಜಿ ಅವರ ವಿಚಾರ ಧಾರೆ ಸಮಾಜದಲ್ಲಿ ಶಾಶ್ವತವಾಗಿ ಉಳಿಯು ವಂತಾಗಬೇಕು~ ಎಂದು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ನುಡಿದರು.
ಬಾಬು ಜಗಜೀವನರಾಮ್ ಅವರ 105ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, `ಸರ್ಕಾರದಿಂದ ದೊರಕುವ ವಿವಿಧ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಜನತೆಗೆ ಒದಗಿಸಲು ಮತ್ತು ಸಣ್ಣ ಪುಟ್ಟ ಸಮಸ್ಯೆಗಳನ್ನು ಸ್ಥಳದಲ್ಲಿ ಬಗೆಹರಿಸಲು ಅಧಿಕಾರಿಗಳು ಮತ್ತು ಸಂಘಟನೆಗಳವರು ಪ್ರಯತ್ನಿಸಬೇಕು. ಜಗಜೀವನ್ ರಾಮ್ ವಿಶೇಷ ವ್ಯಕ್ತಿತ್ವ ಹೊಂದಿದ್ದವರು. ಸಮಾಜದ ಎಲ್ಲ ವರ್ಗದವರ ಏಳಿಗೆಗಾಗಿ ಹೋರಾಟ ಮಾಡಿದವರು. ಸಮಾಜದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕು. ಇತ್ತೀಚೆಗೆ ಈ ನಿಟ್ಟಿನಲ್ಲಿ ಸ್ವಲ್ಪ ಸುಧಾರಣೆಯಾಗುತ್ತಿರುವುದು ಉತ್ತಮ ಬೆಳವಣಿಗೆ~ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ, `ಗ್ರಾಮೀಣ ಪ್ರದೇಶದ ಹಿಂದುಳಿದ ಹಾಗೂ ತುಳಿತಕ್ಕೆ ಒಳಗಾದವರಿಗೆ ವಿವಿಧ ಇಲಾಖೆಗಳ ಮೂಲಕ ನೀಡಲಾಗುತ್ತಿರುವ ಸೌಲಭ್ಯಗಳನ್ನು ಪಡೆಯಲು ಶಕ್ತಿ ಇರುವುದಿಲ್ಲ. ಸಂಘಟನೆಗಳು ಇಂಥವರಿಗೆ ನೆರವು ನೀಡಬೇಕು~ ಎಂದರು.
ಜಿಲ್ಲಾಧಿಖಾರಿ ಕೆ.ಪಿ.ಮೋಹನ್ ರಾಜ್ ಮಾತನಾಡಿ `ಉನ್ನತ ಚಿಂತನೆಗಳಿದ್ದರೆ ಸಾಮಾನ್ಯ ಕುಲದಲ್ಲಿ ಹುಟ್ಟಿದ ವ್ಯಕ್ತಿಯೂ ಯಾವ ಎತ್ತರಕ್ಕೆ ಏರಬಹುದು ಎಂಬುದಲ್ಲೆ ಬಾಬು ಜಗಜೀವನ್ ರಾಮ್ ಒಳ್ಳೆಯ ಉದಾಹರಣೆ. ಅವರು ಉನ್ನತ ಸ್ಥಾನಕ್ಕಿಂತ ಕೆಲಸ ಮುಖ್ಯ ಎಂಬುದನ್ನು ಸಾಬೀತು ಪಡಿಸಿದವರು ಎಂದರು. ನಗರದಲ್ಲಿ ಬಾಬು ಜಗಜೀವನ್ ರಾಮ್ ಸ್ಮಾರಕ ಭವನ ನಿರ್ಮಾಣಕ್ಕೆ ಒಂದು ತಿಂಗಳೊಳಗೆ ನಿವೇಶನ ಒದಗಿಸುವುದಾಗಿ ತಿಳಿಸಿದರು.
ಡಿ.ಸಿ.ಸಿಬ್ಯಾಂಕ್ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ, ನಗರಸಭೆ ಅಧ್ಯಕ್ಷ ಸಿ.ಆರ್.ಶಂಕರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸುಲೋಚನಾ ರಾಮಕೃಷ್ಣ, ಜಿ.ಪಂ. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಕೆ.ದೇವಪ್ಪ ಮುಂತಾದವರು ಮಾತನಾಡಿದರು. ಡಾ. ವಿದ್ಯಾ ಹೆಚ್.ಎನ್.ಮುಖ್ಯ ಭಾಷಣ ಮಾಡಿದರು. ಎ.ಎಸ್.ಪಿ. ಮಾರ್ಟಿನ್, ಜಿ.ಪಂ. ಉಪ ಕಾರ್ಯದರ್ಶಿ ಹೆಚ್.ಸಿ.ಪುಟ್ಟಸ್ವಾಮಿ, ನಗರಸಭೆ ಆಯುಕ್ತ ಎಂ.ಸಿ.ನಾಗಭೂಷಣ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಹೆಚ್.ಎ. ನಾಗರಾಜು ಸ್ವಾಗತಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನಮನ ಸಲ್ಲಿಸಲಾಯಿತು.
ಸಮಾರಂಭದಲ್ಲಿ ಕಬ್ಬಳ್ಳಿ ತಮಟೆ ಕಲಾವಿದ ವೆಂಕಟೇಶ್, ನಿವೃತ್ತ ಲೆಕ್ಕಾಧಿಕಾರಿ ರಾಮಚಂದ್ರ ಸ್ವಾಮಿ ಹಾಗೂ ಪೌರ ಕಾರ್ಮಿಕರಾದ ಕೆ.ಲಕ್ಷ್ಮಮ್ಮ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.