ADVERTISEMENT

ಬಾಲಕೃಷ್ಣ, ಮಂಜೇಗೌಡಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 7:09 IST
Last Updated 7 ಜನವರಿ 2014, 7:09 IST

ಹಾಸನ: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಾಸಕ ಸಿ.ಎನ್‌. ಬಾಲಕೃಷ್ಣ, ಬಾಗೂರು ಮಂಜೇಗೌಡ ಹಾಗೂ ಜೆ.ಎಂ. ರಾಮಚಂದ್ರ ಅವರು ಹಾಸನ ಜಿಲ್ಲೆಯ ಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ.ಜಿಲ್ಲೆಯ ಮೂರು ಸ್ಥಾನಗಳಿಗೆ 21 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಭಾನುವಾರ (ಜ.5) ಚುನಾವಣೆ ನಡೆದಿತ್ತು.

ಸೋಮವಾರ ಬೆಳಿಗ್ಗೆ 9 ಗಂಟೆಗೆ ಇಲ್ಲಿನ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮತೆಣಿಕೆ ಕಾರ್ಯ ಆರಂಭವಾಗಿತ್ತು. ಜಿಲ್ಲೆಯಲ್ಲಿ ಚುನಾವಣೆ ಭಾರಿ ಕುತೂಹಲ ಮೂಡಿಸಿದ್ದರಿಂದ ಮುಂಜಾನೆಯಿಂದಲೇ ಕಾಲೇಜಿನ ಆವರಣದಲ್ಲಿ ನೂರಾರು ಜನರು ಸೇರಿದ್ದರು. ಮತ ಎಣಿಕೆ ಮುಗಿಯುವಾಗ ಸಂಜೆ ಆರುಗಂಟೆ ದಾಟಿತ್ತು.

ಹಾಸನ ಮತ್ತು ಚನ್ನರಾಯಪಟ್ಟಣ ತಾಲ್ಲೂಕುಗಳ ಮತಪೆಟ್ಟಿಗೆಗಳ ಎಣಿಕೆಯಾಗುತ್ತಿದ್ದಂತೆ ಗೆಲುವು ಯಾರದ್ದೆಂಬುದು ಬಹುತೇಕ ನಿಚ್ಚಳವಾಗಿತ್ತು.

ಆದರೆ ಬೇರೆ ಬೇರೆ ಸಮೀಕರಣಗಳಿಗಾಗಿ ಯಾರು ಎಷ್ಟು ಮತ ಪಡೆದಿದ್ದಾರೆ ಎಂಬ ಕುತೂಹಲ ಕೊನೆಯವರೆಗೂ ಉಳಿದಿತ್ತು.
ಅಂತಿಮವಾಗಿ ಬಿ.ಎನ್‌. ಮಂಜೇಗೌಡ (ಬಾಗೂರು) 13,871, ಸಿ.ಎನ್‌. ಬಾಲಕೃಷ್ಣ 12,950 ಹಾಗೂ ಜೆ.ಎಂ. ರಾಮಚಂದ್ರ 11,862 ಮತಗಳನ್ನು ಪಡೆದುಕೊಂಡು ಜಯಶಾಲಿಗಳೆನಿಸಿದರು.

ಪೊಲೀಸ್‌ ಜತೆ ಘರ್ಷಣೆ
ಮತ ಎಣಿಕೆ ಆರಂಭದಲ್ಲಿಯೇ ಜೆ.ಎಂ. ರಾಮಚಂದ್ರ ಅವರ ಬೆಂಬಲಿಗರು ಮತ್ತು ಪೊಲೀಸ್‌ ಅಧಿಕಾರಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಘರ್ಷಣೆ ನಡೆದು ಪೊಲೀಸರು ಲಾಠಿ ಬೀಸಿದ ಘಟನೆಯೂ ನಡೆಯಿತು.

ಬೆಳಿಗ್ಗೆಯೇ ಮೊಬೈಲ್‌ ಕಿತ್ತುಕೊಂಡರು ಎಂಬ ಕಾರಣಕ್ಕೆ ಒಬ್ಬ ಪೊಲೀಸ್‌ ಅಧಿಕಾರಿ ಹಾಗೂ ಕೆಲವು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯಾಹ್ನ ಅದು ಮರುಕಳಿಸಿ ಕೈಕೈ ಮಿಲಾಯಿಸುವ ಹಂತಕ್ಕೆ ಬಂತು.  ಈ ಸಂದರ್ಭದಲ್ಲಿ ಪರಸ್ಪರರು ಅಶ್ಲೀಲವಾಗಿ ಬೈದಾಡಿ, ಕೊನೆಗೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಘಟನೆಯಲ್ಲಿ ಅನಂತ್‌ ಎಂಬುವವರು ಗಾಯಗೊಂಡರು.

ಇದಾಗುತ್ತಿದ್ದಂತೆ ಸ್ವಲ್ಪ ಹೊತ್ತು ಮತ ಎಣಿಕೆಯ ಕೇಂದ್ರದ ಸುತ್ತ–ಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ಧಾವಿಸಿ ಬಂದ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರಶ್ಮಿ ಘಟನೆಯನ್ನು ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.