ADVERTISEMENT

ಬಿಟ್ಟಗೌಡನಹಳ್ಳಿ: ಸಮಸ್ಯೆಗಳ ಆಗರ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 9:28 IST
Last Updated 19 ಮಾರ್ಚ್ 2014, 9:28 IST

ಹಾಸನ: ನಗರ, ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಹಳ್ಳಿಗಳ ಸ್ಥಿತಿ ಯಾವತ್ತೂ ಮಲತಾಯಿ ಮಕ್ಕಳಂತೆ. ಪಟ್ಟಣದಲ್ಲಿ ಎಲ್ಲ ಸೌಕರ್ಯಗಳಿದ್ದರೂ ಪಕ್ಕದಲ್ಲಿನ ಹಳ್ಳಿಗಳ ಸ್ಥಿತಿ ಶೋಚನೀಯ. ಇದಕ್ಕೆ ಬಿಟ್ಟಗೌಡನಹಳ್ಳಿ ಹೊರತಲ್ಲ. ಹಾಸನ ನಗರದೊಳಗೇ ಇದ್ದರೂ, ನಗರಸಭೆ ವ್ಯಾಪ್ತಿಗೆ ಬಾರದೆ ಸಮೀಪದ ಬಿಟ್ಟಗೌಡನಹಳ್ಳಿಯ ಜನರು ಇಂಥ ಸಂಕಷ್ಟ ಎದುರಿಸುತ್ತಿದ್ದಾರೆ.

ಬಿಟ್ಟಗೌಡನಹಳ್ಳಿಗೆ ಹೋಗುವ ರಸ್ತೆಯೇ (ಅರಕಲಗೂಡು ರಸ್ತೆ) ಸರಿಯಾಗಿಲ್ಲ. ಗ್ರಾಮದಲ್ಲಿ ಕೆಲವು ಭಾಗಗಳಲ್ಲಿ ಕಾಂಕ್ರೀಟ್‌ ರಸ್ತೆಗಳು ನಿರ್ಮಾಣವಾಗಿದ್ದರೂ, ಅವೈಜ್ಞಾನಿಕವಾಗಿವೆ. ಶುಚಿತ್ವ ಕಾಣದ ಚರಂಡಿಗಳಲ್ಲಿ ಸದಾ ಕೆಟ್ಟ ವಾಸನೆ ಹೊರಸೂಸುತ್ತದೆ.

ಗ್ರಾಮದಲ್ಲಿ ಸಮುದಾಯಭವನ ನಿರ್ಮಾಣ ಕಾರ್ಯ ಆರಂಭವಾಗಿ ನಾಲ್ಕು ವರ್ಷವಾಗುತ್ತಾ ಬಂದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಆರು ತಿಂಗಳ ಹಿಂದೆ ಛಾವಣಿಗೆ ಶೀಟ್‌ ಹಾಕಿದ್ದಾರೆ. ಇದು ಪೂರ್ಣಗೊಳ್ಳುವುದು ಯಾವತ್ತು ಎಂದು ಗ್ರಾಮಸ್ಥರನ್ನು ಕೇಳಿದರೆ ಆಕಾಶದತ್ತ ಕೈತೋರಿಸಿ ‘ಅವನಿಗೇ ಗೊತ್ತು’ ಎನ್ನುತ್ತಾರೆ.

ಬಿಟ್ಟಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಆದರೆ, ಜನರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ.
ಈ ವರ್ಷ ಇನ್ನೂ ನೀರಿನ ಸಮಸ್ಯೆ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಆದರೆ, ಕುಡಿಯುವ ನೀರಿನ ಕೊರತೆ ಉಂಟಾಗಬಹುದೆಂಬ ಭೀತಿ ಜನರನ್ನು ಕಾಡುತ್ತಿದೆ. ಕಳೆದ ವರ್ಷ ಕೆಲವು ಕೊಳವೆಬಾವಿಗಳು ಬತ್ತಿದ್ದರಿಂದ ಸಮಸ್ಯೆಯಾಗಿತ್ತು. ಈ ವರ್ಷ ಈವರೆಗೆ ಅಂಥ ಗಂಭೀರ ಸಮಸ್ಯೆ ಕಾಣಿಸಿಲ್ಲ. ಮುಂದಿನ ದಿನಗಳ ಬಗ್ಗೆ ಏನನ್ನೂ ಹೇಳಲಾಗದು ಎನ್ನುತ್ತಾರೆ ಗ್ರಾಮಸ್ಥರು.

ನಿರಂತರ ಕೆಟ್ಟ ವಾಸನೆ
ಇಡೀ ಹಾಸನ ನಗರದ ಒಳಚರಂಡಿಯ ನೀರು ಬಿಟ್ಟಗೌಡನಹಳ್ಳಿಯಲ್ಲಿ ಸಂಗ್ರಹವಾಗುತ್ತದೆ. ಅಲ್ಲಿ ಅದರ ಸಂಸ್ಕರಣೆಯಾಗಬೇಕು. ಆದರೆ, ಈ ಪ್ರಕ್ರಿಯೆ ಸರಿಯಾಗಿ ನಡೆಯದೆ ಇಡೀ ಹಳ್ಳಿಯಲ್ಲಿ ಸದಾ ಕೆಟ್ಟ ವಾಸನೆ ಮೂಗಿಗೆ ತಾಗುತ್ತದೆ. ಈ ಘಟಕದ ಅಕ್ಕಪಕ್ಕದಲ್ಲಿ ನಿವೇಶನ, ಮನೆ ಹೊಂದಿದ್ದವರಲ್ಲಿ ಕೆಲವರು ಮನೆ, ಭೂಮಿ ಮಾರಾಟ ಮಾಡಿ ಹೊರ ಹೋಗಿದ್ದಾರೆ. ಉಳಿದವರು ಅನಿವಾರ್ಯವಾಗಿ ದುರ್ನಾತದಲ್ಲೇ ಬದುಕುತ್ತಿದ್ದಾರೆ.

ಹಿಂದೆ ಈ ಯುಜಿಡಿ ನೀರಿನಿಂದ ಉತ್ಪಾದನೆಯಾಗುವ ಗ್ಯಾಸ್‌ನಿಂದ ವಿದ್ಯುತ್‌ ತಯಾರಿಸುವ ಪ್ರಯತ್ನ ನಡೆದಿತ್ತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಬದಲಾಗುತ್ತಿದ್ದಂತೆ ಆ ಯೋಜನೆಗೂ ಕಲ್ಲುಬಿದ್ದಿದೆ. ಇದರಿಂದಾಗಿ ಹಳ್ಳಿ ಜನರಿಗೆ ದುರ್ವಾಸನೆ ನಿರಂತರವಾಗಿದೆ.
ನಗರಸಭೆಯಿಂದ ಅನತಿ ದೂರದಲ್ಲಿರುವ ಬಿಟ್ಟಗೌಡನಹಳ್ಳಿಯನ್ನು ನಗರಸಭೆಗೆ ಸೇರಿಸಿದರೆ ನಮ್ಮ ಕೆಲವು ಸಮಸ್ಯೆಗಳಿಗಾದರೂ ಪರಿಹಾರ ಲಭಿಸಬಹುದು ಎಂದು ಈ ಗ್ರಾಮದ ಜನರು ನಿರೀಕ್ಷಿಸುತ್ತಿದ್ದಾರೆ. ಸದ್ಯದಲ್ಲಿ ಅವರ ಕನಸು ನನಸಾಗುವಂತೆ ಕಾಣಿಸುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.