ADVERTISEMENT

ಬ್ಯಾಂಕ್‌ನಲ್ಲಿ ವಿದ್ಯುತ್ ಅವಘಡ: 6 ಕಂಪ್ಯೂಟರ್‌ಗೆ ಹಾನಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 7:00 IST
Last Updated 18 ಮಾರ್ಚ್ 2012, 7:00 IST

ರಾಮನಾಥಪುರ: ಕೆನರಾಬ್ಯಾಂಕ್ ಶಾಖೆಯಲ್ಲಿ ಶಾರ್ಟ್ ಸರ್ಕಿಟ್ ಉಂಟಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕಂಪ್ಯೂಟರ್, ದಾಖಲೆ ಹಾಗೂ ಪಿಠೋಪಕರಣಗಳು ಆಹುತಿಯಾದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಬ್ಯಾಂಕ್‌ನ 6 ಕಂಪ್ಯೂಟರ್, ಲೆಕ್ಕಪತ್ರಗಳು, ಪಿಠೋಪಕರಣ ಗಳು ಸುಟ್ಟು ಕರಕಲಾಗಿವೆ. ಇದರಿಂದ 10 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಶುಕ್ರವಾರ ಸಂಜೆ ಎಂದಿನಂತೆ ಬ್ಯಾಂಕ್ ವಹಿವಾಟಿನ ನಂತರ ಬಾಗಿಲು ಮುಚ್ಚಲಾಗಿತ್ತು. ಬೆಳಗಿನ ಜಾವ ಕಟ್ಟದಿಂದ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ಶಾಖಾ ವ್ಯವಸ್ಥಾಪಕ ಈರಣ್ಣ ಅವರಿಗೆ ಸುದ್ದಿ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದು ಬಾಗಿಲು ತೆಗೆದು ನೋಡಿದಾಗ ಕಚೇರಿಯೊಳಗೆ ಬೆಂಕಿ ಹೊತ್ತಿ ಉರಿಯುತ್ತಿತ್ತು. ತಕ್ಷಣವೇ ಅಗ್ನಿ ಶಾಮಕ ದಳಕ್ಕೆ ಸುದ್ದಿ ಮುಟ್ಟಿಸಲಾಯಿತು. ಒಂದು ಅಗ್ನಿಶಾಮಕ ವಾಹನದೊಂದಿಗೆ ಬಂದ ಹತ್ತು ಸಿಬ್ಬಂದಿ ಒಂದು ಗಂಟೆ ಕಾಲ ಶ್ರಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಆದರೆ, ಅಷ್ಟರಲ್ಲಾಗಲೇ ಸಾಕಷ್ಟು ಹಾನಿ ಸಂಭವಿಸಿತ್ತು. ಕಚೇರಿಯೊಳಗೆ ದಟ್ಟ ಹೊಗೆ ಆವರಿಸಿ ಭೂತದ ಬಂಗಲೆಯಂತೆ ಗೋಚರಿಸುತ್ತಿತ್ತು. ಕಂಪ್ಯೂಟರ್, ಯುಪಿಎಸ್‌ಗಳು ಸಿಡಿದ ರಭಸಕ್ಕೆ ಕಟ್ಟಡ ಮೇಲ್ಛಾವಣಿ ಸೀಲಿಂಗ್ ಕಿತ್ತು ಬಂದು ಘಟನೆ ಭೀಕರತೆಗೆ ಸಾಕ್ಷಿಯಾಗಿತ್ತು.

`ಘಟನೆ ಬಗ್ಗೆ ಮಾಹಿತಿ ನೀಡಿದ ಬ್ಯಾಂಕ್ ವ್ಯವಸ್ಥಾಪಕ ಈರಣ್ಣ, ಮೇಲು ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವಂತೆ ಕಾಣಿಸುತ್ತಿದೆ. ಸಾಮಾನ್ಯವಾಗಿ ಬ್ಯಾಂಕ್ ಒಳಗಿನ ಮುಖ್ಯ ಸ್ವಿಚ್ ಅನ್ನು ಬಾಗಿಲು ಹಾಕುವಾಗ ಆಫ್ ಮಾಡಲಾಗುತ್ತದೆ. ಆದರೆ, ಎಟಿಎಂಗೆ ಅಗತ್ಯವಾದ ಕಾರಣ ಯುಪಿಎಸ್ ಚಾಲನೆಯಲ್ಲಿತ್ತದೆ. ದುರಾದೃಷ್ಟಕ್ಕೆ ಈಗ ಅದೇ ವೈರ್‌ನಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ~ ಎಂದರು.
ಅದೃಷ್ಟವಶಾತ್ ಬ್ಯಾಂಕ್‌ನ ಸ್ಟ್ರಾಂಗ್ ರೂಂಗೆ ಯಾವುದೇ ಹಾನಿಯಾಗಿಲ್ಲ. ಇದರಿಂದ ಬ್ಯಾಂಕ್‌ನಲ್ಲಿದ್ದ 25 ಲಕ್ಷ ರೂಪಾಯಿ ನಗದು ಸುರಕ್ಷಿತವಾಗಿ ಉಳಿದಿದೆ.

ಗ್ರಾಹಕರ ಪರದಾಟ:
ಬ್ಯಾಂಕಿಗೆ ಬೆಂಕಿ ಬಿದ್ದಿರುವ ಸುದ್ದಿ ಅರಿಯದೇ ಶನಿವಾರ ವ್ಯವಹಾರಕ್ಕೆಂದು ಆಗಮಿಸಿದ ಗ್ರಾಹಕರು ಪರದಾಡುವಂತಾಯಿತು. ಸಾಲ ಮಂಜೂರಾಗಿರುವವರು ಹಣ ಪಡೆಯಲಾಗದೇ ತಮ್ಮಲ್ಲೇ ಪೇಚಾಡಿಕೊಂಡರು.

`ಭಾನುವಾರ ಸಂಜೆ ವೇಳೆಗೆ ಸುಟ್ಟಿರುವ ಎಲ್ಲಾ ವಸ್ತುಗಳನ್ನು ತೆರವು ಮಾಡಿ ಸೋಮವಾರದಿಂದ ಶಾಖೆ ಪುನರಾರಂಭ ಗೊಳ್ಳಲಿವೆ. ಎಲ್ಲ ದಾಖಲೆಗಳು ಕಂಪ್ಯೂಟರೀಕರಣ ಆಗಿರುವು ದರಿಂದ ಯಾವ ದಾಖಲೆಗಳೂ ನಷ್ಟವಾಗುವುದಿಲ್ಲ. ಗ್ರಾಹಕರು ಆತಂಕಕ್ಕೆ ಒಳಗಾಗಬೇಕಿಲ್ಲ~ ಎಂದು ಶಾಖಾ ವ್ಯವಸ್ಥಾಪಕ ಈರಣ್ಣ ಭರವಸೆ ನೀಡಿದರು.

ಭದ್ರತೆ ಇಲ್ಲ: ರಾಮನಾಥಪುರದಲ್ಲಿ ಹೊಗೆಸೊಪ್ಪು ಮಾರು ಕಟ್ಟೆ ಇರುವುದರಿಂದ ರೈತರು ಹಣಕಾಸು ವಹಿವಾಟು ನಡೆಯುವುದು ಇಲ್ಲಿನ ಕೆನರಾ ಬ್ಯಾಂಕ್ ಶಾಖೆಯಲ್ಲಿಯೇ. ಹೀಗಾಗಿ ಇಲ್ಲಿ ಎ.ಟಿ.ಎಂ. ಸಹ ಸೌಲಭ್ಯವನ್ನು ಒದಗಿಸಲಾಗಿದೆ. ಪ್ರತಿನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು        ನಡೆಯುತ್ತದೆ.

ಆದರೆ, ಬ್ಯಾಂಕ್‌ಗೆ ಭದ್ರತಾ ಸಿಬ್ಬಂದಿಯನ್ನೇ ನಿಯೋಜಿಸಿಲ್ಲ. ಒಂದು ವೇಳೆ ಸೆಕ್ಯೂರಿಟಿ ಗಾರ್ಡ್ ಇದ್ದಿದ್ದರೆ ಬೆಂಕಿ ಕಾಣಿಸಿಕೊಂಡ ತಕ್ಷಣವೇ ನಂದಿಸಿ ನಷ್ಟವಾಗುವುದನ್ನು ತಪ್ಪಿಸಬಹುದಿತ್ತು. ಘಟನೆಗೆ ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯವೂ ಕಾರಣ ಎನ್ನುವುದು ಸಾರ್ವಜನಿಕರ ಆರೋಪ. ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.