ADVERTISEMENT

ಭಾರಿ ಮಳೆ: ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 5:20 IST
Last Updated 11 ಅಕ್ಟೋಬರ್ 2011, 5:20 IST

ಹಾಸನ: ನಗರದಲ್ಲಿ ಸೋಮವಾರವೂ ಮಳೆಯ ಅಬ್ಬರ ಮುಂದುವರಿದಿದೆ.
ಭಾನುವಾರ ಸಂಜೆ ಮಳೆಯಾಗಿ ಕೆಲವು ಭಾಗಗಳಲ್ಲಿ ಮನೆಗೆ ನೀರು ನುಗ್ಗಿದ್ದರೆ, ಸೋಮವಾರದ ಮಳೆ ಗುಡುಗು, ಮಿಂಚು ಮಾತ್ರವಲ್ಲದೆ ಗಾಳಿಯನ್ನೂ ತನ್ನೊಂದಿಗೆ ಸೇರಿಸಿಕೊಂಡಿತ್ತು.

ಮಧ್ಯಾಹ್ನ 1.30ರ ಸುಮಾರಿಗೆ ನಗರದಲ್ಲಿ ಗುಡುಗು- ಮಿಂಚಿನಿಂದ ಕೂಡಿದ ಮಳೆ ಆರಂಭವಾಯಿತು. ಸುಮಾರು ಅರ್ಧ ಗಂಟೆ ಒಂದೇ ಸವನೆ ಮಳೆ ಸುರಿದ ಪರಿಣಾಮ ರಭಸದಿಂದ ನುಗ್ಗಿದ ನೀರಿಗೆ ಹರಿದು ಹೋಗಲು ವ್ಯವಸ್ಥೆ ಇಲ್ಲದೆ ಮನೆ- ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದೆ.

ಭಾನುವಾರದ ಮಳೆಯಿಂದ ಸಂಕಷ್ಟ ಅನುಭವಿಸಿದ್ದ ಹಳೆಯ ಬಸ್ ನಿಲ್ದಾಣದ ಸುತ್ತಲಿನ ಜನರಿಗೆ ಸೋಮವಾರ ಮತ್ತೆ ಅದೇ ಪರಿಸ್ಥಿತಿ ಎದುರಾಯಿತು. ಬಸ್ ನಿಲ್ದಾಣದ ಪಕ್ಕದ ಸನ್ಮಾನ್ ಹೋಟೆಲ್ ಮುಂದಿನ ರಸ್ತೆ, ಕಸ್ತೂರಬಾ ರಸ್ತೆ, ಬಿ.ಎಂ. ರಸ್ತೆಯ ಬಿಎಸ್‌ಎನ್‌ಎಲ್ ಭವನದ ಮುಂಭಾಗ ಹೀಗೆ ಹಲವು ಪ್ರದೇಶಗಳಲ್ಲಿ ನೀರು ತುಂಬಿದ್ದರಿಂದ ವಾಹನಗಳು ಮಾತ್ರವಲ್ಲ ಪಾದಚಾರಿಗಳೂ ಓಡಾಡಲು ಒದ್ದಾಡಿದರು.

ಮಳೆಯ  ಜತೆಗೆ ಬಿರುಗಾಳಿಯೂ ಬೀಸಿದ್ದರಿಂದ ನಗರದ ಅಲ್ಲಲ್ಲಿ ಸಣ್ಣ- ಪುಟ್ಟ ಮರಗಳು ಧರೆಗೆ ಉರುಳಿವೆ. ಜಿಲ್ಲಾ ಪಂಚಾಯಿತಿ ಪಕ್ಕದಲ್ಲೇ ಮರವೊಂದರ ಕೊಂಬೆಗಳು ಮುರಿದು ಬಿದ್ದಿದ್ದರಿಂದ ನೆರಳಿಗಾಗಿ ಮರದಡಿ ನಿಲ್ಲಿಸಿದ್ದ ಒಂದೆರಡು ಕಾರುಗಳು ಜಖಂಗೊಂಡಿವೆ. ಬಲವಾದ ಗಾಳಿಗೆ ಕೆಲವೆಡೆ ಮನೆಗಳ ಮೇಲೆ ಹಾಕಿದ್ದ ಡಿಶ್‌ಗಳು ಸಹ ಹಾರಿವೆ.

ನಗರದಲ್ಲಿ ಸಂಜೆಯೂ ಸುಮಾರು ಒಂದು ಗಂಟೆ ಕಾಲ ಮಳೆಯಾದರೂ ಈ ಮಳೆ ಯಾವುದೇ ಅಬ್ಬರವಿಲ್ಲದೆ ಶಾಂತವಾಗಿತ್ತು. ಹಲವು ದಿನಗಳಿಂದ ನಾಪತ್ತೆಯಾಗಿದ್ದ ಮಳೆ ಕಳೆದ ಎರಡು ದಿನಗಳಿಂದ ಮತ್ತೆ ಕಾಣಿಸಿರುವುದು ನಗರ ವಾಸಿಗಳಿಗೆ ಸಮಾಧಾನ ತಂದಿದೆ. ಆದರೆ ಹಾಸನ ನಗರ ಬಿಟ್ಟರೆ ಸುತ್ತ ಎಲ್ಲೂ ಮಳೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.