ADVERTISEMENT

ಮಕ್ಕಳ ಮೋಜಿಗೆ ಉದ್ಯಾನ: ಹಿರಿಯರಿಗಿಲ್ಲ ತಾಣ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 5:10 IST
Last Updated 9 ಅಕ್ಟೋಬರ್ 2011, 5:10 IST

ಬೇಲೂರು: ಪುರಸಭೆ ಆವರಣದ ್ಲಲಿರುವ ಉದ್ಯಾನವನದಲ್ಲಿ ಈಚೆಗೆ ಮಕ್ಕಳ ಆಟಿಕೆ ಸಾಮಗ್ರಿ ಅಳವಡಿಸ ಲಾಗಿದೆ. ಮಕ್ಕಳಿಗೆ  ದಸರಾ ರಜೆ ಮಜೆ ಅನುಭವಿಸಲು ಇದು ಖುಷಿ ತಂದಿದೆ.

ಬೇಲೂರು ಅಂತರರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿದ್ದರೂ ದೊಡ್ಡ ಪಟ್ಟಣವೇನಲ್ಲ. 25 ಸಾವಿರ ಜನಸಂಖ್ಯೆ ಇರುವ ಊರು.  ಸ್ಥಳೀಯರಿಗೆ ಹಾಗೂ ಮಕ್ಕಳಿಗೆ ದೇಗುಲ ಹೊರತು ಯಾವುದೇ ಮನರಂಜನೆ ಒದಗಿಸುವ ಕೇಂದ್ರ ಇಲ್ಲ. ಇದೀಗ ಪುರಸಭೆ ರೂ.1.75 ಲಕ್ಷ ವೆಚ್ಚದಲ್ಲಿ ಉದ್ಯಾನದಲ್ಲಿ ಮಕ್ಕಳ ಜೋಕಾಲಿ, ಜಾರುಗುಪ್ಪೆ ಇತರ ಆಟಿಕೆಗಳನ್ನು ಅಳವಡಿಸಿ ಮಕ್ಕಳಿಗೆ ಖುಷಿಯಿಂದ ಆಟವಾಡಲು ಅನುಕೂಲ ಕಲ್ಪಿಸಿದೆ.

ಬೇಲೂರಿನಲ್ಲಿ ಸಾರ್ವಜನಿಕರ ವಿಹಾರಕ್ಕೆ ಎಲ್ಲಿಯೂ ಉದ್ಯಾನವನಗಳಿಲ್ಲ. ಮುಂಜಾನೆ, ಸಂಜೆ ವಾಯುವಿಹಾರಕ್ಕೆ ಜನರು ಪಟ್ಟಣದ ಹೊರ ವಲಯದ ರಸ್ತೆ ಅವಲಂಬಿಸಬೇಕು. ಪಟ್ಟಣದ ಹೊರ ಭಾಗದಲ್ಲಿ ಮುಂಜಾನೆ ಕತ್ತಲು ಕವಿದಿರುವುದರಿಂದ ಹೆಂಗಸರು, ವೃದ್ಧರು ವಿಹಾರಕ್ಕೆ ತೆರಳಲು ಭಯಪಡುವ ಸ್ಥಿತಿ ಇದೆ. ಇನ್ನು ಸರ್ಕಾರಿ ಪಿಯು ಕಾಲೇಜು ಮೈದಾನ ವಾಯು ವಿಹಾರಕ್ಕೆ ಸೂಕ್ತವಾಗಿಲ್ಲ. ಮೈದಾನದ ತುಂಬಾ ಗುಂಡಿಗಳಿದ್ದು, ಇಲ್ಲಿ ವಾಕಿಂಗ್ ಮಾಡಲು ಹೋದರೆ ಅಪಾಯವೇ ಹೆಚ್ಚು. ಚೆನ್ನಕೇಶವ ದೇಗುಲದ ಮುಂಭಾಗದ ಕಟ್ಟೆ ವ್ಯಾಯಾಮದ ತಾಣವಾಗಿದೆ. ಮುಂಜಾನೆ ಪಟ್ಟಣಲ್ಲಿ ವ್ಯಾಯಾಮ ಮಾಡಲು ಸೂಕ್ತವಾದ ಸ್ಥಳಗಳಿಲ್ಲ. ಇದರಿಂದಾಗಿ ವಾಯು ವಿಹಾರಕ್ಕೆ, ಜಾಗಿಂಗ್‌ಗೆ ಬರುವ ಯುವಕರು, ವಯಸ್ಕರು, ವೃದ್ಧರಿಗೆ ದೇವಾಲಯದ ಕಟ್ಟೆಯೇ ವ್ಯಾಯಾಮದ ತಾಣವಾಗಿದೆ.

ಬೇಲೂರಿನಲ್ಲಿ ನಿರ್ಮಿಸಿರುವ ಬಹುತೇಕ ಹೊಸ ಬಡಾವಣೆಗಳಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಜಾಗಗಳನ್ನು ಅಕ್ರಮವಾಗಿ ಮಾರಲಾಗಿದೆ. ಈಚೆಗೆ ಗುರುಪ್ಪಗೌಡರ ಬೀದಿಯಲ್ಲಿ ಉದ್ಯಾನಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಅಕ್ರಮವಾಗಿ ಮಾರಿದ ವಿರುದ್ಧ ಕ್ರಮ ಕೈಗೊಂಡು ಸುಮಾರು 80 ಲಕ್ಷ ಬೆಲೆಯ ಜಾಗವನ್ನು ಉದ್ಯಾನವನಕ್ಕೆ ಬಿಡಿಸಿ ಕೊಂಡಿದ್ದೇ ಪುರಸಭೆಯ ಸಾಧನೆಯಾಗಿದೆ.

ಪುರಸಭೆಯ ಆವರಣದಲ್ಲಷ್ಟೇ ಅಲ್ಲದೆ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿರುವ ಓವರ್ ಹೆಡ್ ಟ್ಯಾಂಕ್ ಸಮೀಪವೂ ಉದ್ಯಾನವನ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಂಡಿದ್ದು, ಸುಮಾರು ರೂ. 2 ಲಕ್ಷ ಮೀಸಲಿಡಲಾಗಿದೆ ಎಂದು ಅಧ್ಯಕ್ಷ ಎಚ್.ಎಂ. ದಯಾನಂದ್ `ಪ್ರಜಾವಾಣಿ~ಗೆ ತಿಳಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.