ADVERTISEMENT

ಮತಯಂತ್ರ ಬಾವಿಗೆ ಎಸೆದ!

​ಪ್ರಜಾವಾಣಿ ವಾರ್ತೆ
Published 1 ಜನವರಿ 2011, 7:25 IST
Last Updated 1 ಜನವರಿ 2011, 7:25 IST

ಚನ್ನರಾಯಪಟ್ಟಣ: ನುಗ್ಗೇಹಳ್ಳಿ ಜಿ.ಪಂ. ವ್ಯಾಪ್ತಿಗೆ ಬರುವ ಚಿಕ್ಕೋನಹಳ್ಳಿ ಮತದಾನ ಕೇಂದ್ರಕ್ಕೆ ಶುಕ್ರವಾರ ನಸುಕಿನಲ್ಲಿ ನುಗ್ಗಿದ ವ್ಯಕ್ತಿಯೊಬ್ಬ ಮತಯಂತ್ರವನ್ನು ಕಸಿದು ಸಮೀಪದ ಬಾವಿಗೆ ಎಸೆದು ಪರಾರಿಯಾದ ಘಟನೆ ನಡೆದಿದೆ.

ಘಟನೆ ಹಿನ್ನೆಲೆಯಲ್ಲಿ ಮತಯಂತ್ರಗಳನ್ನು ರಕ್ಷಿಸಲು ವಿಫಲರಾಗಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಮತಗಟ್ಟೆಗೆ ನೇಮಿಸಿದ್ದ ಐದು ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಮತಗಟ್ಟೆ ಅಧಿಕಾರಿ ಎಂ.ಆರ್. ವೆಂಕಟಕೃಷ್ಣ, ಸಹಾಯಕ ಅಧಿಕಾರಿ ಲಕ್ಷ್ಮೇಗೌಡ, ಸಿಬ್ಬಂದಿಗಳಾದ ಕೆ. ಕುಸುಮ, ಜೆ.ಎಂ, ವನಜಾಕ್ಷಿ, ಕೆ.ಎನ್. ನೇತ್ರಾವತಿ ಅಮಾನತುಗೊಂಡಿರುವ ಅಧಿಕಾರಿಗಳು.

ಘಟನೆ ವಿವರ: ಪಿಆರ್‌ಓ, ಎಪಿಆರ್ ಸೇರಿ ಒಟ್ಟು ಆರು ಮಂದಿಯನ್ನು ಈ ಮತಗಟ್ಟೆಯಲ್ಲಿ ನಿಯೋಜಿಸಲಾಗಿತ್ತು. ಇವರಲ್ಲಿ ಮೂವರು ಮಹಿಳೆಯರು ಶಾಲೆಯ ಪಕ್ಕದ ಕೊಠಡಿಯಲ್ಲಿ ಮಲಗಿದ್ದರೆ, ಉಳಿದ ಮೂವರು ಇನ್ನೊಂದು ಕೊಠಡಿಯಲ್ಲಿ ಮಲಗಿದ್ದರು. ಮುಂಜಾನೆ 5 ಗಂಟೆ ಸುಮಾರಿಗೆ ಪಿಆರ್‌ಓ ಮತ್ತು ಅರಣ್ಯ ಇಲಾಖೆಯ ಜಾಗೃತದಳದ ಸಿಬ್ಬಂದಿ ಬಹಿರ್ದೆಸೆಗೆ ತೆರಳಿದ್ದರು. ಆಗ ಕೊಠಡಿಯಲ್ಲಿ ಎಪಿಆರ್‌ಓ  ಮಾತ್ರ ಇದ್ದರು. ಈ ಸಂದರ್ಭದಲ್ಲಿ ಯಾರೋ ಬಾಗಿಲು ಬಡಿದ ಶಬ್ದವಾಯಿತು. ಪಕ್ಕದ ಕೊಠಡಿಯಲ್ಲಿ ಮಲಗಿದ್ದ ಮಹಿಳೆಯರು ಚುನಾವಣಾ ತಯಾರಿಗೆ ಬಂದಿರಬಹುದು ಎಂದು ಭಾವಿಸಿದ ಎಪಿಆರ್‌ಓ ಬಾಗಿಲು ತೆರೆದರು. ಈ ಸಂದರ್ಭದಲ್ಲಿ ಏಕಾಏಕಿ ಒಳಗೆ ನುಗ್ಗಿದ ಅಜ್ಞಾತ ವ್ಯಕ್ತಿಯೊಬ್ಬ ಎಪಿಆರ್‌ಓ ಅವರನ್ನು ತಳ್ಳಿ ಮತಯಂತ್ರವನ್ನು ಹೊತ್ತು ಪರಾರಿಯಾದ. ಆ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದ್ದರಿಂದ ವ್ಯಕ್ತಿ ಮುಖವೂ ಸರಿಯಾಗಿ ಕಾಣಿಸಲಿಲ್ಲ.

ಘಟನೆ ನಡೆದು ಸ್ವಲ್ಪ ಸಮಯದ ನಂತರ ಊರಿನ ಮಹಿಳೆಯೊಬ್ಬರು ಬಾವಿಯಲ್ಲಿ ಮತಯಂತ್ರ ತೇಲುತ್ತಿರುವ ವಿಷಯವನ್ನು ಅಧಿಕಾರಿಗೆ ತಿಳಿಸಿದರು. ಬಳಿಕ ಬಾವಿಗೆ ಇಳಿದು ಯಂತ್ರವನ್ನು ಮೇಲಕ್ಕೆ ತರಲಾಯಿತು. ಮತಗಟ್ಟೆಯಲ್ಲಿ ಬದಲಿ ಯಂತ್ರ ಅಳವಡಿಸಿ ಮತದಾನ ಆರಂಭಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.