ADVERTISEMENT

ಮನರಂಜನೆ, ವ್ಯಕ್ತಿತ್ವ ವಿಕಸನ, ನೈರ್ಮಲ್ಯ

ಎಚ್.ಎಸ್.ಅನಿಲ್ ಕುಮಾರ್
Published 13 ಅಕ್ಟೋಬರ್ 2012, 5:35 IST
Last Updated 13 ಅಕ್ಟೋಬರ್ 2012, 5:35 IST

ಹಳೇಬೀಡು: ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯದಲ್ಲಿ ತೊಡಗಿದರೆ ಹಳ್ಳಿಗಳ ಚಿತ್ರಣವನ್ನೇ ಬದಲಾಯಿಸಬಹುದು. ಜೊತೆಗೆ ಉತ್ತಮ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬಹುದು ಎಂಬುದನ್ನು ಹಳೇಬೀಡು ಸರ್ಕಾರಿ ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕರ್ತರು ಐತಿಹಾಸಿಕ ಗ್ರಾಮ ಚಟಚಟ್ಟಿಹಳ್ಳಿ ಯಲ್ಲಿ ನಡೆಯುತ್ತಿರುವ ಎನ್‌ಎಸ್‌ಎಸ್ ವಿಶೇಷ ಶಿಬಿರದಲ್ಲಿ ಸಾಧಿಸಿ ತೋರಿಸಿದ್ದಾರೆ.

 ಕಾಲೇಜಿನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ರಾಮದಲ್ಲಿ ವಾಸ್ತವ್ಯ ಹೂಡಿ, ಚೈತನ್ಯದ ಚಿಲುಮೆಗಳಂತೆ ಅಗತ್ಯ ಕೆಲಸ ಕೈಗೊಂಡಿದ್ದಾರೆ. ಊರಿನ ಜನರಿಗೆ ಪ್ರೀತಿ ಪಾತ್ರರಾಗಿದ್ದಾರೆ. ಮುಂಜಾನೆಯಿಂದ ಸಂಜೆವರೆಗೆ ಹಳ್ಳಿಯ ಶ್ರೇಯೋಭಿವೃದ್ದಿಗಾಗಿ ದುಡಿಯುತ್ತಿರುವ ಶಿಬಿರಾರ್ಥಿಗಳು ಸಂಜೆ ನಡೆಯುವ ವಿಚಾರಗೋಷ್ಠಿಗಳಲ್ಲಿ ಜ್ಞಾನಾರ್ಜನೆ ಮಾಡುತ್ತ, ಕೃಷಿ ಕಾಯಕದೊಂದಿಗೆ ದಣಿದು ಬರುವ ಹಳ್ಳಿಗರಿಗೆ ಮನರಂಜನೆ ನೀಡುತ್ತಿದ್ದಾರೆ. 

ಪೆನ್ನು ಹಿಡಿಯುವ ಕೈಗಳು ಹಾರೆ, ಪಿಕಾಸಿ ಹಿಡಿದು ಮಣ್ಣು ರಸ್ತೆ ನಿರ್ಮಾಣ, ಚರಂಡಿ ದುರಸ್ತಿ, ಸ್ವಚ್ಚತೆ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಹಿಂದೆ ಅಡುಗೆ ಮನೆಯಲ್ಲಿ ಸೌಟು ಹಿಡಿಯುವುದಕ್ಕೆ ಮಾತ್ರ ಸಿಮೀತ ಎಂದು ಕರೆಸಿಕೊಳ್ಳುತ್ತಿದ್ದ ಹೆಣ್ಣುಮಕ್ಕಳು ಸಹ ಗುದ್ದಲಿ ಪಿಕಾಸಿ ಹಿಡಿದು ಶ್ರಮದಾನ ಮಾಡುತ್ತ ಸೈ ಎನಿಸಿಕೊಂಡಿದ್ದಾರೆ.

ಪ್ರಾಚಾರ್ಯ ಎಚ್.ಆರ್. ನಾಗರಾಜಪ್ಪ, ಶಿಬಿರಾಧಿಕಾರಿ ಶಿವಕುಮಾರ್, ಸಹಾಯಕ ಶಿಬಿರಾಧಿಕಾರಿಗಳಾದ ಹಾಲಸಿದ್ದಪ್ಪ, ಮೋಹನ್ ಕುಮಾರ್ ಶಿಬಿರಾರ್ಥಿಗಳನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.