ADVERTISEMENT

ಮಳೆ; ಸಂತಸದ ಜತೆಗೆ ಆತಂಕ!

​ಪ್ರಜಾವಾಣಿ ವಾರ್ತೆ
Published 27 ಜುಲೈ 2013, 7:24 IST
Last Updated 27 ಜುಲೈ 2013, 7:24 IST
ಸಕಲೇಶಪುರ ತಾಲ್ಲೂಕಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಾವಿನೂರು ಗ್ರಾಮದಲ್ಲಿ ಅತಿಯಾದ ಮಳೆಯಿಂದಾಗಿ ಏಲಕ್ಕಿ ಬೆಳೆ ಕೊಳೆ ರೋಗಕ್ಕೆ ತುತ್ತಾಗಿರುವುದು.
ಸಕಲೇಶಪುರ ತಾಲ್ಲೂಕಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಾವಿನೂರು ಗ್ರಾಮದಲ್ಲಿ ಅತಿಯಾದ ಮಳೆಯಿಂದಾಗಿ ಏಲಕ್ಕಿ ಬೆಳೆ ಕೊಳೆ ರೋಗಕ್ಕೆ ತುತ್ತಾಗಿರುವುದು.   

ಸಕಲೇಶಪುರ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ ಪಶ್ಚಿಮ ಘಟ್ಟದ ಮಳೆ ಕಾಡುಗಳ ಅಂಚಿನಲ್ಲಿ ರುವ 100ಕ್ಕೂ ಹೆಚ್ಚು ಗ್ರಾಮಗಳ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆಗೆ ಸರಾಸರಿ 3180 ಮಿ.ಮೀ. ದಾಖಲೆ ಮಳೆಯಾಗಿದೆ.

ಗೊದ್ದು, ವಣಗೂರು, ಬಿಸಿಲೆ, ಪಟ್ಲ, ಮಾವಿನೂರು, ಕಾಗಿನಹರೆ, ಹೊಂಗಡಹಳ್ಳ, ಅತ್ತಿಹಳ್ಳಿ, ಮೂಕನ ಮನೆ, ಮಾರನಹಳ್ಳಿ, ಕಾಡುಮನೆ, ಅಗನಿ, ದೇವಲಕೆರೆ ಈ ಗ್ರಾಮಗಳ 15 ಕಿ.ಮೀ. ವ್ಯಾಪ್ತಿಯಲ್ಲಿ ಜೂನ್ ಎರಡನೇ ವಾರದಿದ ಜುಲೈ ಮೂರನೆ ವಾರದವರೆಗೆ ಬಿಡುವಿಲ್ಲದೇ ಸುರಿದಿದೆ.

ಪಶ್ಚಿಮಘಟ್ಟದ ಬಿಸಿಲೆ, ಕಾಗಿನಹರೆ, ಕೆಂಪುಹೊಳೆ, ಬಾಜೇಮನೆ, ಮೂರು ಕಣ್ಣುಗುಡ್ಡ ರಕ್ಷಿತ ಅರಣ್ಯ ಪ್ರದೇಶ ಗಳಿಗೆ ಹೊಂದಿಕೊಂಡಿರುವ ಅತ್ತಿಹಳ್ಳಿ, ಹೊಂಗಡಹಳ್ಳ, ಕಾಗಿನಹರೆ, ಮೂಕನ ಮನೆ, ಕಾಡ ಮನೆ, ಶಿರಾಡಿ, ಆ ಭಾಗದಲ್ಲಿ 3600 ಮಿ.ಮೀ. (150 ಇಂಚು) ಮಳೆಯಾಗಿದೆ.

`15 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜುಲೈ ಮೂರನೆ ವಾರದೊಳಗೆ 3180 ಮಿ.ಮೀ. ಮಳೆಯಾಗಿದೆ' ಎಂದು ಅತ್ತಿಹಳ್ಳಿ ಗ್ರಾಮದ ರೈತ ಸುಬ್ಬಣ್ಣ `ಪ್ರಜಾವಾಣಿ'ಗೆ ಹೇಳುತ್ತಾರೆ.

ಇನ್ನು ಹೆತ್ತೂರು, ಯಸಳೂರು, ಕ್ಯಾನಹಳ್ಳಿ, ಹಾನುಬಾಳು, ಹುರುಡಿ ಈ ಭಾಗದಲ್ಲಿ ಸರಾಸರಿ 2400 ಮಿ.ಮೀ. ಮಳೆಯಾಗಿರುವುದಾಗಿ ವರದಿಯಾ ಗಿದೆ. ಜುಲೈ ಮೂರನೆ ವಾರಕ್ಕೆ, ಕಳೆದ ವರ್ಷಕ್ಕಿಂತ ಈ ಬಾರಿ ಶೇ.40ಕ್ಕೂ ಹೆಚ್ಚು ಪ್ರಮಾಣದಲ್ಲಿ  ಅಧಿಕ ಮಳೆಯಾಗಿದೆ.
ಸಕಲೇಶಪುರ, ಬಾಳ್ಳುಪೇಟೆ, ಬೆಳ ಗೋಡು, ಸುಂಡೇಕರೆ ಈ ಭಾಗ ದಲ್ಲಿಯೂ ಸಹ ಅಧಿಕ ಮಳೆಯಾಗಿದೆ.

`ಧಾರಾಕಾರವಾಗಿ ಸುರಿಯುತ್ತಿದೆ. ಇದರಿಂದ ಕಾಫಿ, ಏಲಕ್ಕಿ, ಕಾಳು ಮೆಣಸು ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗಿವೆ. ಒಂದು ವಾರ ಸತತ ಮಳೆ ಬಿದ್ದು, ನಡುವೆ ಒಂದೆರಡು ದಿನ ಬಿಡುವು ನೀಡಿದ್ದರೆ ಗಿಡದ ಎಲೆಗಳು ಹಾಗೂ ಕಾಯಿಗಳ ಮೇಲೆ ಇದ್ದ ನೀರು ಆರುವುದಕ್ಕೆ ಸಾಧ್ಯವಾಗುತ್ತಿತ್ತು. ಜುಲೈ ಎರಡನೇ ವಾರದಿಂದ ಒಂದು ದಿನವೂ ಸಹ ಬಿಡುವು ನೀಡದಂತೆ ಧಾರಾಕಾರವಾಗಿ ಮಳೆ ಸುರಿಯುತ್ತಿ ರುವುದರಿಂದ ಎಲೆ ಹಾಗೂ ಕಾಯಿಗಳ ತೊಟ್ಟುಗಳು ಕರಗಿ, ಶೇ.50ಕ್ಕೂ ಹೆಚ್ಚು ಭಾಗ ಕೊಳೆರೋಗಕ್ಕೆ ತುತ್ತಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ' ಎಂದು ಅತ್ತಿಹಳ್ಳಿ ಗ್ರಾಮದ ರೈತ ರಾಮಣ್ಣ ಹೇಳುತ್ತಾರೆ.

`ಭತ್ತದ ಬೆಳೆ ನಾಟಿ ಮಾಡಲು ಇದು ಸಕಾಲವಾಗಿದ್ದು, ತಾಲ್ಲೂಕಿನ ಬಹುತೇಕ ಎಲ್ಲಾ ಗದ್ದೆ ಮಳೆ ನೀರಿನಿಂದ ಜಲಾವೃತಗೊಂಡಿವೆ. ಉಳುಮೆ ಮಾಡಿ, ಭೂಮಿಯನ್ನು ನಾಟಿಗೆ ಸಿದ್ಧ ಗೊಳಿಸುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಬಾಗರಹಳ್ಳಿ ರೈತ ಬಿ.ಆರ್.ವೆಂಕಟೇಶ್ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.