ಚಿಕ್ಕಮಗಳೂರು: ನೆರೆಯ ಶಿವಮೊಗ್ಗ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಜೆಡಿಎಸ್ ಪಕ್ಷ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಟಾಂಗ್ ನೀಡಲು ಹೊರಟಿದ್ದರೆ, ಇತ್ತ ಕಡೂರು ಕ್ಷೇತ್ರ ಒಳಗೊಂಡ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಬಿಜೆಪಿ ಮಹಿಳಾ ಅಭ್ಯರ್ಥಿ ಕಣಕ್ಕಿಳಿಸಿ ‘ಮುಯ್ಯಿಗೆ ಮುಯ್ಯಿ’ ಎನ್ನುವ ಸಂದೇಶ ಸಾರಲು ಹೊರಟಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚಿತವಾಗುತ್ತಿವೆ.
ಯಡಿಯೂರಪ್ಪ ವಿರುದ್ಧ ಕಣಕ್ಕಿಳಿದಿರುವ ಗೀತಾ ಶಿವರಾಜ್‌ಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರಿ ಮತ್ತು ಶಾಸಕ ಮಧು ಬಂಗಾರಪ್ಪ ಸಹೋದರಿ ಎನ್ನುವ ರಾಜಕೀಯ ಹಿನ್ನೆಲೆ ಜತೆಗೆ ಖ್ಯಾತ ಸಿನಿಮಾ ನಟರೆನಿಸಿದ ಪತಿ ಶಿವರಾಜ್‌ಕುಮಾರ್ ಅವರ ತಾರಾ ವರ್ಚಸ್ಸು ಇದೆ.
ಆದರೆ, ಇತ್ತ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ತೃತೀಯ ರಂಗದ ನಾಯಕ ಎಚ್.ಡಿ.ದೇವೇಗೌಡರ ವಿರುದ್ಧ ಬಿಜೆಪಿ ಕಣಕ್ಕಿಳಿಸಿರುವ ಅಭ್ಯರ್ಥಿ ರೇಖಾ ಹುಲಿಯಪ್ಪಗೌಡರಿಗೆ ಗೀತಾ ಅವರಷ್ಟು ‘ಪ್ರಭಾವಿ ರಾಜಕೀಯ ಹಿನ್ನೆಲೆ’ ಇಲ್ಲವೆನ್ನವುದು ಖರೆ.
ಆದರೆ, ರೇಖಾ ಅವರು ಈಗ ರಾಷ್ಟ್ರೀಯ ಪಕ್ಷವೆನಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹುದ್ದೆಯಲ್ಲಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ತೆಂಗು ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದರು. ಅಲ್ಲದೆ 15 ತಿಂಗಳ ಅವಧಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಉಡುಪಿ–ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆ ಸಂದರ್ಭದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡೂರು ಕ್ಷೇತ್ರಕ್ಕೆ ಪಕ್ಷದ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದರು. 2004 ವಿಧಾನಸಭಾ ಚುನಾವಣೆಯಲ್ಲಿ ಬೀರೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆನಂತರದ ಯಾವುದೇ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆಯಿಂದ ಟಿಕೆಟ್‌ಗೆ ಪ್ರಯತ್ನಿಸಿದರೂ ಟಿಕೆಟ್ ಪಡೆಯಲು ಸಫಲರಾಗಿರಲಿಲ್ಲ. ಈ ಬಾರಿ ’ಬಯಸದೆ ಬಂದ ಭಾಗ್ಯ’ದಂತೆ ನೇರ ಲೋಕಸಭೆ ಚುನಾವಣೆಗೆ ಟಿಕೆಟ್ ಸಿಕ್ಕಿದೆ.
ಮೈಸೂರಿನ ಸಿ.ಎಚ್.ವಿಜಯ್ಶಂಕರ್ ಹಾಸನ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರಾಕರಿಸುತ್ತಿದ್ದಂತೆ ಮೊನ್ನೆವರೆಗೂ ನವಿಲೆ ಅಣ್ಣಪ್ಪ ಹೆಸರು ಬಿಜೆಪಿ ಅಭ್ಯರ್ಥಿ ಪಟ್ಟಿಯಲ್ಲಿತ್ತು. ಮೂರು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಿಕ್ಕಮಗಳೂರಿಗೆ ಶೋಭಾ ಕರಂದ್ಲಾಜೆ ಜತೆ ಪರ ಪ್ರಚಾರ ನಡೆಸಲು ಭೇಟಿ ನೀಡಿದ್ದವರು ಸುಮ್ಮನೆ ಮಾತಿಗೆ ‘ಏನಮ್ಮ ರೇಖಾ ಹಾಸನ ಕ್ಷೇತ್ರಕ್ಕೆ ಟಿಕೆಟ್ ಕೊಟ್ಟರೆ ನಿಲ್ತೀಯಾ!’ ಅಂದ್ರು, ಅಷ್ಟಕ್ಕೆ ರೇಖಾ ಅವರು ಹಿಂದುಮುಂದು ಯೋಚಿಸದೆ ಸೈ ಅಂದ್ರು. ಅಭ್ಯರ್ಥಿ ಪಟ್ಟಿ ಬದಲಾಗಿ ದೆಹಲಿಗೆ ಹೋಗಿಯೇ ಬಿಡ್ತು. ಹಾಸನ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಹ ತಕರಾರು ತೆಗೆಯಲಿಲ್ಲ. ವಿಜಯ ಶಂಕರ್ ಬರಲು ಒಲ್ಲೆ ಅಂದಮೇಲೆ ‘ನಮಗೆ ಅಣ್ಣಪ್ಪ ಆದರೇನು, ಅಣ್ಣಮ್ಮ ಆದ್ರೇನು! ಒಟ್ಟಿನಲ್ಲಿ ಅಭ್ಯರ್ಥಿ ಕಣಕ್ಕಿಳಿಸಿ ಸಾಕು ಅಂದ್ರು’ ಎನ್ನುತ್ತಾರೆ ಬಿಜೆಪಿ ಮುಖಂಡರೊಬ್ಬರು.
ರಾಜ್ಯದಲ್ಲಿ ಬಿಜೆಪಿ ಈ ಬಾರಿ ಲೋಕಸಭೆ ಚುನಾವಣೆಗೆ ಹಂಚಿಕೆ ಮಾಡಿದ ಟಿಕೆಟ್‌ಗಳಲ್ಲಿ ಕುರುಬ ಸಮುದಾಯದ ಕೋಟಾ ಭರ್ತಿ ಮಾಡಿರಲಿಲ್ಲ. ಅತ್ತ ಮೈಸೂರಿನಲ್ಲಿ ವಿಜಯಶಂಕರ್‌ಗೆ ಟಿಕೆಟ್ ‘ತಪ್ಪಿಸಿದ’ ಮೇಲೆ ಅವರನ್ನು ಹಾಸನಕ್ಕೆ ತರುವ ಪ್ರಯತ್ನವೂ ಫಲಿಸಲಿಲ್ಲ. ಇದರಿಂದ ಕುರುಬ ಸಮುದಾಯವನ್ನು ಬಿಜೆಪಿ ಕಡೆಗಣಿಸಿದಂತಾಗಿದೆ ಎನ್ನುವ ಸಂದೇಶ ರಾಜ್ಯಕ್ಕೆ ಹೋಗುವುದು ಬೇಡ ಎನ್ನುವುದು ಪಕ್ಷದ ಎಚ್ಚರಿಕೆ ನಡೆ. ಅಷ್ಟಕ್ಕೂ ಹಾಸನದಲ್ಲಿ ದೇವೇಗೌಡರ ವಿರುದ್ಧ ಕುರುಬ ಸಮುದಾಯದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಬೇಕಾದರೆ ಕೆ.ಎಸ್.ಈಶ್ವರಪ್ಪ ಅವರನ್ನೇ ಕರೆತಂದು ನಿಲ್ಲಿಸಬೇಕಿತ್ತು. ಆದರೆ, ಈಶ್ವರಪ್ಪ ಅಂತಹ ಹುಂಬುತನಕ್ಕೆ ಕಟ್ಟುಬೀಳುವವರಲ್ಲ. ಕುರುಬ ಸಮುದಾಯದ ರೇಖಾ ಅವರನ್ನು ಹಾಸನದಲ್ಲಿ ಕಣಕ್ಕಿಳಿಸಿದರೆ ಕೋಟಾ ಭರ್ತಿ ಮಾಡಿದಂತೆಯೂ ಆಯಿತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಲಭವಾಗಿ ಕುರುಬರ ಮತಗಳನ್ನು ಶೋಭಾಗೆ ಒಲಿಯುವಂತೆಯೂ ಮಾಡಬಹುದು. ತಮ್ಮ ವಿರುದ್ಧ ಶಿವಮೊಗ್ಗದಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ ಟಾಂಗ್ ನೀಡಿರುವ ದೇವೇಗೌಡರಿಗೂ ಟಾಂಗ್ ಕೊಟ್ಟಂತಾಯಿತು ಎನ್ನುವ ಲೆಕ್ಕಾಚಾರದಲ್ಲಿ ಯಡಿಯೂರಪ್ಪ ಈ ದಾಳ ಉರುಳಿಸಿದ್ದಾರೆ ಎನ್ನುವುದು ಬಿಜೆಪಿ ಒಳಗಿನವರ ಮಾತುಗಳು.
ಒಟ್ಟಿನಲ್ಲಿ ಕಡೂರು ಭಾಗದಲ್ಲಿ ಸ್ವಲ್ಪಮಟ್ಟಿನ ಪ್ರಭಾವ ಹೊಂದಿರುವ ರೇಖಾ, ‘ಅರಸೀಕೆರೆ ತಾಲ್ಲೂಕಿನ ಜಾವಗಲ್ ತನ್ನ ತವರೂರು, ಬೇಲೂರು ಮತ್ತು ಅರಸೀಕೆರೆಯಲ್ಲಿ ತಮಗೆ ಜನರ ಒಟನಾಟ ಇದೆ. ಅಲ್ಲದೆ ಮೋದಿ ಅಲೆ ಮತ್ತು ಮಹಿಳೆಯರ ಆಶೀರ್ವಾದ ನನ್ನ ಗೆಲುವಿಗೆ ಶ್ರೀರಕ್ಷೆಯಾಗುತ್ತದೆ’ ಎನ್ನುವ ವಿಶ್ವಾಸದಲ್ಲಿದ್ದಾರೆ.
ಒಟ್ಟಿನಲ್ಲಿ ಮೂಲ ಜೆಡಿಎಸ್‌ನಿಂದ ರಾಜಕೀಯ ಜೀವನ ಆರಂಭಿಸಿದ ರೇಖಾ ಹುಲಿಯಪ್ಪಗೌಡರು, ತಮ್ಮ ಆರಂಭದ ರಾಜಕೀಯ ಗುರುಗಳಾದ ದೇವೇಗೌಡರ ವಿರುದ್ಧ ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.