ADVERTISEMENT

ಮೂಢನಂಬಿಕೆ ಹೆಚ್ಚಿಸುತ್ತಿರುವ ಮಾಧ್ಯಮಗಳು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2011, 9:05 IST
Last Updated 23 ಮಾರ್ಚ್ 2011, 9:05 IST

ಅರಕಲಗೂಡು: ‘ವೈಜ್ಞಾನಿಕ ಆವಿಷ್ಕಾರಗಳು ಹೆಚ್ಚಿದಂತೆ ಜನರಲ್ಲಿ ಮೌಢ್ಯತೆ ಹೆಚ್ಚುತ್ತಿರುವುದು ವಿಷಾದಕರ  ಸಂಗತಿಯಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸಂತೋಷ್‌ಗೌಡ ತಿಳಿಸಿದರು. ಭಾರತ ಜ್ಞಾನ ವಿಜ್ಞಾನ ಸಮಿತಿ ಮಂಗಳವಾರ ಶಿಕ್ಷಕರ ಭವನದಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು  ಉದ್ಘಾಟಿಸಿ ಮಾತನಾಡಿದರು.‘ಮೂಢನಂಬಿಕೆಗಳಿಗೆ ಬಲಿಯಾಗಿ ಬಹಳಷ್ಟು ಜನರು ಸಂಕಷ್ಟ ಹಾಗೂ ತೊಂದರೆಗಳಿಗೆ ಒಳಗಾಗಿದ್ದಾರೆ.  ಇವರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯ ಬೇಕಿದೆ. ಈ ನಿಟ್ಟಿನಲ್ಲಿ ಇಂತಹ ವಿಚಾರ ಸಂಕಿರಣಗಳು  ಪ್ರಸ್ತುತವಾಗಿದೆ’ ಎಂದು ಹೇಳಿದರು. 

‘ಮೂಢನಂಬಿಕೆ ಮತ್ತು ವೈಜ್ಞಾನಿಕ ಮನೋಭಾವ’ ವಿಷಯ ಕುರಿತು ರಾಜ್ಯ ಬಿಜೆವಿಎಸ್‌ನ ಉಪಾಧ್ಯಕ್ಷ  ಬಸವರಾಜ್ ಮಾತನಾಡಿ ‘ಜನರಿಗೆ ವೈಜ್ಞಾನಿಕ ಮಾಹಿತಿ ನೀಡಬೆಕಾದ ಮಾಧ್ಯಮಗಳು ಜ್ಯೋತಿಷ್ಯದಂತಹ  ಕಾರ್ಯಕ್ರಮಗಳ ಮೂಲಕ ಜನರನ್ನು ಭಯಪಡಿಸುತ್ತಿವೆ. ಜ್ಯೋತಿಷಿಗಳು ಭಯೋತ್ಪಾದಕರಾಗಿದ್ದಾರೆ’ ಎಂದು ಟೀಕಿಸಿದರು.

ಜಿಲ್ಲಾ ಬಿಜೆವಿಎಸ್‌ನ ಕಾರ್ಯ ದರ್ಶಿ ಎಚ್.ಎ.ಅಹಮದ್ ಮಾತ ನಾಡಿ ‘ಪ್ರಳಯದ ಕುರಿತು ಅತಿರಂಜಿ ತವಾದ   ಕಲ್ಪನೆಗಳನ್ನು ಹರಿಯ ಬಿಟ್ಟು ಜನರಲ್ಲಿ ಭಯ, ಆತಂಕ ಮೂಡಿಸಲಾಗುತ್ತಿದೆ. ಇವೆಲ್ಲ ಕಪೋಲ ಕಲ್ಪಿತ ಸುದ್ದಿಗಳಾಗಿದ್ದು ಜನರು ಭೀತಿ ಪಡುವ ಅಗತ್ಯವಿಲ್ಲ’ ಎಂದರು. ಜಿಲ್ಲಾ ಬಿಜೆವಿಎಸ್ ಉಪಾಧ್ಯಕ್ಷ ಎಚ್.ಟಿ.ಗುರುರಾಜ್, ಬಾಲಕರ ಪಿಯು ಕಾಲೇಜಿನ ಉಪ ಪ್ರಾಂಶು ಪಾಲ ಈಶ್ವರ್, ತಾಲ್ಲೂಕು ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಕಾರ್ಯ ದರ್ಶಿ ಮಂಜೇಗೌಡ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.