ಆಲೂರು: ಪಟ್ಟಣಕ್ಕೆ ಹತ್ತಿರ ಇದ್ದರೂ ಮೂಲಭೂತ ಸವಲತ್ತುಗಳ ಕೊರತೆಯಿಂದ ನಲುಗುತ್ತಿದೆ ಹಂತನಮನೆ ಗ್ರಾಮ. ಈ ಗ್ರಾಮ ಪಟ್ಟಣಕ್ಕೆ ಒಂದು ಕಿ.ಮೀ ದೂರದಲ್ಲಿದೆ. ಈ ಊರಿನ ರಸ್ತೆಗಳ ಸ್ಥಿತಿ ತೀರಾ ಹದಗೆಟ್ಟಿದೆ. ಇಲ್ಲಿನ ಪ್ರಾಥಮಿಕ ಶಾಲೆಯಲ್ಲಿ ಎರಡು ಕೊಠಡಿಗಳಿದ್ದು ಇವುಗಳಲ್ಲಿ ಒಂದು ಕೊಠಡಿ ಶಿಥಿಲಾವಸ್ಥೆ ತಲುಪಿದೆ. ಚರಂಡಿಗಳ ಅವ್ಯವಸ್ಥೆಯಿಂದಾಗಿ, ಮಳೆಗಾಲದಲ್ಲಿ ಬೀದಿಗಳು ಕೆಸರುಗದ್ದೆಯಂತಾಗುತ್ತವೆ.
ಊರಿನಲ್ಲಿ 130 ಕುಟುಂಬಗಳು ಇದ್ದು, 1300 ಜನಸಂಖ್ಯೆ ಹೊಂದಿದೆ. ಈ ಗ್ರಾಮ ಹುಣಸವಳ್ಳಿ ಗ್ರಾಮ ಪಂಚಾಯ್ತಿಗೆ ಸೇರಿದೆ. ಗ್ರಾಮದ ಪಕ್ಕದಲ್ಲಿ ವಾಟೇಹೊಳೆ ಬಲದಂಡೆ ಮೂರು ಕಡೆ ನಾಲೆ ಇದೆ. ಊರಿನ ಪಕ್ಕದಲ್ಲಿಯೇ ಹಾಸನ ಮಂಗಳೂರು ರೈಲು ಹಳಿ ಇದೆ. ರೈಲು ನಿಲ್ದಾಣಕ್ಕೆ ವ್ಯವಸ್ಥ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ. ಗ್ರಾಮದಲ್ಲಿ ಸ್ವಚ್ಛತೆ ಕೊರತೆ ಇದೆ.
ಎಲ್ಲ ರೀತಿಯ ಸಂಕಷ್ಟ ಅನುಭವಿಸುತ್ತಿರುವ ನಿವಾಸಿಗಳು ಮತ್ತು ರೈತರ ಬದುಕು ಚಿಂತಾಜನಕವಾಗಿದೆ. ಜನಪ್ರತಿನಿಧಿ ಗಳು ಇತ್ತ ಗಮನ ಹರಿಸಿ ಪ್ರಸ್ತುತ ಸಮಸ್ಯೆಗಳನ್ನು ನಿವಾರಿಸುವ ಅಗತ್ಯವಿದೆ ಮತ್ತು ಹಂತನಮನೆ ಗ್ರಾಮಕ್ಕೆ ಸೇರಿದ ಕೆಲವು ಮನೆಗಳು ರಸ್ತೆ ಬದಿಯಲ್ಲಿ ಇದ್ದು ಅ ಮನೆಗಳ ಮುಂಭಾಗದಲ್ಲಿ ಪೆಟ್ರೋಲ್ ಬಂಕ್ ಇದ್ದು ಮಳೆಗಾಲದಲ್ಲಿ ಬಿದ್ದ ನೀರು ಮನೆಗಳ ಮುಂದೆ ಹರಿಯುವುದರಿಂದ ಇಲ್ಲಿ ಚರಂಡಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಅಳಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.