ADVERTISEMENT

ರಕ್ತಪಾತದ ಸಂಸ್ಕೃತಿಗೆ ತಿಲಾಂಜಲಿ ನೀಡಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 7:30 IST
Last Updated 19 ಜನವರಿ 2011, 7:30 IST

ಹಾಸನ: ‘ನಮ್ಮ ಸಮಾಜದಲ್ಲಿ ವೈವಿಧ್ಯದಷ್ಟೇ ವೈರುಧ್ಯಗಳೂ ಇವೆ. ಬಹುಸಂಸ್ಕೃತಿಯ ಸಮಾಜದಲ್ಲಿ ಶಾಂತಿ, ಸೌಹಾರ್ದದಿಂದ ಎಲ್ಲರೂ ಬದುಕಬೇಕಾದರೆ ಎಲ್ಲ ರೀತಿಯ ಚಿಂತನೆಗಳ ನಡುವೆ ಆರೋಗ್ಯಕರ ಸಂವಾದ ನಡೆಸುವುದು ಅಗತ್ಯ’ ಎಂದು ಮಹಮ್ಮದ್ ಕುಞ್ಞೆ ನುಡಿದರು.

ಜಮಾತೆ ಇಸ್ಲಾಂ ಸಂಘಟನೆಯವರು ಇಲ್ಲಿಯ ಕಲಾಭವನದಲ್ಲಿ ಆಯೋಜಿಸಿದ್ದ ಮೂರು ದಿನಗಳ ಕುರ್‌ಆನ್ ಪ್ರವಚನ (ಕನ್ನಡದಲ್ಲಿ) ಕಾರ್ಯಕ್ರಮದಲ್ಲಿ ಅವರು ಮೊದಲ ದಿನದ ಪ್ರವಚನ ನೀಡಿದರು.

‘ಏಕದೇವೋಪಾಸನೆ, ಬಹುದೇವೋಪಾಸನೆಗಳ ಜನರ ಜತೆಗೆ ನಾಸ್ತಿಕರೂ ನಮ್ಮ ಸಮಾಜದಲ್ಲಿದ್ದಾರೆ. ಎಲ್ಲರೂ ಜತೆಯಾಗಿಯೇ ಬಾಳಬೇಕು. ಸಮಾಜದಲ್ಲಿ ಎಲ್ಲ ಚಿಂತನೆಗಳಿಗೂ ಸ್ಥಾನವಿದೆ. ಈಗಾಗಲೇ ನಮ್ಮ ಸಮಾಜ ಕೆಟ್ಟ ಹಾದಿ ಹಿಡಿದಿದೆ. ಮುಂದಿನ ತಲೆಮಾರಿಗೆ ಒಳ್ಳೆಯ ಮೌಲ್ಯಗಳನ್ನು ನೀಡಬೇಕು ಎಂಬ ಉದ್ದೇಶದಿಂದ ಜಮಾತೆ ಇಸ್ಲಾಂ ಸಂಸ್ಥೆ ಕುರ್‌ಆನ್ ಪ್ರವಚನಗಳನ್ನು ಏರ್ಪಡಿಸುತ್ತಿದೆ. ರಕ್ತಪಾತ, ಹೊಡಿಬಡಿ ಸಂಸ್ಕೃತಿಯ ಸಮಾಜವನ್ನು ನಾವು ಸೃಷ್ಟಿಸಬಾರದು ಎಂದು ಅವರು ನುಡಿದರು.

‘ಕುರ್‌ಆನ್ ಪ್ರವಾದಿ ಮಹಮ್ಮದ್ ಬರೆದ ಗ್ರಂಥವಲ್ಲ. ಅದು ಶ್ರೇಷ್ಠವಾದ ದೈವಿಕ ಗ್ರಂಥ. ಅದರ ಸಾರ್ವಕಾಲಿಕತೆ, ಅಲ್ಲಿ ಬಳಕೆಯಾದ ಭಾಷೆ, ಅದರಲ್ಲಿ ವಿವರಿಸಿರುವ ಶ್ರೇಷ್ಠ ಮೌಲ್ಯಗಳು ಇದನ್ನು ಸಾರುತ್ತವೆ. ಕುರ್‌ಆನ್ ದೈವಿಕ ಗ್ರಂಥ ಎಂಬುದಕ್ಕೆ ಆ ಗ್ರಂಥವೇ ಶ್ರೇಷ್ಠ ಪುರಾವೆ ಎಂದರು.

ಮೊದಲನೆಯ ದಿನ ‘ಕುರ್‌ಆನ್ ನಲ್ಲಿ ಮಾನವ ಹಕ್ಕುಗಳು’ ವಿಷಯದ ಬಗ್ಗೆ ಪ್ರವಚನ ನೀಡಿದ ಮಹಮ್ಮದ್ ಕುಞ್ಞೆ, ‘ಮಾನವ ಹಕ್ಕುಗಳ ಬಗ್ಗೆ ಸಾಮಾಜಿಕವಾಗಿ ಅತ್ಯಂತ ವಿಸ್ತಾರವಾಗಿ ಚಿಂತನೆ ನಡೆದಿದ್ದು 21ನೇ ಶತಮಾನದಲ್ಲಿ. ದುರಂತವೆಂದರೆ ಅತಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವುದೂ ಇದೇ ಶತಮಾನದಲ್ಲಿ. ಮಾನವ ಹಕ್ಕುಗಳ ಬಗ್ಗೆ ಯಾವುದೇ ಗೌರವ, ಕಾಳಜಿ ಇಲ್ಲದಿರುವ ಅಮೆರಿಕ ಹಕ್ಕುಗಳ ಬಗ್ಗೆ ಜಗತ್ತಿಗೆ ಬೋಧನೆ ಮಾಡುತ್ತಿದೆ. ಇದು ವಿಶ್ವಕ್ಕೆ ಅಪಾಯಕಾರಿ ಎಂದ ಅವರು, ಕುರ್‌ಆನ್ 6ನೇ ಶತಮಾನದಲ್ಲೇ ಮಾನವ ಹಕ್ಕುಗಳ ಬಗ್ಗೆ ಪ್ರತಿಪಾದನೆ ಮಾಡಿದೆ ಎಂದರು.

ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿದ ಜವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ, ‘ಸಂಕುಚಿತ ಮನೋಭಾವವನ್ನು ತೊರೆದರೆ ಎಲ್ಲರೂ ಶಾಂತಿಯಿಂದ ಸಹಬಾಳ್ವೆ ನಡೆಸಬಹುದು. ಎಲ್ಲರೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಧರ್ಮ ಪಾಲನೆಯಷ್ಟೇ ಮಾನವೀಯ ಮೌಲ್ಯಗಳ ಅಳವಡಿಕೆಯೂ ಮುಖ್ಯ’ ಎಂದರು.

‘ಸಂಕುಚಿತ ಭಾವನೆಯಿಂದಾಗಿಯೇ ಕುರಾನ್ ಬಗ್ಗೆ ತಪ್ಪು ಕಲ್ಪನೆ ಮೂಡಿದೆ. ಆ ಗ್ರಂಥ ಉತ್ಕೃಷ್ಟ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಸತ್ತಮೇಲೆ ನಾವೆಲ್ಲರೂ ಒಂದೇಕಡೆ ಹೋಗಬೇಕಾಗಿರುವುದರಿಂದ ಇರುವಾಗ ಕಿತ್ತಾಡುವುದು ಸರಿಯಲ್ಲ. ಎಲ್ಲ ಧರ್ಮಗಳದ್ದೂ ಗುರಿ ಒಂದೇ ಆಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.